ಸಾರಾಂಶ
ಧಾರವಾಡ:
ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನ ಘೋಷವಾಕ್ಯದಲ್ಲಿ ರೈತರ ಜಾತ್ರೆ ಎನಿಸಿರುವ ಕೃಷಿ ಮೇಳ ಶನಿವಾರದಿಂದ ನಾಲ್ಕು ದಿನ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಕಳೆದ ಎರಡು ತಿಂಗಳಿಂದ ಈ ಮೇಳಕ್ಕಾಗಿ ಸಿದ್ಧತೆ ನಡೆದಿದೆ.ನಾಲ್ಕು ದಿನಗಳ ಕಾಲ ಆಯೋಜಿಸಿರುವ ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮೇಳದ ಮುಖ್ಯ ಉದ್ದೇಶವಾಗಿದ್ದು, ಮೇಳದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ಬಾರಿಗೆ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಮಾಹಿತಿ ನೀಡಿದರು.
ಏನೇನು ಪ್ರದರ್ಶನ:ಮೇಳದ ಪ್ರಮುಖ ಆಕರ್ಷಣೆ ಕೃಷಿ ವಸ್ತು ಪ್ರದರ್ಶನ. ಇದರಲ್ಲಿ 150 ಹೈಟೆಕ್ ಮಳಿಗೆ, 241 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್, ಭಾರಿ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳ ಇರಲಿವೆ. ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿ ಹಾಗೂ ಕೃಷಿ ತಾಂತ್ರಿಕತೆಗಳು ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳು, ಎಣ್ಣೆಕಾಳು, ದ್ವಿದಳ ಧಾನ್ಯಗಳು ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ ಹಾಗೂ ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡ್ರೋನ್ ಪ್ರದರ್ಶನ, ಕೃಷಿ ತಜ್ಞರೊಂದಿಗೆ ಸಮಾಲೋಚನೆ ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ ಸೇರಿದಂತೆ ಕೃಷಿ ತಂತ್ರಜ್ಞಾನವನ್ನು ರೈತರಿಗೆ ತೋರಿಸಲಾಗುತ್ತದೆ. ಜಾನುವಾರುಗಳ ಪ್ರದರ್ಶನ ರೈತರ ಗಮನ ಸೆಳೆಯಲಿದೆ. ಹಿಂಗಾರು ಬಿತ್ತನೆಗಾಗಿ ಬೀಜ ಮೇಳವು ಇರಲಿದೆ.
ನಾಳೆ ಮೇಳದ ಉದ್ಘಾಟನೆ:ರಾಜ್ಯ ಹಾಗೂ ಹೊರ ರಾಜ್ಯಗಳ ರೈತರ ಅನುಕೂಲಕ್ಕಾಗಿ ಮೇಳದಲ್ಲಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ರೈತರಿಗೆ ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಮತ್ತು ಪೋಲೀಸ್ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಮೇಳದ ಮೊದಲ ದಿನ ಶನಿವಾರ ಕೃಷಿಮೇಳ ವೇದಿಕೆಯಲ್ಲಿ ಬೀಜ ಮೇಳ ಉದ್ಘಾಟನೆ ಹಾಗೂ ವಿಚಾರಗೋಷ್ಠಿ ನಡೆಯಲಿದೆ. 2ನೇ ದಿನ ಭಾನುವಾರ ಮೇಳದ ಉದ್ಘಾಟನೆ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ. 3ನೇ ದಿನ ಸೋಮವಾರ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಪ್ರಗತಿಪರ ರೈತರ ಅನಿಸಿಕೆಗಳ ಕಾರ್ಯಕ್ರಮ ಇರಲಿದೆ. ಇನ್ನು ಕೊನೆ ದಿನ ಮಂಗಳವಾರ ಚರ್ಚಾಗೋಷ್ಠಿ ಹಾಗೂ ಸಮಾರೋಪ ನಡೆಯಲಿದೆ.
ಮೇಳಕ್ಕೆ ಮೆತ್ತಿಕೊಂಡ ಶಿಷ್ಟಾಚಾರದ ಪಾಲನೆ:ಕುಲಪತಿಗಳ ಬಾಯಿಗೆ ಬಂದದ್ದೇ ಬೈಲಾ ಅಲ್ಲ... ಮುಖ್ಯಮಂತ್ರಿಗಳು ಭಾಗವಹಿಸುತ್ತಿರುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಅನ್ವಯಿಸುವುದಿಲ್ಲವೇ? ಅಥವಾ ಇದು ನಿಮ್ಮ ಸರ್ವಾಧಿಕಾರಿ ಧೋರಣೆಯೇ? ಅಥವಾ ದುರಹಂಕಾರವೇ? ಕುಲಸಚಿವರ ಹೆಸರನ್ನು ಹಾಕದೇ ನೀವು ಮಾಧ್ಯಮದ ಮುಂದೆ ಉಢಾಪೆ ಉತ್ತರ ನೀಡುತ್ತೀರಿ... ನಿಮ್ಮ ಹಿರಿತನಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ತಾಳೆಯಾಗುತ್ತಿಲ್ಲ...!ಶನಿವಾರದಿಂದ ನಾಲ್ಕು ದಿನ ನಡೆಯಲಿರುವ ಕೃಷಿ ಮೇಳದಲ್ಲಿ ಶಿಷ್ಟಾಚಾರ ಪಾಲನೆ ಆಗದೇ ಇರುವ ಕುರಿತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕುಲಪತಿ ಪ್ರೊ. ಪಿ.ಎಲ್. ಪಾಟೀಲರಿಗೆ ಈ ರೀತಿಯಾಗಿ ಪತ್ರಿಕಾ ಪ್ರಕಟಣೆ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಕ್ಷಣದವರೆಗೂ ಅಕಾಡೆಮಿಗೆ ಕನಿಷ್ಠ ಸೌಜನ್ಯಕ್ಕೂ ಒಂದು ಆಮಂತ್ರಣ ಪತ್ರಿಕೆ ನೀಡಿಲ್ಲ. ನಿಮ್ಮ ವರ್ತನೆ ಸರ್ವಾಧಿಕಾರಿತನ ತೋರುತ್ತಿದೆ. ತಾವು ಅರ್ಥ ಮಾಡಿಕೊಂಡು ಸೌಜನ್ಯದಿಂದ ಎಲ್ಲರೊಂದಿಗೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸುವುದು ಒಳ್ಳೆಯದು. ಸರ್ವಾಧಿಕಾರಿಯೇ ಆಗಿರಬೇಕೆನ್ನುವ ಇಚ್ಛೆ ತಮಗಿದ್ದರೆ ದಕ್ಷಿಣ ಕೊರಿಯಾಕ್ಕೆ ಹೋಗಬಹುದು. ವಿಶ್ವವಿದ್ಯಾಲಯದಲ್ಲಿ ಸಂವಿಧಾನದತ್ತ ಹುದ್ದೆಯಲ್ಲಿದ್ದು ಘನತೆಗೆ ತಕ್ಕಂತೆ ಇರುವುದಾದರೆ ಇರುವುದು ಒಳ್ಳೆಯದು ಎಂದು ತಮ್ಮ ಹೇಳಿಕೆಯಲ್ಲಿ ಶಿಷ್ಟಾಚಾರದ ಪಾಠ ಮಾಡಿದ್ದಾರೆ.