ಸಾರಾಂಶ
ಸೂರ್ಯಕಾಂತಿ ಖರೀದಿ ಕೇಂದ್ರ ಉದ್ಘಾಟನೆ
ಕನ್ನಡ ಪ್ರಭ ವಾರ್ತೆ, ಕಡೂರುಕೃಷಿ ಬದುಕಿನಿಂದ ರೈತರು ದೂರವಾಗುತ್ತಿದ್ದು ಮುಂದಿನ ದಿನಗಳಲ್ಲಿ ಜನರು ಆಹಾರಕ್ಕೆ ಪರದಾಡಬೇಕಾದ ಸ್ಥಿತಿ ದೂರವಿಲ್ಲ ಎಂದು ಶಾಸಕ ಕೆ.ಎಸ್. ಆನಂದ್ ಆತಂಕ ವ್ಯಕ್ತಪಡಿಸಿದರು.
ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಕಡೂರಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಿ ಸುಮಾರು 1 ಸಾವಿರ ಕ್ವಿಂಟಾಲ್ ಸೂರ್ಯಕಾಂತಿ ಖರೀದಿ ಉದ್ದೇಶ ಹೊಂದಲಾಗಿದೆ. ಮಾರುಕಟ್ಟೆಯಲ್ಲಿ ₹4300 ಇರುವ ಸೂರ್ಯಕಾಂತಿಗೆ ಸರ್ಕಾರ ಬೆಂಬಲ ಬೆಲೆಯಲ್ಲಿ ಕ್ವಿಂಟಾಲಿಗೆ ₹7590 ನಿಗದಿ ಮಾಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ ಎಂದರು.ಸೂರ್ಯಕಾಂತಿ, ಎಳ್ಳು, ನೆಲಗಡಲೆಗೆ ರೈತರು ತುಂಬಾ ಅವಲಂಬಿತರಾಗಿ ಬೆಳೆಯುತ್ತಿದ್ದರು. ಆದರೆ ಇದೀಗ ರೈತರು ಅಡಕೆ, ತೆಂಗು ಮಾಡುವ ಮೂಲಕ ಆಹಾರ ಪದಾರ್ಥಗಳು ಎಣ್ಣೆ ಕಾಳಿನ ಬೆಳೆ ಬೆಳೆಯುವುದು ಕಡಿಮೆಯಾಗಿದೆ. ಸರ್ಕಾರ ಮಾರುಕಟ್ಟೆ ಮತ್ತು ರೈತರನ್ನು ಪ್ರೋತ್ಸಾಹಿಸಲು ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರ ಎಲ್ಲ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೇಕಾಗಿದೆ. ಟೊಮೇಟೊ ಮತ್ತು ಈರುಳ್ಳಿ ಅದೃಷ್ಟದ ಬೆಳೆ. ದೇಶ ಮುಂದುವರಿದಿದ್ದರೂ ರೈತರಿಗೆ ಸವಲತ್ತು ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ.ಅಭಿವೃದ್ಧಿ ಶೀಲ ರಾಷ್ಟ್ರಗಳಂತೆ ನಮ್ಮ ರೈತರಿಗೆ ಮಾರ್ಗ ದರ್ಶನ ಬೇಕಾಗಿದೆ ಎಂದರು.
ರೈತರ ಜಮೀನುಗಳು ಲೇಔಟ್ ಗಳಾಗಿ ಮಾರ್ಪಾಡಾಗುತ್ತಿವೆ. ರೈತರು ಕೃಷಿ ಬಿಡುವ ಆತಂಕ ಎದುರಾಗಿದೆ. ಆಹಾರ ಬೆಳೆಯುವ ಜಮೀನುಗಳು ಸೈಟುಗಳಾಗಿ ಮಾರಾಟ ಮಾಡುತ್ತಿದ್ದು ಮುಂದೊಂದು ದಿನ ಆಹಾರದ ಕೊರತೆ ಎದುರಾಗಲಿದೆ. ಹಾಗಾಗಿ ರೈತರಿಗೆ ಕೃಷಿ, ತೋಟಗಾರಿಕೆ, ಎಪಿಎಂಸಿ, ಇಲಾಖೆಗಳು ಸಮರ್ಪಕ ಮಾರ್ಗದರ್ಶನ ನೀಡಬೇಕು ಎಂದರು.ಪ್ರಗತಿಪರ ಸಂಘದ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ, ಕಡೂರಿನಲ್ಲಿ ಸೂರ್ಯಕಾಂತಿ ಖರೀದಿಗೆ ಸುಮಾರು 88 ರೈತರು ನೋಂದಾಯಿಸಿದ್ದು, ಅ. 7ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಸೂರ್ಯಕಾಂತಿ ಬೆಳೆ ಇಳುವರಿ ಕಡಿಮೆಯಾಗುತ್ತಿದ್ದು ಯಾವುದೇ ಮಾಲನ್ನು ರಿಜೆಕ್ಟ್ ಮಾಡದೆ ಖರೀದಿಸುವಂತೆ ಶಾಸಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದು ರೈತರ ಪರವಿರುವ ಕಾಳಜಿಯಾಗಿದ್ದು ರೈತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಮಾತನಾಡಿ, ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಣ್ಣೆ ಕಾಳಿನ ಬೆಳೆಗಳ ಪ್ರಗತಿಪರ ಉತ್ಪಾದಕ ಸಂಘದಿಂದ ಸರ್ಕಾರ ಖರೀದಿ ಮಾಡುತ್ತಿದೆ. ರೈತರು ಬೆಳೆ ಸಮೀಕ್ಷೆ ಮಾಡಿಸಬೇಕು ಎಂದರು.ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಎಸ್. ಉಮೇಶ್ ಮಾತನಾಡಿ, ಶಾಸಕರ ಕಾಳಜಿಯಿಂದ ಇಂದು ಖರೀದಿ ಕೇಂದ್ರ ಆರಂಭವಾಗುತ್ತಿದ್ದು, ರೈತರಿಗೆ ಯಾವುದೇ ವಿಷಯದಲ್ಲಿ ಅನ್ಯಾಯವಾಗದಂತೆ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಎಪಿಎಂಸಿ ಜಿಲ್ಲಾ ಅಧಿಕಾರಿ ವಿಶ್ವನಾಥ್ ರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಕರ್ನಾಟಕ ಆಯಿಲ್ ಫೆಡರೇಷನ್ ಭರತ್, ಕಡೂರು ಪ್ರಗತಿಪರ ರೈತ ಉತ್ಪಾದಕರ ಸಂಘದ ನಿರ್ದೇಶಕರಾದ ಮಲಿಯಪ್ಪ, ಧರ್ಮರಾಜ್, ಜಯಣ್ಣ,ಓಂಕಾರ್, ತಿಮ್ಮರಾಯಪ್ಪ, ಮಧು, ಎಪಿಎಂಸಿಯ ಧರ್ಮರಾಜ್, ಅಧಿಕಾರಿ ಸಿಬ್ಬಂದಿ ವರ್ಗದವರು ರೈತರು ಹಾಜರಿದ್ದರು.-- ಬಾಕ್ಸ್---ಎಪಿಎಂಸಿ ಅಧಿಕಾರಿಗೆ ಸೂಚನೆ
ಕೆಲವು ದಿನಗಳಿಂದ ಸುಂಕ ವಸೂಲಿ ನೆಪದಲ್ಲಿ ಬಹಳಷ್ಟು ಅಧಿಕಾರಿಗಳು ವರ್ತಕರಿಗೆ ತೊಂದರೆ ನೀಡುತ್ತಿರುವ ಪ್ರಕರಣ ನಡೆಯುತ್ತಿವೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳು ಕ್ರಮ ವಹಿಸಬೇಕು. ಜಾಗೃತ ದಳದವರೇ ಅಥವಾ ಯಾರು ಹಿಡಿಯಬೇಕೆಂಬ ಗೊಂದಲವಿದ್ದು. ಈ ಬಗ್ಗೆ ಹಿರಿಯ ಅಧಿಕಾರಿಗಳಾದ ತಾವು ಕ್ರಮ ವಹಿಸಬೇಕು ಎಂದು ಜಿಲ್ಲೆಯ ಎಪಿಎಂಸಿ ಅಧಿಕಾರಿ ವಿಶ್ವನಾಥ ರೆಡ್ಡಿಯವರಿಗೆ ಸೂಚನೆ ನೀಡಿ, ಪದೇ ಪದೇ ತೊಂದರೆ ನೀಡಿದರೆ ನಾನೇ ಖುದ್ದು ಬರುತ್ತೇನೆ ಎಂದು ಶಾಸಕ ಆನಂದ್ ಎಚ್ಚರಿಸಿದರು.1ಕೆ ಕೆ ಡಿಯು2.
ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರವನ್ನು ಶಾಸಕ ಕೆ. ಎಸ್ ಅನಂದ್ ಉದ್ಘಾಟಿಸಿದರು.