ಕನಕಪುರ: ತಾಲೂಕಿನ ರೈತರ ಜೀವನಾಡಿ ಹಾರೋಬೆಲೆ ಡ್ಯಾಂನಿಂದ ಸುತ್ತಮುತ್ತಲಿನ ಗ್ರಾಮಗಳ ನಾಲೆಗಳಿಗೆ ನೀರು ಬಿಡದೆ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಸಹಾಯಕ ಅಭಿಯಂತರರನ್ನು ಕೂಡಲೇ ಅಮಾನತು ಮಾಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕುಮಾರಸ್ವಾಮಿ ಒತ್ತಾಯಿಸಿದರು

ಕನಕಪುರ: ತಾಲೂಕಿನ ರೈತರ ಜೀವನಾಡಿ ಹಾರೋಬೆಲೆ ಡ್ಯಾಂನಿಂದ ಸುತ್ತಮುತ್ತಲಿನ ಗ್ರಾಮಗಳ ನಾಲೆಗಳಿಗೆ ನೀರು ಬಿಡದೆ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಸಹಾಯಕ ಅಭಿಯಂತರರನ್ನು ಕೂಡಲೇ ಅಮಾನತು ಮಾಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕುಮಾರಸ್ವಾಮಿ ಒತ್ತಾಯಿಸಿದರು. ನಗರದ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾರೋಬೆಲೆ ಡ್ಯಾಂನಿಂದ ನೀರು ನಂಬಿರುವ ನಲ್ಲಹಳ್ಳಿ, ಹೊಸದೊಡ್ಡಿ, ಒಡಕೆಕಟ್ಟೆ, ಹರೋಶಿವನಹಳ್ಳಿ, ಬೆಂದಗೋಡು, ನಲ್ಲಹಳ್ಳಿದೊಡ್ಡಿ, ಚುಂಚಿಕಾಲೋನಿ, ಅಡಕೆಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ನೂರಾರು ಹೆಕ್ಟೇರ್ ಜಮೀನಿನಲ್ಲಿ ಬೆಳೆದಿರುವ ರಾಗಿ, ಭತ್ತ, ರೇಷ್ಮೆ ಬೆಳೆಗಳು ನೀರಿಲ್ಲದೆ ಒಣಗಿವೆ. ಡ್ಯಾಂನಲ್ಲಿ ನೀರಿದ್ದರೂ ನಾಲೆಗಳಿಗೆ ನೀರು ಬಿಡುತ್ತಿಲ್ಲ, ನಾಲೆಗಳ ದುರಸ್ತಿ ಮಾಡಿಲ್ಲ, ಹೂಳು ತೆಗೆದಿಲ್ಲ, ಸರಿಯಾದ ನಿರ್ವಹಣೆ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ನಿಗಮದ ಹಣ ದುರುಪಯೋಗ, ಖಾಸಗಿ ಕಂಪನಿಗೆ ನೀರು:

ಕಾವೇರಿ ನೀರಾವರಿ ನಿಗಮದ ಹಣವನ್ನು ಡ್ಯಾಂ ಸುತ್ತಮುತ್ತಲಿನ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಬಳಸದೆ, ಪಟ್ಟಣ ಪ್ರದೇಶಗಳ ರಸ್ತೆ ಕಾಮಗಾರಿಗೆ ದುರುಪಯೋಗ ಮಾಡಲಾಗುತ್ತಿದೆ. ಇತ್ತ ರೈತನ ಜಮೀನಿಗೆ ಹನಿ ನೀರಿಲ್ಲ, ಆದರೆ ಚುಂಚಿ ಫಾಲ್ಸ್‌ನಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ದಿನನಿತ್ಯ ನೀರು ಬಿಡಲಾಗುತ್ತಿದೆ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಎಂದು ರೈತರು ಖಂಡಿಸಿದರು.

ಅಕ್ಟೋಬರ್ 5ರಂದು ಅಣೆಕಟ್ಟು ಮುತ್ತಿಗೆ:

ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅಕ್ಟೋಬರ್ 5ರಂದು ಸಾವಿರಾರು ರೈತರೊಂದಿಗೆ ಹಾರೋಬೆಲೆ ಡ್ಯಾಂನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ಮತ್ತು ಅಣೆಕಟ್ಟಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಚಾಲಕ ಚೀಲೂರು ಮುನಿರಾಜು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ, ಜಿಲ್ಲಾಧ್ಯಕ್ಷ ಎಚ್.ಸಿ.ಕೃಷ್ಣಯ್ಯ, ಗೌರವಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾ ಕಾರ್ಯದರ್ಶಿ ಕಿರಣಕುಮಾರ್, ಚನ್ನಪಟ್ಟಣ ತಾಲೂಕು ಅಧ್ಯಕ್ಷ ವಿಜಯಕುಮಾರ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಶಿವರಾಜು, ಕನಕಪುರ ತಾಲೂಕು ಅಧ್ಯಕ್ಷ ಪುಟ್ಟಮಾದೇಗೌಡ, ರೈತ ಮುಖಂಡರಾದ ಡಾ.ಅಪ್ಪಾಜಿಗೌಡ, ಬಸುರಾಜು, ಮರಿಯಪ್ಪ, ರಂಗಪ್ಪ, ಹರೋಶಿವನಹಳ್ಳಿ ದೇವರಾಜು, ಉಮೇಶ್, ನಲ್ಲಹಳ್ಳಿ ದೊಡ್ಡಿ ಶಶಿಕುಮಾರ್, ಚುಂಚಿ ಕಾಲೋನಿ ಚಿಕ್ಕಸ್ವಾಮಿ ಉಪಸ್ಥಿತರಿದ್ದರು.

ಬಾಕ್ಸ್‌..........

ರೈತ ಸಂಘದ ಪ್ರಮುಖ ಬೇಡಿಕೆಗಳು:* ಬೆಳೆ ನಾಶಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು* ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಮತ್ತು ನಾಲೆಗಳ ದುರಸ್ತಿ ಕಾಮಗಾರಿ ಮಾಡಬೇಕು* ಖಾಸಗಿ ವಿದ್ಯುತ್ ಘಟಕಕ್ಕೆ ನೀರು ಬಿಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮೊದಲು ರೈತರ ಬೆಳೆ ಉಳಿಸಬೇಕು* ಸರ್ಕಾರ ಕೂಡಲೇ ಕನಕಪುರವನ್ನು ಬರಪೀಡಿತ ತಾಲೂಕು ಘೋಷಿಸಬೇಕು

ಕೆ ಕೆ ಪಿ ಸುದ್ದಿ 02:

ಕನಕಪುರ ರೈತ ಸಂಘದ ಕಚೇರಿಯಲ್ಲಿ ಹಾರೋಬೆಲೆ ಡ್ಯಾಂನಿಂದ ಸುತ್ತಮುತ್ತಲಿನ ಗ್ರಾಮಗಳ ನಾಲೆಗಳಿಗೆ ನೀರು ಬಿಡದೆ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ರೈತರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.