ಕನ್ನಡಪ್ರಭವಾರ್ತೆ ತುರುವೇಕೆರೆ
ಹಲವಾರು ವರ್ಷಗಳಿಂದ ಜನ ಜಾನುವಾರುಗಳಿಗೆ ಆಧಾರವಾಗಿದ್ದ ಗೋಮಾಳವನ್ನು ಉಳಿಸಬೇಕೆಂದು ಆಗ್ರಹಿಸಿ ಚಾಕುವಳ್ಳಿಪಾಳ್ಯದ ರೈತಾಪಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ತಾಲೂಕಿನ ಗಡಿಭಾಗದಲ್ಲಿರುವ ಚಾಕುವಳ್ಳಿ ಪಾಳ್ಯ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ರೈತರ ಅನುಭವದಲ್ಲಿರುವ ಜಮೀನಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಅಲ್ಲದೇ ಈ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಈಗಾಗಲೇ ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಂಡಿರುವ ಪ್ರದೇಶವನ್ನೂ ಸಹ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಸ್ಥಳೀಯ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದೆ ಎಂದು ಚಾಕುವಳ್ಳಿ ಪಾಳ್ಯದ ಗ್ರಾಮಸ್ಥರು ಆರೋಪಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಗ್ರಾಮದ ಮುಖಂಡ ಗಿರೀಶ್ ಮಾತನಾಡಿ, ಚಾಕುವಳ್ಳಿ ಪಾಳ್ಯ ಸರ್ವೇ ನಂ 8/2 ರಲ್ಲಿ 5 ಎಕರೆ 20 ಗುಂಟೆ ಹಾಗೂ ಸರ್ವೇ ನಂ 9 ರಲ್ಲಿ 2 ಎಕರೆ 20 ಗುಂಟೆ ಜಮೀನಿನಲ್ಲಿ ಸುಮಾರು ವರ್ಷಗಳಿಂದ ಗ್ರಾಮದ ರೈತರು ತಮ್ಮ ಮನೆಗಳು, ಕೊಪ್ಪಲುಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ಮನೆಗಳ ಹಕ್ಕುಪತ್ರ ಸಹ ನೀಡಲಾಗಿದೆ. ಕಂದಾಯ ಗ್ರಾಮವಾಗಿದೆ. ಗ್ರಾಮ ಪಂಚಾಯಿತಿಗಳಿಂದ ಖಾತೆಯನ್ನು ಮಾಡಿಕೊಡಲಾಗಿದೆ. ಕೆಲವು ದಿನಗಳ ಹಿಂದೆ ರೈತರ ಅನುಭವದಲ್ಲಿರುವ ಚಾಕುವಳ್ಳಿ ಪಾಳ್ಯ ಸರ್ವೇ ನಂ 8/2 ಹಾಗೂ 9 ನೇ ಸರ್ವೇ ನಂಬರ್ ಜಮೀನಿನಲ್ಲಿ ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಈ ಸರ್ವೇ ನಂಬರಿನ ಜಮೀನಿನಲ್ಲಿ ಸುಮಾರು ವರ್ಷಗಳ ಕಾಲದಿಂದ ಈ ಭಾಗದ ಗ್ರಾಮಗಳ ರೈತರು ಉಳುಮೆ ಮಾಡಿಕೊಂಡು ಮನೆ ದನದ ಕೊಟ್ಟಿಗೆ, ಕಾಯಿ, ಕುರಿ, ಕೋಳಿ ಶೆಡ್ ಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೇ ಸರ್ಕಾರ ವಸತಿ ಶಾಲೆಯ ನಿರ್ಮಾಣದ ನೆಪದಲ್ಲಿ ಏಕಾಏಕಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಕೂಡಲೇ ಸರ್ಕಾರ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈ ಬಿಟ್ಟು ರೈತರ ಅನುಭವದಲ್ಲಿರುವ ಗೋಮಾಳವನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು. ತಾಲೂಕು ಪಂಚಾಯತಿ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಈ ಭಾಗದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ರೈತರು ಸಾಕುತ್ತಿದ್ದಾರೆ. ವಸತಿ ನಿಲಯದ ನೂತನ ಕಟ್ಟಡದ ಸರ್ವೇಯಲ್ಲಿ ಪಶು ಆಸ್ಪತ್ರೆ ಹಾಗೂ ಚಾಕುವಳ್ಳಿ ಪಾಳ್ಯಕ್ಕೆ ಸಂಪರ್ಕಿಸುವ ರಸ್ತೆಯು ಸಹ ಮುಚ್ಚಿ ಹೋಗಿ ಓಡಾಟಕ್ಕೆ ರಸ್ತೆಯೇ ಇಲ್ಲದಂತಾಗುತ್ತದೆ. ಹಾಗೂ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಬೋರ್ ವೆಲ್ ಸಹ ಇಲ್ಲದಂತಾಗುತ್ತದೆ. ಅದಲ್ಲದೇ ಹಲವು ರೈತರು ಮನೆ ಕಳೆದುಕೊಂಡು ಬೀದಿಗೆ ಬೀಳುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಈ ವಸತಿ ಕಟ್ಟಡವನ್ನು ಬೇರೆ ಕಡೆ ನಿರ್ಮಿಸಿ ಸ್ಥಳೀಯ ರೈತರನ್ನು ಉಳಿಸುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಶೇಖರಯ್ಯ, ಸಿ.ಕೆ.ಪ್ರಕಾಶ್, ಸಿ.ಕೆ.ಕಾಂತರಾಜು, ಸಿ.ಟಿ.ತಿಮ್ಮಯ್ಯ, ವೆಂಕಟೇಶ್, ಸಿ.ಕೆ.ಶ್ರೀನಿವಾಸ್, ಶಿವಣ್ಣ, ಪಾಲಾಕ್ಷಯ್ಯ, ಕುಮಾರಸ್ವಾಮಿ, ಸಿ.ಎನ್.ಮೂರ್ತಿ, ಸಿದ್ದಗಂಗಮ್ಮ, ಪದ್ಮಾವತಿ, ಸೌಮ್ಯ, ಲಕ್ಷ್ಮಮ್ಮ, ಬೋರಪ್ಪ, ತಿಮ್ಮಕ್ಕ, ಸಿಂಧೂ, ಗೋವಿಂದರಾಜು, ಗಿರಿಯಪ್ಪ, ನರಸಿಂಹಮೂರ್ತಿ, ಲಕ್ಷ್ಮೀದೇವಮ್ಮ, ಮೇನಕ, ಸಿ.ಎಂ.ತಿಮ್ಮಯ್ಯ, ಪದ್ಮರಾಜ್ ಸೇರಿದಂತೆ ಹಲವರು ಇದ್ದರು.