ಕೆರೆಗೆ ನೀರು ತುಂಬಿಸಲು ರೈತರ ಆಗ್ರಹ
KannadaprabhaNewsNetwork | Published : Oct 20 2023, 01:00 AM IST
ಕೆರೆಗೆ ನೀರು ತುಂಬಿಸಲು ರೈತರ ಆಗ್ರಹ
ಸಾರಾಂಶ
ಶಿರಹಟ್ಟಿ ತಾಲೂಕಿನ ಶ್ರೀಮಂತಗಡ, ದೇವಿಹಾಳ, ರಣತೂರ, ಬೆಳ್ಳಟ್ಟಿ, ಸುಗ್ನಳ್ಳಿ ಗ್ರಾಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರೈತರು ಮನವಿ ಸಲ್ಲಿಸಿ ಆಗ್ರಹಿಸಿದರು.
ಶಾಸಕ ಡಾ. ಲಮಾಣಿ ಅಭಿನಂದನಾ ಸಮಾರಂಭದಲ್ಲಿ ರೈತರ ಮನವಿ ಶಿರಹಟ್ಟಿ: ತಾಲೂಕಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಲಿದ್ದು, ರೈತರ ಹೊಲದಲ್ಲಿಯ ನೀರಾವರಿ ಫಸಲು ಕೂಡ ಒಣಗಲಾರಂಭಿಸಿವೆ. ತುಂಗಭದ್ರಾ ನದಿಯಿಂದ ತಾಲೂಕಿನಲ್ಲಿಯ ಕೆರೆಗಳನ್ನು ತುಂಬಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ರೈತರು ಮನವಿ ಸಲ್ಲಿಸಿದರು. ಗುರುವಾರ ತಾಲೂಕಿನ ಶ್ರೀಮಂತಗಡ, ದೇವಿಹಾಳ, ರಣತೂರ, ಬೆಳ್ಳಟ್ಟಿ, ಸುಗ್ನಳ್ಳಿ ಗ್ರಾಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರೈತರು ಮನವಿ ಸಲ್ಲಿಸಿ ಆಗ್ರಹಿಸಿದರು. ತಾಲೂಕಿನಲ್ಲಿಯ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮೇಲಿಂದ ಮೇಲೆ ವಿದ್ಯತ್ ಲೋಡ್‌ಶೆಡ್ಡಿಂಗ್‌ನಿಂದ ರೈತರ ಬೆಳೆಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಶಾಸಕರ ಗಮನ ಸೆಳೆದರು. ನಂತರ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಆರಿಸಿ ಕಳುಹಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುವೆ. ತಾಲೂಕಿನಲ್ಲಿ ಕೆರೆ ತುಂಬಿಸುವ ಕುರಿತು ಈಗಾಗಲೇ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ಮಾಡಲಾಗಿದೆ. ಶೀಘ್ರದಲ್ಲಿಯೇ ತುಂಗಭದ್ರಾ ನದಿಯಿಂದ ತಾಲೂಕಿನ ಕೆರೆಗಳನ್ನು ತುಂಬಿಸಿ ಜನ ಮತ್ತು ಜಾನುವಾರು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು. ತಾಲೂಕಿನ ಬೆಳ್ಳಟ್ಟಿ ಗ್ರಾಮವು ವೇಗವಾಗಿ ಬೆಳೆಯುತ್ತಿದ್ದು, ಸುತ್ತಲಿನ ಹಳ್ಳಿಯ ಜನತೆ ತಮ್ಮ ಕೆಲಸ ಕಾರ್ಯಗಳಿಗೆ ಮತ್ತು ಆರೋಗ್ಯ ತಪಾಸಣೆಗೆ ಬೆಳ್ಳಟ್ಟಿಗೆ ಬರುತ್ತಿದ್ದು, ೩೦ ಹಾಸಿಗೆಯುಳ್ಳ ಆಸ್ಪತ್ರೆ, ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಡಿಗ್ರಿ ಕಾಲೇಜ್ ಆರಂಭ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಅಲ್ಲಿನ ಮುಖಂಡರಾದ ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ನೇತ್ರಾ ಸಜ್ಜನರ ಸೇರಿ ಅನೇಕರು ಮನವಿ ಸಲ್ಲಿಸಿದರು. ಶಿಕ್ಷಣ, ಆರೋಗ್ಯ ಎಲ್ಲರಿಗೂ ಅಗತ್ಯವಿದ್ದು, ನಮ್ಮದು ಮೀಸಲು ಕ್ಷೇತ್ರವಾಗಿದ್ದರಿಂದ ಹಾಗೂ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಾಗಿದ್ದರಿಂದ ಸರ್ಕಾರದ ಗಮನಕ್ಕೆ ತಂದು ಶೈಕ್ಷಣಿಕ ವ್ಯವಸ್ಥೆ ಬಲಪಡಿಸಲು ಮತ್ತು ಡಿಗ್ರಿ ಕಾಲೇಜ್ ಆರಂಭಕ್ಕೆ ಹಾಗೂ ೩೦ ಹಾಸಿಗೆಯುಳ್ಳ ಆಸ್ಪತ್ರೆ ಕಲ್ಪಿಸಿಕೊಡಲು ಪ್ರಯತ್ನಿಸುವ ಭರವಸೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಬರುವ ದಿನಗಳಲ್ಲಿ ಹಂತಹಂತವಾಗಿ ತಾಲೂಕಿನ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದಾಗಿ ಹೇಳಿದರು. ಬಿಜೆಪಿ ಶಿರಹಟ್ಟಿ ಮಂಡಳದ ಅಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ, ಮದನಲಾಲ ಬಾಫಣಾ, ಕೊಟ್ರೇಶ ಸಜ್ಜನ, ಸೋಮು ಲಮಾಣಿ, ಅಶೋಕ ಬಳ್ಳಾರಿ, ಸಂತೋಷ ಓಬಾಜಿ, ಪರಶುರಾಮ ಬಂಡಿವಡ್ಡರ, ದ್ಯಾಮಣ್ಣ ಕಾಶಣ್ಣವರ, ಧರ್ಮಣ್ಣ ಚವ್ಹಾಣ, ಯಲ್ಲಪ್ಪ ಮಕರಬ್ಬಿ, ವಿಠೋಬಾ ಖಂಡಪ್ಪನವರ, ಗಂಗಾಧರ ಬಳಿಗಾರ, ಸುರೇಶ ಸಣ್ಣತಂಗಿ, ಮಲ್ಲನಗೌಡ ಪಾಟೀಲ, ಡಾ. ಸುಭಾಸ ಬಡ್ನಿ, ಕಾಳಪ್ಪ ಕೊರಡೂರ, ರಾಜಯ್ಯ ಹಿರೇಮಠ, ಸಂಗಪ್ಪ ರಾಹುತ್, ಈರಣ್ಣ ನರ್ತಿ, ಸುಭಾಸ ಬದಾಮಿ, ಶರಣಪ್ಪ ಕರೆಕೆಂಚಪ್ಪನವರ ಸೇರಿ ಅನೇಕರು ಇದ್ದರು.