ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಏತ ನೀರಾವರಿ ಕಾಲುವೆ ನಿರ್ಮಾಣ ಮಾಡಲಾಗಿದೆ. ನಿರ್ಮಾಣವಾಗಿ 14 ವರ್ಷ ಕಳೆದರೂ ಕಾಲುವೆಯಲ್ಲಿ ನೀರೇ ಹರಿದಿಲ್ಲ. ರೈತರು ಕೆಬಿಜೆಎನ್‌ಎಲ್‌ ಅಧಿಕಾರಿಗಳ ಬಳಿಗೆ ಅಲೆದಾಡಿದರೂ ಸ್ಪಂದಿಸುತ್ತಿಲ್ಲ. ಇವರನ್ನು ನಂಬಿ ಕುಳಿತರೆ ಈ ಜನ್ಮದಲ್ಲಿ ನೀರನ್ನೇ ಕಾಣುವುದಿಲ್ಲ ಎಂದು ಅರಿತ ರೈತರು ಸ್ವಂತ ಹಣದಿಂದ ಕಾಲುವೆ ಹೂಳು ತೆಗೆಯುವ ಕಾರ್ಯ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಲತವಾಡ

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಏತ ನೀರಾವರಿ ಕಾಲುವೆ ನಿರ್ಮಾಣ ಮಾಡಲಾಗಿದೆ. ನಿರ್ಮಾಣವಾಗಿ 14 ವರ್ಷ ಕಳೆದರೂ ಕಾಲುವೆಯಲ್ಲಿ ನೀರೇ ಹರಿದಿಲ್ಲ. ರೈತರು ಕೆಬಿಜೆಎನ್‌ಎಲ್‌ ಅಧಿಕಾರಿಗಳ ಬಳಿಗೆ ಅಲೆದಾಡಿದರೂ ಸ್ಪಂದಿಸುತ್ತಿಲ್ಲ. ಇವರನ್ನು ನಂಬಿ ಕುಳಿತರೆ ಈ ಜನ್ಮದಲ್ಲಿ ನೀರನ್ನೇ ಕಾಣುವುದಿಲ್ಲ ಎಂದು ಅರಿತ ರೈತರು ಸ್ವಂತ ಹಣದಿಂದ ಕಾಲುವೆ ಹೂಳು ತೆಗೆಯುವ ಕಾರ್ಯ ಆರಂಭಿಸಿದ್ದಾರೆ.

ಹೌದು, ಚಿಮ್ಮಲಗಿ ಏತ ನೀರಾವರಿ ಯೋಜನೆಯ 13ಎ ಕಾಲುವೆ ನಿರ್ಮಾಣವಾಗಿ ಬರೋಬ್ಬರಿ 14 ವರ್ಷಗಳು ಕಳೆದಿವೆ. ಏತ ನೀರಾವರಿಯಿಂದ ಬಾಳು ಬಂಗಾರವಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಕಾಲುವೆಯ ಕೊನೆಯ ಹಂತದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಅಮರೇಶ್ವರ ದೇವಸ್ಥಾನದಿಂದ ಕಮಲಾಪುರ ರಸ್ತೆವರೆಗೆ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಅಲ್ಲಿಂದ ಮುಂದೆ ಕಾಲುವೆಯಲ್ಲಿ ಭಾರಿ ಪ್ರಮಾಣದ ಹೂಳು ತುಂಬಿಕೊಡಿದ್ದು, ಗಿಡಗಂಟಿಗಳು ಬೆಳೆದು ನೀರು ಮುಂದೆ ಹರಿಯದ ಕಾರಣ ನಾಲತವಾಡ, ಆರೇಶಂಕರ ಹಾಗೂ ವಡಗೇರಿ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ.

ಮನವಿ ಮಾಡಿದರೂ ಸ್ಪಂದನೆ ಇಲ್ಲ:ಕಾಲುವೆಯ ಹೂಳು ಹಾಗೂ ಗಿಡಕಂಟಿಗಳನ್ನು ತೆರವುಗೊಳಿಸಿ ನೀರು ಹರಿಯುವಂತೆ ಮಾಡಬೇಕೆಂದು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಹಾಗೂ ಮನವಿ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೂಳೆತ್ತಲು ಇಲಾಖೆಯಲ್ಲಿ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕೆಬಿಜೆಎನ್ಎಲ್ ಇಲಾಖೆಯಲ್ಲಿ ವಿಚಾರಿಸಿದಾಗ ನಾಲ್ಕು ಬಾರಿ ಹೂಳೆತ್ತಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಹಾಗಾದರೆ ಹೂಳೆತ್ತಲು ಬಂದು ಹಣ ಏನಾಯಿತು ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಹಣ ಸಂಗ್ರಹಿಸಿ ಕಾಮಗಾರಿ:ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರೇ ಮುಂದಾಗಿ, ಒಬ್ಬೊಬ್ಬರು ₹3 ಸಾವಿರದಷ್ಟು ಹಣ ಸೇರಿಸಿ ಹಿಟಾಚಿ ಮೂಲಕ ಕಾಲುವೆ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದೇವೆ. ಬರಗಾಲದಿಂದ ಒಣಗುತ್ತಿರುವ ಬೆಳೆಗಳಿಗೆ ಕಾಲುವೆ ನೀರಿನಿಂದಾದರೂ ಸ್ವಲ್ಪ ಆಸರೆ ಸಿಗಲಿ ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡುತ್ತಿದ್ದೇವೆ ಎಂದು ರೈತರಾದ ಸಿದಲಿಂಗಯ್ಯ ಕಪರದಮಠ, ಡಾ.ಮಹೇಶ ಟಕ್ಕಳಕಿ, ಮೈಬೂಬ ಕುಳಗೇರಿ, ಈರಬಸಪ್ಪ ಹಾದಿಮನಿ ಹಾಗೂ ಹಣಮಂತ ಕೇಸಾಪೂರ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಕಾಲುವೆಯಲ್ಲಿ ನೀರು ಕಾಣದೆ ರೈತರು ಸಂಕಷ್ಟದಲ್ಲಿದ್ದಾರೆ. ಕಾಲುವೆಯಲ್ಲಿರುವ ಹೂಳು ಹಾಗೂ ಗಿಡಕಂಟಿಗಳನ್ನು ಕೂಡಲೇ ತೆರವುಗೊಳಿಸಿ ನೀರು ಹರಿಯುವಂತೆ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರೈತರಾದ ಹಣಮಂತ ಕೇಸಾಪೂರ, ಸಿದ್ದಲಿಂಗಯ್ಯ ಕಪರದಮಠ, ಡಾ. ಮಹೇಶ ಟಕ್ಕಳಕಿ, ಬಸಪ್ಪ ಬಿರಾದಾರ, ಕಾಶಿಮಸಾಬ ಮುಲ್ಲಾ, ಬಸವರಾಜ ತೋಟದ, ದಸ್ತಗೀರಸಾಬ ಆರೇಶಂಕರ, ದೊಡ್ಡಪ್ಪ ಬಿರಾದಾರ, ಕಲ್ಯಾಣರಾವ ಕುಲಕಣಿ, ಬಸಪ್ಪ ತೋಟದ, ಬಾಳಪ್ಪ ಯರಗುಂಟಿ, ಶಿವಪ್ಪ ತೋಟದ, ಅಬ್ಬಸಲಿ ವಡಗೇರಿ, ಜಾನುಸಾಬ ವಡಗೇರಿ, ಮೌಲಾಸಾಬ ವಡಗೇರಿ, ಅಲ್ಲಿಸಾಬ ವಡಗೇರಿ, ಮಹ್ಮದ ಆಶೀಫ್ ಶಿವಣಗಿ, ಶರಣಪ್ಪ ವಡಗೇರಿ, ಶರಣಪ್ಪ ಕೇಸಾಪೂರ, ಬಸಪ್ಪ ತೆಗ್ಗಿನಮನಿ, ಸಾಮಣ್ಣ ಮಾರನಾಳ, ಮೌಲಾಸಾಬ ಕಂಬಾರ, ರಾಘವೇಂದ್ರ ನಾಲತವಾಡ, ಇರಬಸಪ್ಪ ಹಾದಿಮನಿ, ಸಾಬಣ್ಣ ವಡಗೇರಿ, ಬಸಣ್ಣ ವಡಗೇರಿ, ಯಲಗುರದಪ್ಪ ತೋಟದ, ಗಂಗಪ್ಪ ತೋಟದ, ಶಂಕ್ರಪ್ಪ ತೋಟದ ಸೇರಿದಂತೆ ಇತರ ರೈತರು ಇದ್ದರು.