ಸಾರಾಂಶ
ತಾಲೂಕಿನ ಸುಶೀಲಾನಗರ, ದೌಲತ್‌ಪುರ, ಕೃಷ್ಣಾನಗರ ಹಾಗೂ ಭುಜಂಗನಗರಗಳಲ್ಲಿ ರೈಲ್ವೆ ಲೈನ್ ಹಾಗೂ ಸೈಡಿಂಗ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಈ ಗ್ರಾಮಗಳ ಹಲವು ರೈತರು ಶನಿವಾರ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಡೂರಿನಲ್ಲಿ ರೈಲ್ವೆ ಲೈನ್, ಸೈಡಿಂಗ್ ನಿರ್ಮಾಣಕ್ಕೆ ಭೂಸ್ವಾಧೀನ-ವಿರೋಧ
ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನ ಸುಶೀಲಾನಗರ, ದೌಲತ್‌ಪುರ, ಕೃಷ್ಣಾನಗರ ಹಾಗೂ ಭುಜಂಗನಗರಗಳಲ್ಲಿ ರೈಲ್ವೆ ಲೈನ್ ಹಾಗೂ ಸೈಡಿಂಗ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಈ ಗ್ರಾಮಗಳ ಹಲವು ರೈತರು ಶನಿವಾರ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ರೈತ ಮುಖಂಡ ವಿ.ಜೆ. ಶ್ರೀಪಾದಸ್ವಾಮಿ, ರಾಮಘಡದಿಂದ ತೋರಣಗಲ್ಲು ವರೆಗೆ ರೈಲ್ವೆ ಲೈನ್ ಹಾಗೂ ಸೈಡಿಂಗ್ ನಿರ್ಮಾಣಕ್ಕಾಗಿ ಸುಶೀಲಾನಗರ, ದೌಲತ್‌ಪುರ, ಕೃಷ್ಣಾನಗರ ಹಾಗೂ ಭುಜಂಗನಗರದ ನೂರಾರು ಎಕರೆ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ಪಿತ್ರಾರ್ಜಿತವಾಗಿ ಕೃಷಿಯನ್ನೇ ಅವಲಂಬಿಸಿ ಜೀವನ ಕಟ್ಟಿಕೊಂಡಿರುವ ರೈತರಿಗೆ ತೊಂದರೆಯಾಗಲಿದೆ. ಕೃಷಿ ಬಿಟ್ಟರೆ ನಮಗೆ ಬೇರೆ ಜೀವನೋಪಾಯವಿಲ್ಲ. ಕೃಷಿಯೇ ನಮ್ಮ ಜೀವಾಳವಾಗಿದೆ. ಕೃಷಿ ಭೂಮಿ ನಮ್ಮ ಆಹಾರ, ಬದುಕು ಹಾಗೂ ಭವಿಷ್ಯಕ್ಕೆ ಆಧಾರವಾಗಿದೆ ಎಂದರು.ಈಗಾಗಲೆ ರಾಮಘಡದ ಕೆಳಗಡೆ ಗುಂಡಾಬಳಿ ರೈಲ್ವೆ ಲೈನ್ ಇದೆ. ಅಲ್ಲಿಂದ ಕಾರಿಗನೂರು ಮಾರ್ಗವಾಗಿ ತೋರಣಗಲ್ಲಿನ ಕಾರ್ಖಾನೆಗಳಿಗೆ ಅದಿರನ್ನು ಕಳುಹಿಸಬಹುದಾಗಿದೆ. ಹಾಗೆಯೇ ನಂದಿಹಳ್ಳಿ ಬಳಿ ಇರುವ ರೈಲ್ವೆ ಯಾರ್ಡ್ ಮೂಲಕವೂ ಅದಿರನ್ನು ತೋರಣಗಲ್ಲಿನ ಕಾರ್ಖಾನೆಗಳಿಗೆ ಕಳುಹಿಸಬಹುದಾಗಿದೆ. ಆದ್ದರಿಂದ ಉದ್ದೇಶಿತ ರೈಲು ಮಾರ್ಗ ಹಾಗೂ ರೈಲ್ವೆ ಸೈಡಿಂಗ್ ನಿರ್ಮಾಣಕ್ಕಾಗಿ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಅನಿಲ್‌ಕುಮಾರ್ ಶೆಟ್ಟಿ, ಚಂದ್ರಶೇಖರ ಮೇಟಿ, ಟಿ. ಭೀಮಪ್ಪ, ಬಾಷಾ, ಮಂಜುನಾಥ ಶೆಟ್ಟಿ, ವೀರಪ್ಪ, ಓಂಕಾರಪ್ಪ ಉಪಸ್ಥಿತರಿದ್ದರು.