ಕಾಲುವೆಗಳಿಗೆ ನ.30ರ ವವರೆಗೆ ನೀರು ಹರಿಸಬೇಕೆಂದು ನಾರಾಯಣಪುರದ ಕೆಬಿಜೆಎಲ್ ಕಚೇರಿಯೆದುರು ಜರುಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಧರಣಿಯು ಬುಧವಾರ ತೀವ್ರ ಸ್ವರೂಪಕ್ಕೆ ಕಾಲಿಟ್ಟಿತು. ಭಾರತೀಯ ಕೃಷಿಕ ಸಮಾಜದ ರಾಜ್ಯ ಕಾರ್ಯಧ್ಯಕ್ಷ ಮಲ್ಲನಗೌಡ ಹಗರಟಗಿ ನೇತೃತ್ವದಲಿ ಬುಧವಾರ ಬೆಳಗ್ಗೆ 8ಕ್ಕೆ ಆರಂಭವಾದ ಪ್ರತಿಭಟನೆಗೆ ಮಧ್ಯಾಹ್ನದ ವೇಳೆ ನೂರಾರು ರೈತರು ಬೈಕ್ ರ‍್ಯಾಲಿ ಮೂಲಕ ನಾರಾಯಣಪುರ ಗ್ರಾಮಕ್ಕೆ ಆಗಮಿಸಿ, ಭಾರತೀಯ ಕೃಷಿಕ ಸಮಾಜದ ನಡೆಸುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲವನ್ನು

ಕನ್ನಡಪ್ರಭ ವಾರ್ತೆ ಕೊಡೇಕಲ್

ಕಾಲುವೆಗಳಿಗೆ ನ.30ರ ವವರೆಗೆ ನೀರು ಹರಿಸಬೇಕೆಂದು ನಾರಾಯಣಪುರದ ಕೆಬಿಜೆಎಲ್ ಕಚೇರಿಯೆದುರು ಜರುಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಧರಣಿಯು ಬುಧವಾರ ತೀವ್ರ ಸ್ವರೂಪಕ್ಕೆ ಕಾಲಿಟ್ಟಿತು. ಭಾರತೀಯ ಕೃಷಿಕ ಸಮಾಜದ ರಾಜ್ಯ ಕಾರ್ಯಧ್ಯಕ್ಷ ಮಲ್ಲನಗೌಡ ಹಗರಟಗಿ ನೇತೃತ್ವದಲಿ ಬುಧವಾರ ಬೆಳಗ್ಗೆ 8ಕ್ಕೆ ಆರಂಭವಾದ ಪ್ರತಿಭಟನೆಗೆ ಮಧ್ಯಾಹ್ನದ ವೇಳೆ ನೂರಾರು ರೈತರು ಬೈಕ್ ರ‍್ಯಾಲಿ ಮೂಲಕ ನಾರಾಯಣಪುರ ಗ್ರಾಮಕ್ಕೆ ಆಗಮಿಸಿ, ಭಾರತೀಯ ಕೃಷಿಕ ಸಮಾಜದ ನಡೆಸುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಸೂಚಿಸಿ ಸರ್ಕಾರ ಮತ್ತು ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಏಕಾ ಏಕಿಯಾಗಿ ರೈತರು ಆಕ್ರೋಶದಿಂದ ಸಿಇ ಕಚೇರಿ ಆವರಣದೊಳಗೆ ನುಗ್ಗಿ ಚೀಫ್‌ ಇಂಜಿನೀಯರ್‌ ಕೋಣೆ ಪ್ರವೇಶಿಸಲು ಮುಂದಾದರು. ಸ್ಥಳದಲ್ಲಿಯೇ ಇದ್ದ ಸಿಪಿಐ ಮತ್ತು ಪಿಎಸ್‌ಐಗಳು ರೈತರನ್ನು ಸಮಾಧಾನಪಡಿಸಿದರು. ಆದರೂ ರೈತರು ಚೀಫ್ ಇಂಜಿನೀಯರ್‌ ಕೋಣೆಗೆ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಮಲ್ಲಿನಾಥಗೌಡ ಬಿರಾದಾರ ಮಾತನಾಡಿ, ನಾವು ಕೇಳುತ್ತಿರುವುದು ನಮ್ಮ ನೀರು. ಇದು ನಮ್ಮ ಹಕ್ಕು. ಆದರೆ, ಇದು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ನ.30 ರವರೆಗೆ ನಿರಂತರವಾಗಿ ಕಾಲುವೆಗೆ ನೀರು ಹರಿಸಿ ಎಂದು ಆಗ್ರಹಿಸಿದರು.

ಭಾರತೀಯ ಕೃಷಿಕ ಸಮಾಜದ ರಾಜ್ಯ ಸಂಘಟನೆಯ ರಾಜ್ಯ ಕಾರ‍್ಯಾಧ್ಯಕ್ಷ ಮಲ್ಲನಗೌಡ ಮತ್ತು ರಾಜ್ಯ ಗೌರವಾಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ ಮಾತನಾಡಿ, ನಮ್ಮ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿನ ನೀರನ್ನು ತೆಲಂಗಾಣ ಮತ್ತು ಆಂಧ್ರಕ್ಕೆ ಹರಿಸಲಾಗುತ್ತಿದೆ. ನಮ್ಮ ರೈತರು ಕಣ್ಣೀರು ಹಾಕಿದರೂ ಚಿಂತೆಯಿಲ್ಲ. ಬೇರೆ ರಾಜ್ಯದವರು ಆರಾಮವಾಗಿರಲಿ ಎಂಬುದೇ ಸರ್ಕಾರದ ನೀತಿಯಾಗಿದೆ ಎಂದರು.

ಅವಳಿ ಜಲಾಶಯಗಳ ಸ್ಥಿತಿಗತಿ ನೋಡಿದರೆ ಮುಂಗಾರು ಹಂಗಾಮಿನ ಬೆಳೆಗಳಿಗೆ ನಿರಂತರವಾಗಿ ನೀರು ಲಭ್ಯವಿದೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಬುಧವಾರ ಕಚೇರಿಗೆ ಬೀಗ ಹಾಕಿದ್ದು ಗುರುವಾರ ಜಲಾಶಯಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೆವೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ತಡೆ: ಅಂದಾಜು ನೂರಾರು ಜನ ರೈತರು ಪ್ರತಿಭಟನೆಗೆ ಬುಧವಾರ ಬೆಂಬಲ ನೀಡಿದ್ದರಿಂದ ತೀವ್ರತೆ ಏರಿದ್ದು ಒಂದಡೆಯಾದರೆ, ಇನ್ನೊಂದೆಡೆ ಆಕ್ರೋಶಗೊಂಡಿದ್ದ ರೈತರು ರಾಜ್ಯ ಹೆದ್ದಾರಿಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಆದರೆ ಮಧ್ಯ ಪ್ರವೇಶಿಸಿದ ಸಿಪಿಐ ರವಿಕುಮಾರ ಮಾತನಾಡಿ, ಪ್ರತಿಭಟನೆ ಕುರಿತಂತೆ ಜಿಲ್ಲಾಧಿಕಾರಿಗೆ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗಿದ್ದು, ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ಆಗಮಿಸಲಿದ್ದಾರೆ ಎಂದು ಹೇಳಿ ರಸ್ತೆ ತಡೆ ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಹುಣಸಗಿಯ ಮಹಾಂತಸ್ವಾಮೀ ವೃತ್ತದಿಂದ ರೈತವರ್ಗವು ಪಾದಯಾತ್ರೆಯ ಮುಖಾಂತರ 36 ಕಿ.ಮೀ ನಡೆದು ನಾರಾಯಣಪುರದ ಕೆಬಿಜೆಎನ್‌ಎಲ್ ಕಚೇರಿಯ ಮುಂಭಾಗ ಮಲ್ಲನಗೌಡ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. ಶೀಘ್ರವೇ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದಿದ್ದರೆ ಜಿಲ್ಲೆಯ ರೈತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ನೀರಿಗಾಗಿ ರೈತರು ಮಾಡುತ್ತಿರುವ ಈ ಹೋರಾಟಕ್ಕೆ ಭಾಜಪ ಹಾಗೂ ರೈತ ಮುಖಂಡ ಹನುಮಂತನಾಯಕ (ಬಬ್ಲೂಗೌಡ) ಸಹಿತ ಮಠಾಧೀಶರು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಬೆಂಬಲ ನೀಡಿದ್ದಾರೆ.

ಜಲಾಶಯದಲ್ಲಿ ನೀರು ಇಲ್ಲಾ ಎಂದು ಹೇಳುವ ಅಧಿಕಾರಿಗಳು, ನೆರೆಯ ತೆಲಂಗಾಣಕ್ಕೆ ರಾತ್ರಿ ಹೊತ್ತು ಕದ್ದು ಮುಚ್ಚಿ ನೀರು ಬಿಡಲು ಬರುತ್ತಾರೆ. ಆದರೆ, ನಮ್ಮದೇ ನೆರೆಯ ಜಿಲ್ಲೆಯ ಆಣೆಕಟ್ಟು ಆಲಮಟ್ಟಿಯಿಂದ ನೀರು ಬಿಡಿಸಿ ನಮ್ಮ ಭಾಗದ ರೈತರಿಗೆ ಕೊಡಲು ಯಾಕೆ ಸರ್ಕಾರ ಹಾಗೂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ? ಕೂಡಲೇ ರೈತರ ಬೆಳೆಗಳಿಗೆ ನೀರು ನೀಡಿ ರೈತನ ಹಿತ ಕಾಪಾಡಿ ಎಂದು ಭಾರತೀಯ ಕೃಷಿಕ ಸಮಾಜ ಜ್ಯ ರಾಕಾರ್ಯಾಧ್ಯಕ್ಷ ಮಲ್ಲನಗೌಡ ಹಗರಟಗಿ ಹೇಳಿದರು.