ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಈ ಉಪ ಕಾಲುವೆ ಸರಿಯಾಗಿದ್ದಿದ್ದರೆ ಇಷ್ಟೊತ್ತಿಗೆ ನೀರು ಹರಿದು, ರೈತರ ಜಮೀನುಗಳಲ್ಲಿ ಹಸಿರು ಬೆಳೆ ಕಾಣುತ್ತಿತ್ತು. ಆದರೆ, ಕಳೆದ ಐದು ವರ್ಷಗಳಿಂದ ಕಿತ್ತು ಹೋಗಿರುವ ಈ ಉಪ ಕಾಲುವೆಯಿಂದಾಗಿ ನೀರಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ ರೈತರ ಸ್ಥಿತಿ.ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಶೆಲವಡಿ-ತುಪ್ಪದ ಕುರಹಟ್ಟಿ ಗ್ರಾಮಗಳ ಮಧ್ಯೆ ಇರುವ ಉಪ ಕಾಲುವೆಯ ಸ್ಥಿತಿ ಇದು. ನೀರಿಲ್ಲದೇ ರೈತರ ಬದುಕೇ ಇಲ್ಲ. ಆದರೆ, ರೈತರ ಜಮೀನಿಗೆ ನೀರು ಒದಗಿಸುವ ಮೂಲಗಳಿಗೆ ತೊಂದರೆಯಾದಾಗ ಅವರ ಸ್ಥಿತಿ ಅಯೋಮಯ. ಧಾರವಾಡದ ಕೆಲವು ಗ್ರಾಮಗಳ ರೈತರ ಜಮೀನಿಗೆ ನೀರು ಸಿಗುವ ಭಾಗ್ಯವಿದ್ದರೂ ಕಾಲುವೆಗಳ ಸಮಸ್ಯೆಯಿಂದಾಗಿ ನೀರು ತಲುಪುತ್ತಿಲ್ಲ ಎಂಬುದಕ್ಕೆ ಈ ಉಪ ಕಾಲುವೆಯೇ ಸಾಕ್ಷಿ. ಕಳೆದ ಐದಾರು ವರ್ಷಗಳಿಂದ ರೈತರು ಉಪ ಕಾಲುವೆಯ ದುರಸ್ತಿ ಬಗ್ಗೆ ಮನವಿ ಮಾಡಿದರೂ ಹೇಳಿಕೊಳ್ಳುವ ಸ್ಪಂದನೆ ಸಿಕ್ಕಿಲ್ಲ ಎನ್ನುವುದೇ ಬೇಸರದ ಸಂಗತಿ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಅಣೆಕಟ್ಟೆಯಿಂದ ಬರುವ ಮಲಪ್ರಭಾ ಬಲದಂಡೆ ಕಾಲುವೆಯ ಉಪ ಕಾಲುವೆಯು ಈ ಎರಡೂ ಗ್ರಾಮಗಳ ನಡುವೆ ಹಾದು ಹೋಗುತ್ತದೆ. ಆದರೆ, ಐದಾರು ವರ್ಷಗಳ ಹಿಂದೆ ಈ ಉಪಕಾಲುವೆ ಕಿತ್ತು ಹೋಗಿದೆ. ಇದರಿಂದ ಮಲಪ್ರಭಾ ನಾಲೆಯಲ್ಲಿ ನೀರು ಹರಿಯುತ್ತಿದ್ದರೂ ಅದು ಈ ರೈತರ ಹೊಲಗಳನ್ನು ತಲುಪದಂತಾಗಿದೆ. ನೀರು ರೈತರ ಹೊಲ ಮುಟ್ಟುವ ಮುನ್ನವೇ ಒಡೆದು ಹೋಗಿರುವ ಕಾಲುವೆಗಳಲ್ಲಿ ಸೋರಿ ಅಕ್ಕಪಕ್ಕದ ಹಳ್ಳಕ್ಕೆ ಸೇರುತ್ತಿದೆ. ಇದರಿಂದಾಗಿ ರೈತರ ಪಾಲಿಗೆ ಈ ನೀರು ಕನ್ನಡಿಯಲ್ಲಿನ ಗಂಟಾಗಿ ಪರಿಣಮಿಸಿದೆ.
ಕಳೆದ ಐದಾರು ವರ್ಷಗಳಿಂದ ನಾವು ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದ್ದೇವೆ. ಆದರೆ, ಈ ಉಪ ಕಾಲುವೆಗೆ ದುರಸ್ತಿಯ ಭಾಗ್ಯ ಮಾತ್ರ ಸಿಗುತ್ತಿಲ್ಲ. ನಮ್ಮದು ಬಂಗಾರ ಬೆಳೆಯುವ ಭೂಮಿ. ಗೋಧಿ, ಹತ್ತಿ, ಕಡಲೆ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ಸರಿಯಾದ ಸಮಯಕ್ಕೆ ನೀರಿನ ವ್ಯವಸ್ಥೆಯಾದರೆ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಕಷ್ಟಪಟ್ಟು ಕೃಷಿ ಮಾಡುವ ರೈತರ ಜಮೀನಿಗೆ ಮಲಪ್ರಭಾ ನೀರು ಸಿಕ್ಕರೆ ನೆಮ್ಮದಿಯಾಗಿ ಕೃಷಿ ಮಾಡಿಕೊಂಡಿರಬಹುದು. ಆದರೆ ನೀರಿದ್ದರೂ ಪೋಲಾಗಿ ಹೋಗುತ್ತಿದ್ದು ಕಣ್ಣೀರು ಬರುತ್ತದೆ ಎಂದು ರೈತ ಯಲ್ಲಪ್ಪ ವಡ್ಡರ ಬೇಸರ ವ್ಯಕ್ತಪಡಿಸಿದರು.ಈ ಉಪ ಕಾಲುವೆ ದುರಸ್ತಿಯಾದರೆ ಕನಿಷ್ಠ 300 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಆ ಮೂಲಕ ಹಲವಾರು ರೈತರ ಕುಟುಂಬಗಳು ಸಂಕಷ್ಟದಿಂದ ಹೊರಬರಲಿವೆ. ಇಲ್ಲಿನ ಭೂಮಿಗಳೆಲ್ಲ ಮಳೆಯಾಧಾರಿತ ಕೃಷಿ ಅವಲಂಬಿತ ಪ್ರದೇಶಗಳು. ಹೀಗಾಗಿ ಇಂಥ ಜಮೀನುಗಳಿಗೆ ನೀರು ಒದಗಿಸಿದರೆ ರೈತರ ಸಂಕಷ್ಟಕ್ಕೆ ಮುಕ್ತಿ ಸಿಗಲಿದೆ. ಒಟ್ಟಿನಲ್ಲಿ ಈ ಉಪ ಕಾಲುವೆ ಶೀಘ್ರ ದುರಸ್ತಿಯಾಗಿ, ರೈತರ ಜಮೀನುಗಳಿಗೆ ನೀರು ಹರಿದರೆ, ರೈತರ ಮೊಗದಲ್ಲಿ ಮಂದಹಾಸ ಕಾಣಬಹುದು.ಶೀಘ್ರ ಕಾಲುವೆ ದುರಸ್ತಿ ಕಾರ್ಯ...ಉಪ ಕಾಲುವೆ ದುರಸ್ತಿ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ಕಾಲುವೆಯ ದುರಸ್ತಿಗೆ ₹14 ಲಕ್ಷ ಬಿಡುಗಡೆ ಮಾಡಿಸಿ, ಟೆಂಡರ್ ಕೂಡ ಕರೆಯಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದುರಸ್ತಿ ಕಾರ್ಯ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಅಲ್ಲಿನ ಎಲ್ಲ ಭೂಮಿಗೆ ನೀರು ಸಿಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಎನ್. ಎಚ್. ಕೋನರೆಡ್ಡಿ ಇದ್ದರು.