ಸಾರಾಂಶ
- ಹೊನ್ನಾಳಿ ತಾಲೂಕು ಅರಬಗಟ್ಟೆ ಸರ್ಕಾರಿ ಜಮೀನಲ್ಲಿ ಎಸಿ ನೇತೃತ್ವದಲ್ಲಿ ಸರ್ವೆ । ರೈತರು, ಕುರಿಗಾಯಿಗಳ ಕಣ್ಣೀರು
- ಏಕಾಏಕಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಹೊಟ್ಟೆಗೆ ಮಣ್ಣು ತಿನ್ನೇಬೇಕೆ ಎಂದು ರೈತರ ಅಳಲು - - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಅರಬಗಟ್ಟೆ ಗ್ರಾಮದ ಸರ್ವೆ ನಂ. 102, 103, 110 ಹಾಗೂ 111ರ ಒಟ್ಟು 49.14 ಎಕರೆ ಜಮೀನಿನಲ್ಲಿ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸೋಲಾರ್ ಮುಖಾಂತರ ವಿದ್ಯುತ್ ಸರಬರಾಜು ಮಾಡುವ ಕೇಂದ್ರ ಸರ್ಕಾರದ ಪಿಎಂ ಕುಸುಮ್ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಯಡಿ ಸೌರ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಮಂಗಳವಾರ ಜಮೀನು ಗಡಿ ಗುರುತಿಸಲಾಯಿತು. ಈ ಸಂದರ್ಭ ಅಧಿಕಾರಿಗಳು ಕೆಲ ರೈತರಿಂದ ಪ್ರತಿರೋಧ ಎದುರಿಸಬೇಕಾಯಿತು.ಹೊನ್ನಾಳಿ ತಾಲೂಕು ಉಪವಿಭಾಗಾಧಿಕಾರಿ ಅಭಿಷೇಕ್ ವಿ., ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಹಾಗೂ ಬೆಸ್ಕಾಂ ಹರಿಹರ ಘಟಕ ಇಇ ರವಿಕಿರಣ್ ಹಾಗೂ ಸರ್ವೆ ಇಲಾಖೆ ಅಧಿಕಾರಿ ರಮೇಶ್ ನೇತೃತ್ವದಲ್ಲಿ ಸರ್ವೆ ಕಾರ್ಯ ಕೈಗೊಂಡು, ಕಂಬಗಳನ್ನು ನೆಟ್ಟು ಗಡಿಯನ್ನು ಗುರುತಿಸಿ, ಸೋಲಾರ್ ಯೋಜನೆಗೆ ಅಧಿಕೃತ ಜಮೀನು ವಿಸ್ತೀರ್ಣ ನಿಗದಿಪಡಿಸಲಾಯಿತು.
ಸರ್ಕಾರಿ ಜಮೀನು ಮೀಸಲಿಗೆ ರೈತರ ಪ್ರತಿರೋಧ:ಮಂಗಳವಾರ ಬೆಳ್ಳಂಬೆಳಗ್ಗೆ ಸೋಲಾರ್ ವಿದ್ಯುತ್ ಘಟಕಕ್ಕೆ ಸರ್ಕಾರಿ ಜಮೀನನ್ನು ಕಾಯ್ದಿರಿಸುವ ಸಲುವಾಗಿ ಕಂದಾಯ, ಬೆಸ್ಕಾಂ, ಸರ್ವೆ ಹಾಗೂ ಇಡೀ ಪೊಲೀಸ್ ಅಧಿಕಾರಿಗಳ ದಂಡು ಸ್ಥಳಕ್ಕೆ ಆಗಮಿಸಿತು. ಸರ್ವೆ ಕಾರ್ಯದಲ್ಲಿ ತೊಡಗಿಸಿತು. ಈ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳ ಬಳಿ ಬಂದು ಹತ್ತಾರು ವರ್ಷಗಳಿಂದ ಈ ಜಮೀನುಗಳಲ್ಲಿ ಹಲವಾರು ರೈತ ಕುಟುಂಬಗಳು ಉಳುಮೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸ್ಥಳೀಯ ಕುರಿಗಾಯಿಗಳ ತಂಡ ಸಹ ಕುರಿಗಳ ಹಿಂಡು ಮೇಯಿಸಿಕೊಂಡು, ಜೀವಮ ಸಾಗಿಸುತ್ತಿವೆ. ಇದೀಗ ಏಕಾಏಕಿಯಾಗಿ ಈ ಎಲ್ಲ ಜಮೀನುಗಳನ್ನು ಮೀಸಲಿರಿಸಿ, ಹದ್ದುಬಸ್ತು ಮಾಡಿ ಬೇಲಿ ಹಾಕಿದರೆ ನಮ್ಮ ಬದುಕಿನ ಪಾಡೇನು ಎಂದು ಅಧಿಕಾರಿಗಳ ಮುಂದೆ ಅವಲತ್ತುಕೊಂಡರು.
ಕುರಿಗಾಯಿಗಳ ಆಗ್ರಹ:ಉಳುಮೆ ಮಾಡುತ್ತಿದ್ದ ರೈತರ ಪರವಾಗಿ ರೈತ ಸಂಘದ ಬಸಪ್ಪ ಹಾಗೂ ಅದೇ ಗ್ರಾಮದ ತಾ.ಪಂ. ಮಾಜಿ ಸದಸ್ಯ ಉಮೇಶ್ ಮಾತನಾಡಿದರು. ಏತನ್ಮಧ್ಯೆ ಕುರಿಗಾಯಿಗಳ ತಂಡದವರು ಕೂಡ ನಮಗೂ ಕುರಿ ಮೇಯಿಸಲು ಸರ್ಕಾರಿ ಜಮೀನು ಅವಶ್ಯಕತೆ ಇದೆ. ಜಮೀನು ಉಳುಮೆ ಮಾಡುವವರ ಜೊತೆಗೆ ನಮಗೂ ಸರ್ಕಾರದ ಜಮೀನನ್ನು ಮೀಸರಿಸಬೇಕೆಂದು ಆಗ್ರಹಿಸಿದರು.
ರೈತರ ಆಕ್ರಂದನ:ಸೋಲಾರ್ ವಿದ್ಯುತ್ ಉತ್ಪಾದನೆಗೆ ಘಟಕಗಳನ್ನು ನಿರ್ಮಿಸಲು ಜಮೀನು ಗಡಿಭಾಗಗಳನ್ನು ಗುರುತಿಸಿ ಕಂಬಗಳನ್ನು ನೆಡುವ ಕಾರ್ಯಕ್ಕೆ ಅಧಿಕಾರಿ-ಸಿಬ್ಬಂದಿ ಮುಂದಾಗಿದ್ದರು. ಆಗ ಕೆಲ ರೈತರು ಕಂಬ ನೆಡುವ ವಾಹನಗಳಿಗೆ ಅಡ್ಡವಾಗಿ ಕುಳಿತು ಪ್ರತಿರೋಧ ತೋರಿದರು. ಹತ್ತಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೀಗ ಏಕಾಏಕಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಹೊಟ್ಟೆಗೆ ಮಣ್ಣು ತಿನ್ನೇಬೇಕೆ ಎಂದು ಕಣ್ಣೀರಿಟ್ಟರು.
ಎರಡು ತಂಡಗಳ ಮನವಿಯನ್ನು ಮೌನವಾಗಿ ಆಲಿಸಿದ ಉಪವಿಭಾಗಾಧಿಕಾರಿ ಅವರು ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಸ್ಪಷ್ಟಪಡಿಸಿದರು. ಹೊನ್ನಾಳಿ ತಹಸೀಲ್ದಾರ್ ಸುರೇಶ್, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಹೊನ್ನಾಳಿ ಪಿಐ ಸುನಿಲ್‍ಕುಮಾರ್, ನ್ಯಾಮತಿ ಪಿಐ ರವಿ, ಹೊನ್ನಾಳಿ ಬೆಸ್ಕಾಂ ಎಇಇ ಜಯಪ್ಪ, ಬಸವಪಟ್ಟಣ ಪಿಎಸ್‍ಐ ರೂಪಾ ತೆಂಬದ್, ಸಂತೆಬೆನ್ನುರು ಪಿಎಸ್‍ಐ ವೀಣಾ, ಎಎಸ್‌ಐ ಹರೀಶ್, ಕಂದಾಯ ಅಧಿಕಾರಿಗಳಾದ ಸಂತೋಷ್, ರಮೇಶ್, ಜಯಪ್ರಕಾಶ್ ಹಾಗೂ ಇತರರು ಸ್ಥಳದಲ್ಲಿ ಉಪಸ್ಥಿತರಿದ್ದರು.- - - ಬಾಕ್ಸ್
ಉತ್ಪಾದಿಸಿದ ವಿದ್ಯುತ್ ರೈತರ ಪಂಪ್‌ಸೆಟ್‌ಗಳಿಗೆ ಬಳಕೆ: ಎಸಿಉಪವಿಭಾಗಾಧಿಕಾರಿ ವಿ. ಅಭಿಷೇಕ್ ಈ ಸಂದರ್ಭ ಮಾತನಾಡಿ, ಕೇಂದ್ರ ಸರ್ಕಾರದ ಈ ಯೋಜನಡಿಯಲ್ಲಿ ಅರಬಗಟ್ಟೆ ಗ್ರಾಮ ಸೇರಿ ತಾಲೂಕಿನ ಹರಳಹಳ್ಳಿ ಗ್ರಾಮದ ಸರ್ವೆ ನಂ. 101, 102ರಲ್ಲಿ 22 ಎಕರೆ ಕಾಯ್ದಿರಿಸುವ ಮೂಲಕ ಒಟ್ಟಾರೆಯಾಗಿ ತಾಲೂಕಿನ ಎರಡು ಗ್ರಾಮಗಳು ಸೇರಿ ಒಟ್ಟು 71.14 ಎಕರೆ ಸರ್ಕಾರಿ ಜಮೀನಿನಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಇಂಧನ ಇಲಾಖೆಯಿಂದ ಚಾಲನೆ ನೀಡಲಾಗಿದೆ. ಈ ಎರಡು ಘಟಕಗಳಿಂದ 15 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಹಾಗೂ ಉತ್ಪಾದಿತ ವಿದ್ಯುತ್ ಅನ್ನು ಸ್ಥಳೀಯ ರೈತರ ಪಂಪ್‍ಸೆಟ್‍ಗಳಿಗೆ ನೀಡಲಾಗುವುದು ಎಂದು ವಿವರಿಸಿದರು. ಯೋಜನೆ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಮಂಗಳವಾರ ಬೆಳಗ್ಗೆಯಿಂದಲ್ಲೇ ಪಿಐ ಸುನಿಲ್‍ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಒಂದು ವೇಳೆ ಸ್ಥಳೀಯರಿಂದ ಪ್ರತಿರೋಧ ನಡೆದು, ಗಲಾಟೆ ಆಗಬಹುದೆಂಬ ಉದ್ದೇಶದಿಂದ ಸುರಕ್ಷತಾ ದೃಷ್ಟಿಯಿಂದ ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಸಿಬ್ಬಂದಿ ಸಹ ಸ್ಥಳದಲ್ಲಿ ಇದ್ದರು.
- - - -18ಎಚ್ಎಲ್.ಐ1:ಹೊನ್ನಾಳಿ ತಾಲೂಕು ಅರಭಗಟ್ಟೆ ಸಮೀಪದ ಮಂಗಳವಾರ ಬೆಳಗ್ಗೆ ಸರ್ಕಾರಿ ಜಮೀನನ್ನು ಸೋಲಾರ್ ವಿದ್ಯುತ್ ಉತ್ಪಾದನೆ ಘಟಕಕ್ಕೆ ಕಾಯ್ದಿರಿಸಿ, ಜಮೀನು ಸರ್ವೆ ನಡೆಸಲು ಅಧಿಕಾರಿಗಳು ಹಾಗೂ ಪೊಲೀಸ್ ತಂಡಗಳು ಸೇರಿರುವುದು. -18ಎಚ್.ಎಲ್.ಐ1ಎ:
ಸರ್ಕಾರಿ ಜಮೀನಿನಲ್ಲಿ ಜೆಸಿಬಿ, ಬಳಸಿ ಕಳೆಗಿಡಗಳನ್ನು ಸ್ವಚ್ಛಗೊಳಿಸಿ ಮಟ್ಟ ಮಾಡುತ್ತಿರುವುದು. -18ಎಚ್.ಎಲ್.ಐ1ಬಿ.:ಸೋಲಾರ್ ವಿದ್ಯುತ್ ಘಟಕಕ್ಕೆ ಜಮೀನನ್ನು ಮೀಸಲಿರಿಸಲು ಸರ್ವೆ ಅಧಿಕಾರಿಗಳ ತಂಡ ಬಂದಾಗ ಬಡರೈತ ಮಹಿಳೆ, ಹಾಗೂ ರೈತರು ಅಧಿಕಾರಿಗಳ ಕಾಲಿಗೆಬಿದ್ದು ತಮಗೆ ಜಮೀನು ಬಿಟ್ಟುಕೊಡುವಂತೆ ಕಣ್ಣೀರಿಟ್ಟರು. -18ಎಚ್.ಎಲ್.ಐ1ಸಿ.:
ಸರ್ವೆ ಇಲಾಖೆ ಅಧಿಕಾರಿಗಳು ಜಮೀನು ಸರ್ವೆ ನಡೆಸಿ, ಕಂಬ ನೆಡುತ್ತಿರುವುದು.