ತಾಲೂಕಿನ ಬಹುತೇಕ ಕೃಷಿ ಜಮೀನುಗಳು ಮೀಸಲು ಅರಣ್ಯ, ಕಾಯ್ದಿಟ್ಟ ಅರಣ್ಯ ಹಾಗೂ ಚಿಕ್ಕನೀರಿನ ತೊರೆಗಳ ದಂಡೆಗೆ ಹೊಂದಿಕೊಂಡಿವೆ.

ಓರ್ವೆಲ್‌ ಫರ್ನಾಂಡೀಸ್ಹಳಿಯಾಳ: ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ನಾಡಿನತ್ತ ಮುಖ ಮಾಡಿದ್ದು, ತಾಲೂಕಿನ ಅನ್ನದಾತರು ತತ್ತರಿಸಿದ್ದಾರೆ.

ಮೆಕ್ಕೆಜೊಳದ ಕಟಾವು ಹಂಗಾಮು ಆರಂಭಗೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಕಬ್ಬು ಕಟಾವಿನ ಹಂಗಾಮು ಆರಂಭವಾಗುವ ಹೊಸ್ತಿಲಲ್ಲಿ ವನ್ಯಜೀವಿಗಳ ಹಾವಳಿ ಮಿತಿ ಮೀರಿದ್ದು, ಅಳಿದುಳಿದ ಬೆಳೆ ಕೈಗೆ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿ ರೈತರು ಮುಳುಗಿದ್ದಾರೆ.

ತಾಲೂಕಿನ ಬಹುತೇಕ ಕೃಷಿ ಜಮೀನುಗಳು ಮೀಸಲು ಅರಣ್ಯ, ಕಾಯ್ದಿಟ್ಟ ಅರಣ್ಯ ಹಾಗೂ ಚಿಕ್ಕನೀರಿನ ತೊರೆಗಳ ದಂಡೆಗೆ ಹೊಂದಿಕೊಂಡಿವೆ. ವನ್ಯಪ್ರಾಣಿಗಳು ಹೊಲಗಳಿಗೆ ನುಗ್ಗಿ ಸುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಇನ್ನು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದ ಹಲವೆಡೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.ತಾಲೂಕಿನಲ್ಲಿ 12100 ಹೆಕ್ಟೇರ್ ಕಬ್ಬು ಮತ್ತು 3100 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಬೆಳೆಗಳೇ ಕಾಡುಪ್ರಾಣಿಗಳ ಟಾರ್ಗೆಟ್. ರಾತ್ರಿ ವೇಳೆ ಗುಂಪಾಗಿ ಬರುವ ಕಾಡುಹಂದಿಗಳು ಹಾಗೂ ಮುಳ್ಳುಹಂದಿಗಳು ಬೆಳೆಯನ್ನು ಬುಡಸಮೇತ ಕಿತ್ತು ತುಳಿದು ಹಾಳು ಮಾಡುತ್ತಿವೆ. ಕಾಡುಹಂದಿಯ ಹತ್ಯೆಗೆ ನಿರ್ಬಂಧ ಇರುವುದರಿಂದ ಅವುಗಳ ಸಂಖ್ಯೆಯು ವಿಪರೀತವಾಗಿ ಬೆಳೆದಿವೆ.

ಆನೆಗಳ ಸವಾರಿ: ಸಾಂಬ್ರಾಣಿ ಮತ್ತು ಭಾಗವತಿ ಅರಣ್ಯ ವಲಯ ವ್ಯಾಪ್ತಿಯ ತಟ್ಟಿಹಳ್ಳ, ಕಾಳಗಿನಕೊಪ್ಪ, ಅಜಮನಾಳ ತಾಂಡಾ, ಪಾಂಡರವಾಳ, ಜತಗಾ ಹೊಸೂರ, ದೊಡ್ಡಕೊಪ್ಪ ಗ್ರಾಮಗಳ ಕಬ್ಬಿನ ಗದ್ದೆಗಳಿಗೆ ಆನೆಗಳ ಹಿಂಡು ನುಗ್ಗಿ ಬೆಳೆಹಾನಿ ಮಾಡುತ್ತಿವೆ. ಆನೆ ದಾಳಿಗೆ ಹೆದರಿ ಈ ಭಾಗದ ರೈತರು ರಾತ್ರಿ ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

ವಾನರ ಸೇನೆಯ ಅಟ್ಟಹಾಸ: ಮಂಗಗಳ ಹಾವಳಿ ಇಡೀ ತಾಲೂಕಿನ ಸಮಸ್ಯೆಯಾಗಿ ಬೆಳೆದಿದೆ. ಹೊಲಗದ್ದೆಗಳು ಮಾತ್ರವಲ್ಲದೇ ಹೂವು, ಹಣ್ಣುಗಳ ತೋಟಗಳಿಗೆ ಮತ್ತು ಮನೆ, ಶಾಲೆಗಳ ಮೇಲೂ ಲಗ್ಗೆಯಿಡಲಾರಂಭಿಸಿವೆ. ಕಳೆದ ತಿಂಗಳು ಕೆ.ಕೆ. ಹಳ್ಳಿಯಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ರೈತ ಮಹಿಳೆಯೋರ್ವಳು ಮಂಗಗಳ ಹಾವಳಿಯ ಬಗ್ಗೆ ಬಹಿರಂಗವಾಗಿಯೇ ಅಳಲು ತೋಡಿಕೊಂಡಿದ್ದರು.

ಬೆಳವಟಗಿ ಗ್ರಾಮ ವ್ಯಾಪ್ತಿಯಲ್ಲಿ ಮಂಗಳ ಹಾವಳಿ ವಿಪರೀತವಾಗಿದ್ದು, ಒಮ್ಮೆಯೇ ನೂರಾರು ಮಂಗಗಳು ಗುಂಪುಗೂಡಿ ಕೃಷಿ ಜಮೀನುಗಳಿಗೆ ಲಗ್ಗೆಯಿಡುತ್ತಿವೆ. ಅರಣ್ಯ ಇಲಾಖೆಯವರು ನಮ್ಮ ಗೋಳು ಕೇಳಬೇಕು ಎಂದು ಕಣ್ಣೀರು ಹಾಕಿದ್ದು, ಸಭೆಯಲ್ಲಿದ್ದ ಅಧಿಕಾರಿಗಳನ್ನೇ ಮುಜುಗರಕ್ಕೀಡು ಮಾಡಿತ್ತು.ರೈತರ ಹರಸಾಹಸ: ಬರಗಾಲದ ಸ್ಥಿತಿ, ಮಳೆಯೇ ಇಲ್ಲ, ಬೆಳೆಯು ಬಂದಿಲ್ಲ, ಬಂದ ಬೆಳೆಯು ವನ್ಯಜೀವಿಗಳ ಪಾಲಾಗುತ್ತಿರುವುದರಿಂದ ರೈತರು ಇದ್ದ ಬೆಳೆಯನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದು, ತಮ್ಮದೇ ರೀತಿಯಲ್ಲಿ ರಕ್ಷಣೆಗೆ ಮುಂದಾಗಿದ್ದಾರೆ. ಹೊಲದ ಸುತ್ತ ಸೀರೆ, ಬಣ್ಣದ ಬಟ್ಟೆ, ಕಬ್ಬಿಣದ ಮುಳ್ಳು ತಂತಿ ಬೇಲಿ ಅಳವಡಿಸುತ್ತಿದ್ದಾರೆ. ಇನ್ನೂ ಕೆಲವರು ರಾತ್ರಿಯಿಡಿ ಹೊಲದಲ್ಲಿನ ಮನೆಗಳಲ್ಲಿ ಟಾರ್ಚ್ ಹಾಕಿ, ಡೋಲು ಬಡಿದು ಕಾವಲು ಕಾಯುತ್ತಿದ್ದರೆ, ಸಾಕು ನಾಯಿಗಳನ್ನು ಕಟ್ಟಿ ಬೆಳೆ ಕಾಯುವ ಯತ್ನ ಮಾಡಲಾರಂಭಿಸಿದ್ದಾರೆ.

ಪರಿಹಾರಕ್ಕಾಗಿ ಪ್ರತಿಭಟನೆ: ವನ್ಯಜೀವಿಗಳ ದಾಳಿಯಿಂದ ಸಂತ್ರಸ್ತರಾದವರಿಗೆ ಬೆಳೆಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಹಳಿಯಾಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗಿತ್ತು.

ಆನೆ, ಕರಡಿ ದಾಳಿ ಮಾಡಿದರೆ ಅರಣ್ಯ ಇಲಾಖೆಯು ಪರಿಹಾರವನ್ನು ನೀಡುತ್ತಿದೆ. ಆದರೆ ಪ್ರತಿನಿತ್ಯವು ಕಾಡುಹಂದಿ, ಮುಳ್ಳುಹಂದಿ ಮತ್ತು ಮಂಗಗಳಿಂದ ಆಗುವ ಲಕ್ಷಾಂತರ ರು. ನಷ್ಟಕ್ಕೆ ಇಲಾಖೆಯಿಂದ ನಯಾಪೈಸೆ ಪರಿಹಾರವಿಲ್ಲ. ಇದರಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.

ಶೇ. 90ರಷ್ಟು ಸಬ್ಸಿಡಿ: ಹಳಿಯಾಳ ತಾಲೂಕನ್ನು ವನ್ಯಜೀವಿ ಹಾವಳಿ ಸೂಕ್ಷ್ಮವಲಯ ಎಂದು ಘೋಷಿಸಿ, ಪ್ರತಿ ವಲಯಕ್ಕೂ ತ್ವರಿತ ಕಾರ್ಯಪಡೆ, ಸೋಲಾರ್ ಬೇಲಿಗೆ ಶೇ. 90ರಷ್ಟು ಸಬ್ಸಿಡಿ ಮತ್ತು ಎಲ್ಲ ವನ್ಯಜೀವಿಗಳ ಹಾನಿಗೂ ಸಮಾನ ಪರಿಹಾರ ನೀಡುವ ವ್ಯವಸ್ಥೆ ಜಾರಿಯಾಗಬೇಕಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ಎಂದರು.