ಬೇಡ್ತಿ ಏತ ನೀರಾವರಿಯಿಂದ ರೈತರ ಆರ್ಥಿಕತೆ ಏರುಗತಿ!

| Published : Sep 20 2025, 01:02 AM IST

ಸಾರಾಂಶ

ಕಲಘಟಗಿ ತಾಲೂಕಿನಾದ್ಯಂತ ಅತ್ಯಧಿಕ ನೀರು ಬೇಡುವ ಕಬ್ಬು, ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಇತ್ತೀಚೆಗೆ ಗೋವಿನ ಜೋಳ ಹಾಗೂ ಇತರೆ ಬೆಳೆಗಳೂ ಇವೆ

ಬಸವರಾಜ ಹಿರೇಮಠ ಧಾರವಾಡ

ಬೇಸಿಗೆ ಬಂದರೆ ಸಾಕು ಖಾಲಿ ಕೂರುತಿದ್ದ ಅಥವಾ ಹುಬ್ಬಳ್ಳಿ-ಧಾರವಾಡ ಅಂತಹ ಮಹಾನಗರಗಳಿಗೆ ಕೆಲಸಕ್ಕೆ ಹೋಗುತ್ತಿದ್ದ ಕಲಘಟಗಿ ತಾಲೂಕಿನ ಬಹುತೇಕ ರೈತರೀಗ ಬೇಡ್ತಿ ನದಿಯಿಂದ ಏತ ನೀರಾವರಿ ಮೂಲಕ ಬರುವ ಕೆರೆಯ ನೀರು ಬಳಸಿ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವತ್ತ ಮುಖ ಮಾಡುತ್ತಿದ್ದಾರೆ.

ಕೃಷಿಗೆ ಮೂಲ ನೀರು. ಕೃಷಿ ಮಾಡಲು ಸಮರ್ಪಕ ನೀರು ನೀಡಿದರೆ ಸಾಕು ರೈತ ಯಾವತ್ತೂ ಸಂತೃಪ್ತಿಯಾಗಿರುತ್ತಾನೆ. ಹಾಗೆಯೇ, ಕಲಘಟಗಿ 41 ಕೆರೆಗಳ ವ್ಯಾಪ್ತಿ ರೈತರು ತಮ್ಮೂರಿನ ಕೆರೆಯ ನೀರು ಬಳಸಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಅಂತಹ ಚಟುವಟಿಕೆಗಳ ಮೂಲಕ ನಿಧಾನವಾಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.

ಏರುತ್ತಿದೆ ಅಂತರ್ಜಲ ಮಟ್ಟ:ಕಲಘಟಗಿ ತಾಲೂಕಿನಾದ್ಯಂತ ಅತ್ಯಧಿಕ ನೀರು ಬೇಡುವ ಕಬ್ಬು, ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಇತ್ತೀಚೆಗೆ ಗೋವಿನ ಜೋಳ ಹಾಗೂ ಇತರೆ ಬೆಳೆಗಳೂ ಇವೆ. ಶೇ. 80ರಷ್ಟು ಕಬ್ಬಿನ ಬೆಳೆಯೇ ಇದ್ದು, ಈ ಮೊದಲು ನೀರಿನ ಕೊರತೆಯಾಗುತ್ತಿತ್ತು. ಆಗ, ಬೋರವೆಲ್‌ ಕೊರೆಯಿಸಿ ನೀರಾವರಿ ಮಾಡಿಕೊಳ್ಳುತ್ತಿದ್ದರು. ಇಡೀ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊಳವೆ ಬಾವಿಗಳಿದ್ದು, ಅವುಗಳ ಅಂತರ್ಜಲ ಮಟ್ಟ ಸಹ ಕುಸಿದು ಹೋಗಿತ್ತು. ಆದರೀಗ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶುರುವಾದಾಗಿನಿಂದ ಕೆರೆ ಸುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ.

ಬೇಡ್ತಿ ನೀರು ಕೃಷಿಗೆ ಸೂಕ್ತ: ಕಲಘಟಗಿ ಮಲೆನಾಡಾದರೂ ಅದೆಷ್ಟೋ ಬಾರಿ ಕೃಷಿಗೆ ನೀರಿನ ಕೊರತೆಯಾಗಿ ಬೆಳೆಗಳು ಹಾಳಾಗಿರುವ ಉದಾಹರಣೆಗಳಿವೆ. ಇದೀಗ ಬೇಡ್ತಿ ನದಿ ನೀರು ಕೆರೆಗೆ ತುಂಬಿಸಿದಾಗಿನಿಂದ ರೈತರ ಕೃಷಿಗೆ ನೀರಿನ ಸಮಸ್ಯೆಯೇ ಇಲ್ಲ. ಕೆರೆ ಸುತ್ತಲಿನ ಎಲ್ಲ ರೈತರೂ ಈ ನೀರು ಬಳಸಿ ಸದಾ ಕೃಷಿಯತ್ತ ತೊಡಗಿದ್ದಾರೆ. ಅದರಲ್ಲೂ ಕಾಮಧೇನು, ದುಮ್ಮವಾಡ, ರಾಮನಾಳ, ಬಿ. ಗುಡಿಹಾಳ, ಗುರುವಿನಕೊಪ್ಪ ರೈತರು ಈ ಕೆರೆಗಳ ನೀರು ಬಳಸಿ ತರಕಾರಿ ಸಹ ಬೆಳೆಯುತ್ತಿದ್ದಾರೆ. ಬೇಡ್ತಿ ನದಿಗೆ ಹುಬ್ಬಳ್ಳಿಯ ಭಾಗದಿಂದ ಕೊಳಚೆ ನೀರು ಬರುತ್ತಿದ್ದು ಅದರಿಂದ ತರಕಾರಿ ಭರ್ಜರಿಯಾಗಿ ಬರುತ್ತಿದೆ ಎಂದು ಮಡಕಿಹೊನ್ನಳ್ಳಿಯ ರೈತ ನಿಂಗಯ್ಯ ಪಟ್ಟದಯ್ಯನವರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಕೆರೆಗಳ ನಾಡೆಂದು ಕರೆಯಿಸಿಕೊಳ್ಳುವ, ಮಲೆನಾಡಿನ ಸೆರಗಿನಲ್ಲಿರುವ ಕಲಘಟಗಿ ತಾಲೂಕಿಗೂ ಅನೇಕ ವರ್ಷಗಳ ಕಾಲ ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಖಾಲಿಯಾಗಿರುವ ಉದಾಹರಣೆಗಳಿವೆ. ಆದರೆ, ಇನ್ಮುಂದೆ ಕಲಘಟಗಿ ತಾಲೂಕಿನ ಕೆರೆಗಳು ಬತ್ತುವ ಪ್ರಶ್ನೆಯೇ ಇಲ್ಲ. ಬೇಡ್ತಿ ನದಿಯ ಕೊಳ್ಳದಿಂದ ಕೆರೆಗಳು ಯಾವತ್ತೂ ತುಂಬಿರುತ್ತಿದ್ದು, ರೈತರು ನೀರು ಬಳಸಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಅಂತಹ ಕೃಷಿಯತ್ತ ತೊಡಗಿರುವುದು ಈ ಪ್ರದೇಶದ ಬೆಳವಣಿಗೆಯ ಶುರುವಾತು ಎನ್ನಬಹುದು.

ಬೇಡ್ತಿ ನದಿ ನೀರು ತಾಲೂಕಿನ ಸಾವಿರಾರು ರೈತ ಕುಟುಂಬಗಳಿಗೆ ಆಸರೆಯಾಗಿದೆ. ಕೆರೆಗಳ ಮೇಲಿನ ಭಾಗದವರು ಪಂಪಸೆಟ್‌ ಹಚ್ಚಿ ಹೊಲಗಳಿಗೆ ನೀರು ಹಾಯಿಸಿದರೆ, ಕೆರೆ ಕೆಳಗಿನ ರೈತರಿಗೆ ಕಾಲುವೆಗಳ ಮೂಲಕ ನೀರು ಸರಾಗವಾಗಿ ಹರಿಯುತ್ತಿದೆ. ಅದರಲ್ಲೂ ದೇವಿಕೊಪ್ಪದ ಕರೆಯು 100 ಎಕರೆ ಪ್ರದೇಶದಲ್ಲಿದ್ದು, ಸಾವಿರಾರು ಎಕರೆಗೆ ನೀರು ನೀಡುತ್ತಿದೆ. ಆದರೆ, ಸಾಕಷ್ಟು ಕೆರೆಗಳು ಹೂಳು ತುಂಬಿದ್ದು ಅವುಗಳನ್ನು ತೆಗೆಯಿಸುವುದು ಹಾಗೂ ಕೆರೆ ಕೆಳಗಿನ ಕಾಲುವೆಗಳ ಅಭಿವೃದ್ಧಿ ಮಾಡಿದರೆ, ಸಚಿವ ಸಂತೋಷ ಲಾಡ್‌ ಅವರ ‍ಏತ ನೀರಾವರಿ ಯೋಜನೆ ಪ್ರಯತ್ನ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ದೇವಿಕೊಪ್ಪ ರೈತ ಶಾಂತಲಿಂಗ ಬೆರೂಡಗಿ ಹೇಳಿದ್ದಾರೆ.