ಬೆಳೆ ನಷ್ಟ ತಪ್ಪಿಸಲು ರೈತರು ತಪ್ಪದೆ ವಿಮೆ ಮಾಡಿಸಿ

| Published : Dec 02 2024, 01:19 AM IST

ಬೆಳೆ ನಷ್ಟ ತಪ್ಪಿಸಲು ರೈತರು ತಪ್ಪದೆ ವಿಮೆ ಮಾಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ರೇಷ್ಮೆ ಕೃಷಿಕರಿಗೆ ಸಾಮಾಜಿಕ ಭದ್ರತೆ ನೀಡಲು ಹೊಸ ಪ್ರಸ್ತಾವನೆಯನ್ನು ಸಂಸದ ಡಾ.ಸುಧಾಕರ್‌ ಅ‍ರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.. ವಿಮೆ ಹಾಗೂ ಕಿಸಾನ್‌ ಸಮ್ಮಾನ್‌ ಯೋಜನೆಗಳಲ್ಲಿ ರೇಷ್ಮೆ ಮತ್ತು ಮೀನುಗಾರಿಕಾ ಕ್ಷೇತ್ರದ ಕೃಷಿಕರನ್ನೂ ಪರಿಗಣಿಸುವಂತೆ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರ ಸರ್ಕಾರ ರೈತರ ಬೆಳೆ ನಷ್ಟ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಅದನ್ನು ಗಂಭೀರವಾಗಿ ಪರಿಗಣಿಸಿ, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಂತಹ ಮಹತ್ವದ ಯೋಜನೆಯನ್ನು ಜಾರಿಮಾಡಿದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ನಮ್ಮ ನಡೆ ಜನತೆಯ ಕಡೆ ಕಾರ್ಯಕ್ರಮದಡಿ ಭಾನುವಾರ ಜಿಲ್ಲೆಯ ಚೇಳೂರು ತಾಲೂಕಿನ ಚಾಕವೇಲು ಗ್ರಾಮದ ಶ್ರೀ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿ ಚಾಕವೇಲು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದರು.

ರೇಷ್ಮೆ ಕೃಷಿಗೂ ವಿಮೆಗೆ ಪ್ರಸ್ತಾಪ

ಸದನದಲ್ಲಿ ರಾಜ್ಯದ ರೇಷ್ಮೆ ಕೃಷಿಕರಿಗೆ ಸಾಮಾಜಿಕ ಭದ್ರತೆ ನೀಡಲು ಹೊಸ ಚಿಂತನೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇನೆ. ವಿಮೆ ಹಾಗೂ ಕಿಸಾನ್‌ ಸಮ್ಮಾನ್‌ ಯೋಜನೆಗಳಲ್ಲಿ ರೇಷ್ಮೆ ಮತ್ತು ಮೀನುಗಾರಿಕಾ ಕ್ಷೇತ್ರದ ಕೃಷಿಕರನ್ನೂ ಪರಿಗಣಿಸುವಂತೆ ಮನವಿ ಮಾಡಿದ್ದೇನೆ.ಸಾಮಾನ್ಯ ರೈತರಂತೆಯೇ ಈ ರೇಷ್ಮೇ ಕೃಷಿಕರು ಸಹ ಆರ್ಥಿಕ ನಷ್ಟ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಸ್ತಾವದಲ್ಲಿ ತಿಳಿಸಿರುವುದಾಗಿ ಹೇಳಿದರು.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಸೇರಿದಂತೆ ರಾಜ್ಯಾದ್ಯಂತ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, 1.5 ಲಕ್ಷ ಕುಟುಂಬಗಳು ರೇಷ್ಮೆ ಬೆಳೆಯನ್ನೇ ನೆಚ್ಚಿಕೊಂಡಿವೆ. ಈ ಎಲ್ಲ ರೈತರ ಮಹತ್ವದ ಬೇಡಿಕೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೆನೆ. ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಹವಾಮಾನ, ಮಳೆಯ ವೈಪರೀತ್ಯದಿಂದ ಹಿಪ್ಪುನೇರಳೆ ಸೊಪ್ಪು ಹಾಗು ರೇಷ್ಮೆ ಹುಳುಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ನುಸಿ ಮತ್ತು ಕೀಟಗಳ ಹಾವಳಿಯಿಂದ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ ಮತ್ತು ಇಳುವರಿ ಕುಸಿತವಾಗುತ್ತಿದೆ ಎಂದರು.

ಪ್ರಧಾನಿ ಬಳಿ ನಿಯೋಗ

ಕಳಪೆ, ರೋಗಪೀಡಿತ ರೇಷ್ಮೆ ಮೊಟ್ಟೆಗಳ ಚಾಕಿಯಿಂದ ರೇಷ್ಮೆ ಹುಳು ಸಾಕಾಣಿಕೆಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸಿ, ಈ ಎರಡೂ ಯೋಜನೆಗಳನ್ನು ರೇಷ್ಮೆ ಕೃಷಿಕರಿಗೆ ನೀಡಬೇಕು. ಜೊತೆಗೆ ಮೀನುಗಾರರು ಹಾಗೂ ಇತರೆ ಕೃಷಿಕರಿಗೂ ಈ ಯೋಜನೆಗಳನ್ನು ವಿಸ್ತರಣೆ ಮಾಡಬೇಕು. ಈ ಮೂಲಕ ಈ ಕ್ಷೇತ್ರಗಳ ಕೃಷಿಕರಿಗೂ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದೇನೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ರೇಷ್ಮೆ ಮತ್ತು ಮೀನುಗಾರಿಕಾ ಕ್ಷೇತ್ರದ ಕೃಷಿಕರ ನಿಯೋಗವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತಲುಪುವಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಆಯುಷ್ಮಾನ್‌ ಭಾರತ್ ಯೋಜನೆಯ ಮೂಲಕ ಬಡವರ ಆರೋಗ್ಯ ಸಮಸ್ಯೆಗಳು, ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳಿಗಾಗಿ ಒಬ್ಬ ವ್ಯಕ್ತಿಗೆ ಪ್ರತಿ ವರ್ಷ 5 ಲಕ್ಷ ರೂಪಾಯಿಗಳವರೆಗೆ ವೆಚ್ಚ ಭರಿಸುತ್ತಿದೆ. ಇದರಿಂದ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ. ಅಲ್ಲದೇ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸುವ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆಯಲಾಗಿದೆ ಎಂದರು.

ಆರೋಗ್ಯ ಯೋಜನೆಗೆ ನೋಂದಣಿ

ಸ್ವಚ್ಛ ಭಾರತ್ ಯೋಜನೆಯಡಿ ವೈಯಕ್ತಿಕ ಶೌಚಾಲಗಳನ್ನು ನಿರ್ಮಿಸಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರು, ಮಧ್ಯಮವರ್ಗದ ಜನರ ಆರೋಗ್ಯ ಮತ್ತು ಸ್ವಾಭಿಮಾನ ಕಾಪಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಅಧಿಕಾರಿಗಳು ಮತ್ತು ಗ್ರಾಮಗಳ ಮುಖಂಡರು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಕ್ಕಲಿಗರ ಸಂಘದ ನಿರ್ಧೇಶಕ ಕೋನಪ್ಪರೆಡ್ಡಿ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹರಿನಾಥರೆಡ್ಡಿ, ಜೆಡಿಎಸ್ ರಾಜ್ಯ ಯುವ ಬ್ರಿಗೇಡ್ ಕಾರ್ಯದರ್ಶಿ ಎಂ.ಎನ್.ರಾಜಾ ರೆಡ್ಡಿ, ಮಾಜಿ ತಾ.ಪಂ ಉಪಾಧ್ಯಕ್ಷ ಗೆಜ್ಜಲಕೃಷ್ಣರೆಡ್ಡಿ, ಜೆ.ಪಿ.ಚಂದ್ರಶೇಖರ್ ರೆಡ್ಡಿ, ರಘುನಾಥರೆಡ್ಡಿ, ಡಿ.ಎಸ್.ಆದಿನಾರಾಯಣ, ಬಿ.ಆರ್.ರಾಮಚಂದ್ರ,ಕೆ.ರಾಮಾಂಜಿನಪ್ಪ, ಮತ್ತಿತರ ಸ್ಥಳೀಯ ಮುಖಂಡರು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.