ಸಾರಾಂಶ
ಹಾವೇರಿ: ಭಾರತದಲ್ಲಿ ಜಾನುವಾರುಗಳ ಸಂಖ್ಯೆ ಸ್ವತಂತ್ರ ಪೂರ್ವದಲ್ಲಿ ಹೋಲಿಸಿದರೆ ಶೇ. ೫೦ರಷ್ಟು ಕಡಿಮೆಯಾಗಿದೆ. ಕಾರಣ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಸಾಕಾಣಿಕೆ ಮಾಡಬೇಕೆಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ. ಸಂತಿ ಹೇಳಿದರು.ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾವೇರಿ ವತಿಯಿಂದ ೨೦೨೪-೨೫ನೇ ಸಾಲಿನ ವಿಸ್ತರಣಾ ಘಟಕ ಬಲಪಡಿಸುವ ಯೋಜನೆ ಅಡಿಯಲ್ಲಿ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ ಹಾಗೂ ಪ್ರಾಣಿಜನ್ಯ ರೋಗಗಳ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಮಾತನಾಡಿ, ರೈತ ಬಾಂಧವರು ಪಶುಪಾಲನಾ ಇಲಾಖೆಯಿಂದ ಸಿಗುವ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ರೈತರಿಗೆ ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಇಲಾಖೆ ಉಪನಿರ್ದೇಶಕ (ಪಾಲಿಕ್ಲಿನಿಕ್) ಡಾ. ಜಯಕುಮಾರ ಕಂಕಣವಾಡಿ ಮಾತನಾಡಿ, ಮನೆಯಲ್ಲಿ ಒಂದು ಉತ್ತಮ ಜಾನುವಾರು ಉತ್ಪತ್ತಿ ಆಗಬೇಕಾದರೆ ಕರುಗಳು ಪಾಲನೆ ಮತ್ತು ಪೋಷಣೆ ಬಹಳ ಅವಶ್ಯಕತೆ ಇರುತ್ತದೆ. ಕರು ಹುಟ್ಟಿದ ಮೇಲೆ ಗಿಣ್ಣದ ಹಾಲು ಕರುಗಳಿಗೆ ಕುಡಿಸುವುದರಿಂದ ಕರುಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಕರುಗಳಿಗೆ ನಿಗದಿತ ಅವಧಿಯಲ್ಲಿ ನಿಯಮಿತವಾಗಿ ಜಂತುನಾಶಕ ಔಷಧಿಯನ್ನು ಹಾಕಬೇಕು ಎಂದು ಮಾಹಿತಿ ನೀಡಿದರು. ಸಹಾಯಕ ನಿರ್ದೇಶಕ ಡಾ. ಪರಮೇಶ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೈನುಗಾರಿಕೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಭಾಗವಹಿಸಿರುವ ಉತ್ತಮ ಆಕಳು ಮತ್ತು ಕರುಗಳಿಗೆ ಚಾಂಪಿಯನ್, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ಜಾನುವಾರಗಳಿಗೂ ಸಾಲ್ಟ್ ಲಿಕ್, ಐರನ್ ಟಾನಿಕ್ ಮತ್ತು ಎರಡು ಲೀಟರ್ ಸ್ಟೀಲ್ ಕ್ಯಾನ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಭಾಗವಹಿಸಿದ ಎಲ್ಲಾ ಜಾನುವಾರುಗಳಿಗೂ ಬಹುಮಾನ ಮತ್ತು ಔಷಧಿಗಳನ್ನು ನೀಡಲಾಯಿತು. ಶ್ರೀ ಚನ್ನಬಸವನಗೌಡ ಹನುಮಗೌಡ ಇವರ ಆಕಳು ಶಿಬಿರದಲ್ಲಿ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಯಿತು. ನಿರ್ಣಾಯಕರಾಗಿ ಡಾ. ರಾಘವೇಂದ್ರ ಕಿತ್ತೂರ, ಡಾ.ಪವನ ಬಿ.ಎಲ್., ಮತ್ತು ಡಾ. ಬಾಲಾಜಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶಶಿಧರಗೌಡ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಮೃತ್ಯುಂಜಯ ವಗ್ಗಣ್ಣನವರ, ಡಾ.ಕಾರ್ತಿಕ, ಡಾ. ಹರ್ಷ, ಜಾನುವಾರು ಅಭಿವೃದ್ಧಿ ಅಧಿಕಾರಿಗಳಾದ ಶಿವಯೋಗಿ ಕರಿಯಪ್ಪನವರ, ಪಶುವೈದ್ಯಕೀಯ ಪರೀಕ್ಷಕರಾದ ಪ್ರಕಾಶ ಅಂಕಲಕೋಟಿ, ಜೆ.ಪಿ. ವಾಲ್ಮೀಕಿ, ಭರಮಪ್ಪ ಕಟಗೇರ, ಕೆ.ಜಿ. ಚಾವಡಿ, ಮಹಾಸ್ವಾಮಿ ಮನು ನೆಗಳೂರ, ಮಾಂತೇಶ ಕುಮ್ಮಣ್ಣಿಯವರ ಪಾಲ್ಗೊಂಡಿದ್ದರು. ಡಾ.ಎಂ.ಎ. ಬೂದಿಹಾಳ ನಿರೂಪಿಸಿದರು.