ಕೆ.ಆರ್.ಪೇಟೆ ತಾಲೂಕಿನ ಕಾಲುವೆಗಳಿಗೆ ನೀರು ಹರಿಸುವ ಮುನ್ನ ಹೇಮಾವತಿ ನದಿ ಅಣೆಕಟ್ಟೆ ನಾಲೆಗಳು, ಕೆರೆಗಳು, ಏತನೀರಾವರಿ ಯೋಜನೆಗಳು, ಕಾಲೋನಿ ಮತ್ತು ಕಚೇರಿಗಳ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಹೇಮಾವತಿ ನಾಲಾ ವೃತ್ತದ ಸೂಪರಡೆಂಟಿಂಗ್ ಎಂಜಿನಿಯರ್ ಫೆಬ್ರವರಿ ತಿಂಗಳಲ್ಲೇ ಪತ್ರ ಬರೆದಿದ್ದರೂ ಕ್ರಮ ವಹಿಸಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ನಾಲೆಗಳನ್ನು ಕಾಲಕಾಲಕ್ಕೆ ಅಭಿವೃದ್ಧಿ ಪಡಿಸದೇ ಎಂಜಿನಿಯರ್‌ಗಳು ತೊಂದರೆ ನೀಡುತ್ತಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಆವರಣದಲ್ಲಿ ತಾಲೂಕಿನ ನೀರಾವರಿ ಇಲಾಖೆ ಎಂಜಿನಿಯರುಗಳ ಸಭೆ ನಡೆಸಿದ ಶಾಸಕರು ಎಂಜಿನಿಯರ್‌ಗಳ ಕಾರ್ಯ ವೈಖರಿ ವಿರುದ್ಧ ಆಕ್ರೋಶ ಹೊರಹಾಕಿದರು.

ತಾಲೂಕಿನ ಕಾಲುವೆಗಳಿಗೆ ನೀರು ಹರಿಸುವ ಮುನ್ನ ಹೇಮಾವತಿ ನದಿ ಅಣೆಕಟ್ಟೆ ನಾಲೆಗಳು, ಕೆರೆಗಳು, ಏತನೀರಾವರಿ ಯೋಜನೆಗಳು, ಕಾಲೋನಿ ಮತ್ತು ಕಚೇರಿಗಳ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಹೇಮಾವತಿ ನಾಲಾ ವೃತ್ತದ ಸೂಪರಡೆಂಟಿಂಗ್ ಎಂಜಿನಿಯರ್ ಫೆಬ್ರವರಿ ತಿಂಗಳಲ್ಲೇ ಪತ್ರ ಬರೆದಿದ್ದರೂ ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು.

ನಾಗಮಂಗಲ, ಚನ್ನರಾಯಪಟ್ಟಣ ಮತ್ತು ಪಾಂಡವಪುರ ವೃತ್ತ ವ್ಯಾಪ್ತಿ ನಾಲೆಗಳ ಶಿಲ್ಟ್ ಮತ್ತು ಜಂಗಲ್ ಕಟ್ಟಿಂಗ್ ಕಾಮಗಾರಿ ನಡೆಸಲಾಗಿದೆ. ಆದರೆ, ನಮ್ಮ ತಾಲೂಕಿನ ನೀರಾವರಿ ಇಲಾಖೆ ಎಂಜಿನಿಯರುಗಳ ನಿಷ್ಕ್ರಿಯತೆಯಿಂದ 22 ಕಾಮಗಾರಿಗಳಲ್ಲಿ ಕೇವಲ 6 ಕಾಮಗಾರಿಗಳು ಮಾತ್ರ ಅನುಮೋದನೆಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಎಂಜಿನಿಯರುಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಾಲುವೆಗಳಲ್ಲಿ ನೀರು ಹರಿಸಿದಾಗ ಶಿಲ್ಟ್ ಮತ್ತು ಜಂಗಲ್ ಕಟ್ಟಿಂಗ್ ತೆಗೆಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕೆಂದು ಸಭೆಯಲ್ಲಿಯೇ ಚನ್ನರಾಯಪಟ್ಟಣ ವೃತ್ತದ ಅಧೀಕ್ಷಕ ಎಂಜಿನಿಯರ್ ಗಂಗಾಧರ್ ಅವರನ್ನು ಆಗ್ರಹಿಸಿದರು.

ಈ ಹಿಂದೆ ಇಲ್ಲಿ ಕರ್ತವ್ಯದಲ್ಲಿದ್ದು ನಿವೃತ್ತರಾಗಿರುವ ಕಾರ್ಯಪಾಲಕ ಎಂಜಿನಿಯರ್ ಅವರು ತಾವು ಕರ್ತವ್ಯದಲ್ಲಿದ್ದಾಗ ಎಂದು ಸಭೆ ಮಾಡಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಆಗಲಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಹೇಮಾವತಿ ಜಲಶಯದಲ್ಲಿ 29 ಟಿಎಂಸಿಗೂ ಅಧಿಕ ನೀರಿದೆ. ಒಳಹರಿವು ಹೆಚ್ಚಾಗಿದೆ. 3 ಸಾವಿರ ಕ್ಯುಸೆಕ್ ನೀರು ಹರಿಸಿದರೆ ಈ ವ್ಯಾಪ್ತಿಯ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮೆ ನೀರಿನಿಂದ ತುಂಬಿಸಬಹುದು. ಈ ಬಗ್ಗೆ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿಯೂ ಮಾತನಾಡಿದ್ದೇನೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಲಿಂಗೇಗೌಡರ ಬಳಿಯೂ ಮಾತನಾಡಲು ಪ್ರಯತ್ನಿಸಿದ್ದು, ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ತಕ್ಷಣವೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಹೇಮಾವತಿ ಜಲಾಶಯದ ಎಡದಂಡೆ ನಾಲೆಗೆ ಅಗತ್ಯ ನೀರು ಹರಿಸಿ ನಾಲಾ ವ್ಯಾಪ್ತಿಯ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.

ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸದಿದ್ದರೆ ತಾಲೂಕಿನ ರೈತರ ಜೊತೆಗೂಡಿ ಹೋರಾಟಕ್ಕಿಳಿಯಬೇಕಾಗುತ್ತದೆ. ಈ ವಿಚಾರವನ್ನು ಅಧಿಕಾರಿಗಳು ಇಂದಿನ ಸಭಾ ನಡವಳಿಕೆಯಲ್ಲಿ ದಾಖಲಿಸಿಕೊಂಡು ರಾಜ್ಯ ಸರ್ಕಾರದ ಗಮನಕ್ಕೂ ತರಬೇಕು ಎಂದು ಸೂಚಿಸಿದರು.

ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕೆರೆ ಸುಮಾರು 600 ಎಕರೆಯಷ್ಟು ಭೌತಿಕ ವಿಸ್ತಾರ ಹೊಂದಿದೆ. ಈ ಕೆರೆಯನ್ನು ಒಬ್ಬನೇ ಒಬ್ಬ ವ್ಯಕ್ತಿ ಆಧುನಿಕ ಯಂತ್ರಗಳನ್ನು ಬಳಕೆ ಮಾಡಿ ಸುಮಾರು 30 ಎಕರೆಯಷ್ಟು ಒತ್ತುವರಿ ಮಾಡಿದ್ದಾನೆ. ಈ ಬಗ್ಗೆ ರೈತರು ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂಜಿನಿಯರ್ ಗಳನ್ನು ತರಾಟೆ ತೆಗೆದುಕೊಂಡರು.

ತಕ್ಷಣವೇ ಕೆರೆ ಒತ್ತುವರಿ ತೆರವುಗೊಳಿಸಿ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಬೇಕು. ಕಠಿಣ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯೂ ಕೆರೆಗಳ ಒತ್ತುವರಿಗೆ ಹಾದಿ ಸುಗಮ ಮಾಡಿದಂತಾಗುತ್ತದೆಂದು ಎಚ್ಚರಿಸಿದರು.

ಸಭೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ತಾಪಂ ಸಹಾಯಕ ಲೆಕ್ಕಾಧಿಕಾರಿ ಶಂಕರ್, ಎಇಇ ವಿಶ್ವನಾಥ್, ರಾಕೇಶ್, ಎಇ ಪ್ರಸನ್ನ ಹಾಗೂ ಮಹೋನ್ ಕುಮಾರ್ ಉಪಸ್ಥಿತರಿದ್ದರು.