ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ರೈತರು ಶೋಷಣೆಗೆ ಒಳಗಾಗುತ್ತಿದ್ದು, ಬೆಳೆದ ಬೆಳೆಗಳಿಗೆ ಬೆಲೆ ಸಿಗಲು ರೈತ ಸಂಘಟನೆ ಒಗ್ಗಟ್ಟು ಪ್ರದರ್ಶನದ ಮೂಲಕ ಹೋರಾಟ ಮಾಡುವುದು ಅತ್ಯಗತ್ಯವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ರಾಜ್ಯ ರೈತ ಸಂಘದಿಂದ ನಡೆದ ಗೆಜ್ಜಲಗೆರೆ ಗೋಲಿಬಾರ್‌ನಲ್ಲಿ ಮಡಿದ ರೈತರ 46 ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಬೃಹತ್ ರೈತರ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಪ್ರಸ್ತುತ ದಿನದಲ್ಲಿ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮನ್ನಣೆ ನೀಡುತ್ತಿಲ್ಲ. ರೈತರನ್ನು ಶೋಷಣೆಮಾಡಿ ರಾಜಕಾರಣಿಗಳು ಬದುಕುತ್ತಿದ್ದಾರೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಾರಂಭದಲ್ಲಿ ಕಬ್ಬು ಬೆಳೆಗಾರರಿಗಾಗಿ ಸ್ಥಾಪಿಸಿದ್ದ ಸಂಘವೇ ಮುಂದೆ ರೈತ ಸಂಘವಾಯಿತು. ಇಲ್ಲಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯೂ ಸೇರಿದಂತೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳ ರೈತ ವಿರೋಧಿ ನೀತಿಯಿಂದ ನಡೆದ ರೈತ ಚಳವಳಿಗಳನ್ನು ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಗೋಲಿಬಾರ್ ಮಾಡಿಸಿದರು ಎಂದು ಕಿಡಿಕಾರಿದರು.
ಈ ಗೋಲಿಬಾರ್‌ನಿಂದ ರಾಜ್ಯದಲ್ಲಿ ನರಗುಂದ, ನವಲಗುಂದ, ಮದ್ದೂರು ತಾಲೂಕಿನ ಗೆಜ್ಜಲಗೆರೆ ಸೇರಿದಂತೆ ವಿವಿಧೆಡೆ ನಡೆದ ಗೋಲಿಬಾನಿಂದ 159 ಮಂದಿ ರೈತರು ಪೋಲಿಸರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದರು.ಹುತಾತ್ಮರಾದ ಎಲ್ಲಾ ರೈತ ನಾಯಕರು, ರೈತಪರ ಹೋರಾಟಗಾರರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆರ ತಲುಪಿಸುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ರಾಜ್ಯಾದ್ಯಂತ ಪ್ರತಿ ವಾರ್ಡ್‌ನಲ್ಲೂ ರೈತ ಕಾರ್ಯಕರ್ತರನ್ನು ಹುಟ್ಟುಹಾಕಲು ಸದಸ್ಯತ್ವ ನೋಂದಣಿ ಮಾಡಲಾಗುವುದು ಎಂದರು.
ವಿಭಾಗೀಯ ಘಟಕದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 1982ರಲ್ಲಿ ಕಬ್ಬು ಒಪ್ಪಿಗೆ ಮಾಡಿದ ರೈತರಿಗೆ ಒಂದು ರೀತಿಯ ಹಣ, ಒಪ್ಪಿಗೆ ಮಾಡಿಸದ ರೈತರಿಗೆ ಒಂದು ರೀತಿ ಹಣ ನೀಡುತ್ತಿತ್ತು. ಇದರಿಂದ ಬೇಸತ್ತು ರೈತರು ಹೋರಾಟಕ್ಕಿಳಿದಿದ್ದು ಎಂದರು.ಬಂಡವಾಳ ಶಾಹಿಗಳ ಪರವಾಗಿದ್ದ ಗುಂಡೂರಾವ್ ಸರ್ಕಾರ ವಳಗೆರೆಹಳ್ಳಿ ನಾಥೇಗೌಡ, ಗೆಜ್ಜಲಗೆರೆ ಸಿದ್ದಪ್ಪ ಅವರನ್ನು ಗುಂಡಿಕ್ಕಿ ಕೊಂದಿತು. ಸಕ್ಕರೆ ಕಾರ್ಖಾನೆಗಳು ಇಂದಿಗೂ ಕೂಡ ಕಬ್ಬಿಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಧ್ವಜಾ ರೋಹಣವನ್ನು ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಯಧುಶೈಲ ಸಂಪತ್ ನೆರವೇರಿಸಿದರು. ನಂತರ ಹುತಾತ್ಮ ರೈತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಚಾಮರಾಜನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ್‌ಪ್ರಭು, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಸೇರಿದಂತೆ ಮತ್ತಿತರರು ಮಾತನಾಡಿದರು.ಸಭೆಗೂ ಮುನ್ನ ರೈತ ಸಂಘದ ಕಾರ್ಯಕರ್ತರು, ಹಲಗೂರು ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ವೇದಿಕೆಯಲ್ಲಿ ರಾಜ್ಯ ಹಾಗೂ ವಿವಿಧ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಂವಿ.ರಾಜೇಗೌಡ, ವಿ.ಸಿ.ಉಮೇಶ್, ಶೈಲೇಂದ್ರ, ಮಲ್ಲಿಗೆರೆ ಅಣ್ಣಯ್ಯ, ಭಾಸ್ಕರ್, ರತ್ನಮ್ಮ, ಶಂಭೂಗೌಡ, ಬಾಲರಾಜು, ಕ್ಯಾತನಹಳ್ಳಿ ಗೋವಿಂದೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಭೆ ನಿರ್ಣಯಗಳು:- ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಪಡಿಸುವಾಗ 8.5 ಇಳುವರಿ ಮಾನದಂಡ ಅನುಸರಿಸಿ ಬೆಲೆನಿಗದಿಪಡಿಸಬೇಕು.
-ಪ್ರಸಕ್ತ ಸಾಲಿಗೆ ಕನಿಷ್ಠ 4.5 ಸಾವಿರ ರು.ಗಳನ್ನು ಟನ್ ಕಬ್ಬಿಗೆ ನಿಗದಿ ಪಡಿಸಬೇಕು.-ಡಾ.ಸ್ವಾಮೀನಾಥನ್ ಆಯೋಗದ ವರದಿ ಜಾರಿಗೆ ತಂದು ಕಬು, ಭತ್ತ, ರಾಗಿ, ತೆಂಗು, ರೇಷ್ಮೆ ಮುಂತಾದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗಧಿ ಪಡಿಸಲು ಕಾನೂನಾತ್ಮಕವಾಗಿ ಶಾಸನಗೊಳಿಸಬೇಕು.
-ಕಾಯಂ ಆಗಿ ಭತ್ತ, ರಾಗಿ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಪೂರ್ಣ ಪ್ರಮಾಣದಲ್ಲಿ ಖರೀದಿಸಬೇಕು.-ಕೃಷಿ ಪಂಪ್‌ಸೆಟ್‌ಗಳಿಗೆ ಸಂರ್ಪಕವನ್ನು ಸಕ್ರಮಗೊಳಿಸಲು ಅಥವಾ ಹೊಸ ವಿದ್ಯುತ್ ಸಂಪರ್ಕವನ್ನು ಪಡೆಯಲು ರೈತರೇ ವೆಚ್ಚವನ್ನು ಭರಿಸಬೇಕೆಂಬ ಸರ್ಕಾರದ ತೀರ್ಮಾನವನ್ನು ವಾಪಸ್ ಪಡೆಯಬೇಕು.
-ಕೇಂದ್ರ ಸರ್ಕಾರ ತರಲು ಹೊರಟಿರುವ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ತರಬಾರದು.-ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆಯನ್ನು ವಾಪಸ್ ಪಡೆಯಬೇಕು ಸೇರಿದಂತೆ ಹಲವಾರು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.