ಈಗ ಗಾಳಿ ಯಂತ್ರ ಅಳವಡಿಸಲು ಟ್ರಕ್ ಮತ್ತು ಟಿಪ್ಪರ್ ಗಳು ಅತಿಯಾದ ಭಾರ ಹೊತ್ತು ಸಾಗುವುದರಿಂದ ಈ ರಸ್ತೆಗಳು ಕೆಲವೇ ತಿಂಗಳಲ್ಲಿ ಹಾಳಾಗಿ ಹೋಗುತ್ತಿವೆ.

ಲಕ್ಷ್ಮೇಶ್ವರ: ಸಮೀಪದ ಯಳವತ್ತಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂಲಕ ಗಾಳಿ ವಿದ್ಯುತ್ ಯಂತ್ರ ಸ್ಥಾಪನೆ ಮಾಡುವ ಕಂಪನಿಯ ಭಾರಿ ಗಾತ್ರದ ಟಿಪ್ಪರ್ ಹಾಗೂ ಟ್ರಕ್‌ಗಳು ಅತಿಯಾದ ಭಾರ ಹೊತ್ತು ಸಾಗುವುದರಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಯಳವತ್ತಿ ಗ್ರಾಮದ ರೈತರು ಬುಧವಾರ ಟಿಪ್ಪರ್ ತಡೆದು ಪ್ರತಿಭಟಿಸಿದರು.ಈ ವೇಳೆ ಗ್ರಾಮದ ರೈತ ಮುಖಂಡರಾದ ಬಾಪುಗೌಡ ಭರಮಗೌಡರ, ಸುರೇಶ ಬೀರಣ್ಣವರ ಹಾಗೂ ರಾಚಪ್ಪ ಅಜ್ಜನಗೌಡರ ಅವರು ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಿಸಿದ ರಸ್ತೆಯು ರೈತರ ತಮ್ಮ ಹೊಲಗಳಿಗೆ ಹೋಗಿ ಬರಲು ಬಹಳಷ್ಟು ಅನುಕೂಲವಾಗಿವೆ. ಈಗ ಗಾಳಿ ಯಂತ್ರ ಅಳವಡಿಸಲು ಹೋಗುತ್ತಿರುವ ಟ್ರಕ್ ಮತ್ತು ಟಿಪ್ಪರ್ ಗಳು ಅತಿಯಾದ ಭಾರ ಹೊತ್ತು ಸಾಗುವುದರಿಂದ ಈ ರಸ್ತೆಗಳು ಕೆಲವೇ ತಿಂಗಳಲ್ಲಿ ಹಾಳಾಗಿ ಹೋಗುತ್ತಿವೆ ಎಂದರು.

ಇದರಿಂದ ರೈತರ ಎತ್ತು ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳು ಸಂಚಾರ ಮಾಡಲು ಸಾಧ್ಯವಿಲ್ಲದಂತಾಗುತ್ತವೆ. ಆದ್ದರಿಂದ ಭಾರಿ ಗಾತ್ರದ ವಾಹನ ಸಂಚಾರ ಮಾಡಲು ನಮ್ಮೂರಿನ ಎಲ್ಲ ರೈತರು ವಿರೋಧ ವ್ಯಕ್ತಪಡಿಸುತ್ತೇವೆ ಹಾಗೂ ತಾಲೂಕಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ವಾಹನ ಸಂಚಾರಕ್ಕೆ ಯೋಗ್ಯ ಇಲ್ಲದಂತಾಗಿವೆ.

ಆದ್ದರಿಂದ ಇರುವ ನಮ್ಮ ರಸ್ತೆ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ಗಾಳಿ ವಿದ್ಯುತ್‌ ಯಂತ್ರ ಅಳವಡಿಸಲು ಮುಂದಾಗಿರುವ ಕಂಪನಿಗಳ ಮಾಲೀಕರು ಹಾಗೂ ಜಿಪಂ ಇಲಾಖೆಯ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗೆ ಪರಿಹಾರ ನೀಡುವ ವರೆಗೆ ಭಾರಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ಎಚ್ಚರಿಸಿದರು.

ಈ ವೇಳೆ ಗ್ರಾಮದ ಉಮೇಶ ಜೋಶಿ, ಫಕ್ಕಿರೇಶ ಜವಳಿ, ಹುಸೇನ್‌ಸಾಬ ಮಸೂತಿ, ನಾಗಪ್ಪ ಹೂಗಾರ, ಬಸವರಾಜ ನೀಲಗುಂದ, ರಾಜಪ್ಪ ಪ್ಯಾಟಿ, ವಸಂತಗೌಡ ಬಾಗೇವಾಡಿ, ಶಿವಣ್ಣ ಗಡಿಯನ್ನವರ, ಖಾದರಸಾಬ್, ಚನ್ನಪ್ಪಗೌಡ ನಿಂಗನಗೌಡರ, ಉದಯ ಹೂಗಾರ, ಬಸವರಾಜ ಗಡ್ಡೆಣ್ಣವರ, ರುದ್ರಗೌಡ ಪಾಟೀಲ ಸೇರಿದಂತೆ ಅನೇಕ ರೈತರು ಇದ್ದರು.