ಸಾರಾಂಶ
ಇತ್ತೀಚೆಗಂತು ಕಾಡಾನೆಗಳ ದಾಳಿ ಮತ್ತಷ್ಟು ಹೆಚ್ಚಾಗಿರುವುದರಿಂದ ಬೆಳೆ ಹಾನಿ ಮಾತ್ರವಲ್ಲದೆ ರೈತರ ಜೀವ ಭಯದಲ್ಲಿ ಬದುಕು ನಡೆಸುವಂತಾಗಿದೆ. ಕೆಲ ಭಾಗಗಳಲ್ಲಿ ಕಾಡಾನೆ - ಮನುಷ್ಯ ಸಂಘರ್ಷ ನಡೆದಿರುವ ಉದಾಹರಣೆಗಳು ಇವೆ.
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಕೈಲಾಂಚ ಹೋಬಳಿ ಭಾಗದಲ್ಲಿ ರೈತರಿಗೆ ಗಜಪಡೆಗಳಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಕಾಡಂಚಿನಲ್ಲಿರುವ ಕೈಲಾಂಚ ಹೋಬಳಿಯ ಅಂಜನಾಪುರ, ವಿಭೂತಿಕೆರೆ, ಕುಂಬಾಪುರ, ಕವಣಪುರ, ಕಾಡನಕುಪ್ಪೆ, ಲಕ್ಕೋಚನಹಳ್ಳಿ, ನೆಲಮಾಲೆ, ದೇವರದೊಡ್ಡಿ, ವಡ್ಡರದೊಡ್ಡಿ ಸೇರಿದಂತೆ 20ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರತಿನಿತ್ಯ ಕಾಡಾನೆಗಳು ಕೃಷಿ ಜಮೀನು, ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶಪಡಿಸುತ್ತಿವೆ.ಹಲವು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಇತ್ತೀಚೆಗಂತು ಕಾಡಾನೆಗಳ ದಾಳಿ ಮತ್ತಷ್ಟು ಹೆಚ್ಚಾಗಿರುವುದರಿಂದ ಬೆಳೆ ಹಾನಿ ಮಾತ್ರವಲ್ಲದೆ ರೈತರ ಜೀವ ಭಯದಲ್ಲಿ ಬದುಕು ನಡೆಸುವಂತಾಗಿದೆ. ಕೆಲ ಭಾಗಗಳಲ್ಲಿ ಕಾಡಾನೆ - ಮನುಷ್ಯ ಸಂಘರ್ಷ ನಡೆದಿರುವ ಉದಾಹರಣೆಗಳು ಇವೆ.ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಅಲ್ಪಸ್ವಲ್ಪ ಪರಿಹಾರ ಸಿಗುತ್ತಿದೆಯಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬಹುತೇಕ ರೈತರು ರಾತ್ರಿ ನಿದ್ದೆಯಿಲ್ಲದೆ ಬೆಳೆಯನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂದಿದೆ. ಈ ಸಮಸ್ಯೆಯ ಪರಿಹಾರಕ್ಕೆ ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.''''''''ಕಾಡು ಪ್ರಾಣಿಗಳ ಉಪಟಳ ತಾಳಲಾರದೆ ಬಹುತೇಕ ರೈತರು ಕೃಷಿ ಕೈಬಿಟ್ಟು, ನೂರಾರು ಎಕರೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಕೂಡ ಕಾಡಾನೆ ಸ್ಥಳಾಂತರದ ಪ್ರಯತ್ನ ಮಾಡುತ್ತಿಲ್ಲ. ಕೇವಲ ಪಟಾಕಿ, ಅಶ್ರುವಾಯು ಸಿಡಿಸಿ ಕಾಡಾನೆ ಓಡಿಸುವ ಪ್ರಯತ್ನ ನಡೆಸುತ್ತಿದೆಯಾದರೂ ಕಾಡಾನೆಗಳಿಗೆ ಅದರ ಶಬ್ದ ಮಾಮೂಲಿಯಾಗಿ ಬಿಟ್ಟಿದೆ ಎಂಬುದು ರೈತರ ವಾದ.ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಆಹಾರ ಅರಸಿಕೊಂಡು ಕೈಲಾಂಚ ಭಾಗಕ್ಕೆ ಬರುತ್ತಲೇ ಇವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಓಡಿಸುವುದಕ್ಕಿಂತ ಅವುಗಳನ್ನು ಸ್ಥಳಾಂತರಗೊಳಿಸುವುದು ಉತ್ತಮ. ಇದರಿಂದ ಬೆಳೆಯನ್ನು ರಕ್ಷಣೆ ಮಾಡಬಹುದು ಎನ್ನುತ್ತಾರೆ ಕೈಲಾಂಚ ಭಾಗದ ರೈತರು....ಕೋಟ್ ...ಕೆಲವು ದಿನಗಳಿಂದ ಕಾಡಾನೆಗಳು ನಮ್ಮ ಗ್ರಾಮದಲ್ಲಿ ಬೆಳೆ ಹಾನಿ ಮಾಡಿದೆ. ಮಾವು, ತೆಂಗು ಸೇರಿದಂತೆ ಬೆಳೆಗಳನ್ನು ನಾಶ ಮಾಡುತ್ತಿವೆ. ನಾವು ಕಷ್ಟಪಟ್ಟು ಕೃಷಿ ಮಾಡಿದರೆ ಕಾಡಾನೆ ದಾಳಿ ಮಾಡಿ ಕೃಷಿಕರ ಅನ್ನವನ್ನೇ ಕಿತ್ತುಕೊಳ್ಳುತ್ತದೆ. ಅರಣ್ಯ ಇಲಾಖೆಯ ಅತ್ಯಲ್ಪ ಪರಿಹಾರವು ರೈತರ ಬದುಕನ್ನು ಹಸನುಗೊಳಿಸದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಗುವುದು.- ಕುಂಬಾಪುರ ಪಾರ್ಥ, ಗ್ರಾಮಸ್ಥ, ಕುಂಬಾಪುರ....ಕೋಟ್ ...
ಕೆಮ್ಮಣ್ಣು ಗುಡ್ಡೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಕೈಲಾಂಚ ಹೋಬಳಿ ಭಾಗದಲ್ಲಿ ದಾಳಿ ನಡೆಸಿ ಬೆಳೆ ಹಾನಿ ಮಾಡಿದೆ. ನಮ್ಮಲ್ಲಿದ್ದ 44 ಆನೆಗಳ ಪೈಕಿ 30 ಆನೆಗಳನ್ನು ಡ್ರೈವ್ ಮಾಡಲಾಗಿದೆ. ಈಗ 14 ಆನೆಗಳಿದ್ದು, ಮತ್ತೆ 4 ಆನೆಗಳು ಬಂದಿವೆ. ಸಾತನೂರು ಬಳಿ 4, ಕಬ್ಬಾಳು 6, ಚನ್ನಪಟ್ಟಣದಲ್ಲಿ 3 , ತೆಂಗಿನಕಲ್ಲು ಬಳಿ 1 ಆನೆಯಿದೆ. ಕೆಮ್ಮಣ್ಣುಗುಡ್ಡೆ ಬಳಿಯಿದ್ದ 1 ಆನೆ ಬಂದಿದೆ. ಅದನ್ನು ಹಿಮ್ಮಟ್ಟಿಸಲು ಕ್ರಮ ವಹಿಸಲಾಗಿದೆ. - ಮನ್ಸೂರ್ , ವಲಯ ಅರಣ್ಯಾಧಿಕಾರಿಗಳು, ರಾಮನಗರ.28ಕೆಆರ್ ಎಂಎನ್ 6.ಜೆಪಿಜಿ
ಕಾಡಾನೆ ದಾಳಿಗೆ ಮಾವಿನ ಮರ ನಾಶವಾಗಿರುವುದು.