ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಕೃಷಿಯಲ್ಲಿ ಹೊಸ ತಂತ್ರಜ್ಞಾನ, ನೀರಿನ ಸಮರ್ಪಕ ಬಳಕೆ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಕುರಿತು ವಿಚಾರ ಗೋಷ್ಠಿಗಳಲ್ಲಿ ಚರ್ಚೆ ನಡೆಯಬೇಕು. ರಸಗೊಬ್ಬರದ ಅತಿಯಾದ ಬಳಕೆ ಕಡಿಮೆ ಮಾಡಿ ಮಣ್ಣಿನ ಆರೋಗ್ಯದ ಜೊತೆಗೆ ಜನರ ಆರೋಗ್ಯಕ್ಕೂ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು, ನುಡಿ, ಕಲೆ, ಸಾಹಿತ್ಯದ ಕುರಿತು ಚರ್ಚೆ ನಡೆಸುವ ಜೊತೆಗೆ ರೈತರ ಬದುಕು, ಬವಣೆ ಬಗ್ಗೆ ಕೂಡ ವಿಚಾರ ಗೋಷ್ಠಿಯಲ್ಲಿ ಚರ್ಚೆಯಾಗಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರೂ ಆದ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಕಳೆದ ವರ್ಷ ಸುಮಾರು 1.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ, ಈ ವರ್ಷ ಮಳೆ ಕೊರತೆಯಿಂದ ಶೇ.23ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದರು.

ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ಹೀಗಾಗಿ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಇಂತಹ ವೇದಿಕೆಗಳಲ್ಲಿ ಚರ್ಚೆಯಾಗಬೇಕು ಎಂದರು.

ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಕೃಷಿಯಲ್ಲಿ ಹೊಸ ತಂತ್ರಜ್ಞಾನ, ನೀರಿನ ಸಮರ್ಪಕ ಬಳಕೆ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಕುರಿತು ವಿಚಾರ ಗೋಷ್ಠಿಗಳಲ್ಲಿ ಚರ್ಚೆ ನಡೆಯಬೇಕು. ರಸಗೊಬ್ಬರದ ಅತಿಯಾದ ಬಳಕೆ ಕಡಿಮೆ ಮಾಡಿ ಮಣ್ಣಿನ ಆರೋಗ್ಯದ ಜೊತೆಗೆ ಜನರ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ರೈತರ ಆದಾಯ ಹೆಚ್ಚಿಸುವ ಜೊತೆಗೆ ಆರೋಗ್ಯಕರ ಕೃಷಿ ಪದ್ಧತಿಗಳತ್ತ ಗಮನ ಹರಿಸುವುದು ಇಂದು ಅಗತ್ಯವಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಹಂತದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನ ಹಾಗೂ ಪಿಯುಸಿ ಫಲಿತಾಂಶದಲ್ಲಿ 12ನೇ ಸ್ಥಾನ ಪಡೆದಿರುವುದು ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ರಾಜ್ಯದಲ್ಲಿ 224 ಎಂಜಿನಿಯರಿಂಗ್ ಕಾಲೇಜುಗಳಿವೆ. ವರ್ಷಕ್ಕೆ ಸುಮಾರು 1.65 ಲಕ್ಷ ಎಂಜಿನಿಯರ್‌ಗಳು ಹೊರ ಬರುತ್ತಿದ್ದಾರೆ. ಯುವಕರಿಗೆ ಶಿಕ್ಷಣದ ಜೊತೆಗೆ ಅವರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಬಗ್ಗೆಯೂ ಸಮಾಜ ಚಿಂತಿಸಬೇಕಾಗಿದೆ ಎಂದರು.

1938ರ ಶಿವಪುರ ಧ್ವಜ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದ ಐತಿಹಾಸಿಕ ನೆಲ ಮದ್ದೂರು. ಇಂತಹ ಹೋರಾಟದ ಪರಂಪರೆ ಹೊಂದಿರುವ ತಾಲೂಕಿನ ಸಮ್ಮೇಳನವು ಸಮಾಜದ ಸಮಸ್ಯೆಗಳ ಕುರಿತು ಚಿಂತನೆ ನಡೆಸುವ ವೇದಿಕೆಯಾಗಬೇಕು. ರೈತರ ಬದುಕು, ಯುವಕರ ಭವಿಷ್ಯ, ಉದ್ಯೋಗ ಹಾಗೂ ಶಿಕ್ಷಣದಂತಹ ವಿಷಯಗಳ ಬಗ್ಗೆಯೂ ಸಾಹಿತ್ಯ ವಲಯದಲ್ಲಿ ಚರ್ಚೆ ನಡೆಯಬೇಕು ಎಂದರು.

ಈ ಹಿಂದೆ ಪುಸ್ತಕಗಳ ಮೂಲಕ ಸಾಹಿತ್ಯವನ್ನು ಓದುವ ಮತ್ತು ಚರ್ಚಿಸುವ ಸಂಸ್ಕೃತಿ ಹೆಚ್ಚಾಗಿತ್ತು. ಇಂದು ಮೊಬೈಲ್ ಮೂಲಕ ಸಾಹಿತ್ಯವನ್ನು ಓದುವ, ನೋಡುವ ಹಾಗೂ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ತಂತ್ರಜ್ಞಾನದ ಬದಲಾವಣೆಯನ್ನು ಕನ್ನಡ ಸಾಹಿತ್ಯವೂ ಅಳವಡಿಸಿಕೊಂಡು ಹೊಸ ಪೀಳಿಗೆಯನ್ನು ಕನ್ನಡದತ್ತ ಸೆಳೆಯಬೇಕು ಎಂದರು.

ಶಾಸಕ ಉದಯ್ ಅವರು, 42 ವಿವಿಧ ಇಲಾಖೆಗಳ ಮೂಲಕ ಸುಮಾರು 2,200 ಕೋಟಿ ರು. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ, ಸಾಹಿತ್ಯ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ತಾಲೂಕಿನ ಸಮಗ್ರ ಪ್ರಗತಿಗೆ ಅವರು ಆದ್ಯತೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಶಾಸಕ ಕೆ.ಎಂ.ಉದಯ್, ಸಮ್ಮೇಳನಾಧ್ಯಕ್ಷೆ ಡಾ.ಎಂ.ಕೆಂಪಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಸುಂದರಾ ಕದಲೂರು, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ತಾಲೂಕು ಕಸಾಪ ಅಧ್ಯಕ್ಷ ಕೋಣಸಾಲೆ ಸುನೀಲ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ್ ಸೇರಿದಂತೆ ಸಾಹಿತ್ಯಾಸಕ್ತರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.