ಸಾರಾಂಶ
ದೊಡ್ಡಾಘಟ್ಟ ಚಂದ್ರೇಶ್ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ತುರುವೇಕೆರೆತಾಲೂಕಿನ ಬಾಣಸಂದ್ರ ಸುತ್ತಮುತ್ತಲ ಪ್ರದೇಶದಲ್ಲಿ ಕೋಬಾಲ್ಟ್ ಮತ್ತು ನಿಕ್ಕಲ್ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖಾ ವತಿಯಿಂದ ಜಮೀನುಗಳು ಸರ್ವೇ ಕಾರ್ಯಕ್ಕೆ ಆದೇಶ ಬಂದಿರುವುದನ್ನು ಖಂಡಿಸಿ ತಾಲೂಕು ಕಚೇರಿ ಮುಂಭಾಗ ನೂರಾರು ರೈತರು ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. ಗುರುವಾರ ತಾಲೂಕು ಕಚೇರಿ ಆವರಣ ತಾಲೂಕಿನ ಕುಣಿಕೇನಹಳ್ಳಿ, ಬಲಮಾದಿಹಳ್ಳಿ, ದುಂಡ, ಬಾಣಸಂದ್ರ, ಕೋಡಿಹಳ್ಳಿ, ಶ್ರೀ ರಂಗನಾಥ ಪಟ್ಟಣ, ಶ್ರೀ ರಂಗನಾಥಪುರ, ಬೋವಿ ಕಾಲೋನಿ ಹಾಗೂ ಸುತ್ತಲ ಗ್ರಾಮಗಳ ನೂರಾರು ರೈತರು ಗಣಿಗಾರಿಕೆಯನ್ನು ವಿರೋಧಿಸಿದರು.
ತಾಲೂಕಿನ ಬಾಣಸಂದ್ರ ಸುತ್ತಮುತ್ತ ಪ್ರದೇಶದಲ್ಲಿ ಕೋಬಾಲ್ಟ್ ಮತ್ತು ನಿಕ್ಕಲ್ ಅಂಶಗಳು ಭೂಮಿಯಲ್ಲಿ ದೊರೆಯುತ್ತದೆ ಎಂಬ ವರದಿಯ ಆಧಾರದಲ್ಲಿ ಸುತ್ತಮುತ್ತಲ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸಂಗತಿ ರೈತರಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದು ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು. ಈಗಾಗಲೇ ಸಾವಿರಾರು ರೈತಾಪಿಗಳು ಅಲ್ಲಿಯ ಜಮೀನಿನಲ್ಲಿ ಹೊಲ, ಗದ್ದೆ, ತೋಟ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಗ್ಗು ಬಿದ್ದಿದ್ದ ಜಮೀನುಗಳನ್ನು ಸಮತಟ್ಟು ಮಾಡಲು ಲಕ್ಷಾಂತರ ರು ವ್ಯಯಿಸಿದ್ದಾರೆ. ಹಲವಾರು ವರ್ಷಗಳಿಂದ ತೆಂಗು, ಅಡಿಕೆ ಬೆಳೆದಿದ್ದಾರೆ. ಇಡೀ ಕುಟುಂಬದ ನಿರ್ವಹಣೆ ಮಾಡಿಕೊಂಡಿದ್ದಾರೆ. ಆದರೆ ಈಗ ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.ಸರ್ಕಾರ ಗಣಿಗಾರಿಕೆಗೆ ಮುಂದಾದರೆ ಮುಂಬರುವ ದಿನಗಳಲ್ಲಿ ತಿನ್ನಲು ಅನ್ನವೇ ಇಲ್ಲದಂತಾಗುತ್ತದೆ. ಸರ್ಕಾರ ಎಷ್ಠೇ ದುಡ್ಡು ಕೊಟ್ಟರೂ ಸಹ ಪ್ರಯೋಜನವಿಲ್ಲ. ದುಡ್ಡು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರದೇಶಗಳಲ್ಲಿ ದಲಿತರು, ಹಿಂದುಳಿದವರು ತಮ್ಮ ಜೀವನ ನಿರ್ವಹಣೆ ಗಾಗಿ ಒಂದಿಷ್ಟು ಜಮೀನನ್ನು ಹೊಂದಿದ್ದಾರೆ. ಈಗ ಆ ಜಮೀನುಗಳನ್ನೇ ಇಲ್ಲದಂತೆ ಮಾಡಿದರೆ ಅವರ ಬದುಕು ಹೇಗೆ ಎಂದು ದೊಡ್ಡಾಘಟ್ಟ ಚಂದ್ರೇಶ್ ಪ್ರಶ್ನಿಸಿದರು.
ಗಣಿಗಾರಿಕೆಯ ನೆಪದಲ್ಲಿ ಅಲ್ಲಿಯ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಪ್ರಯತ್ನಿಸಿದರೆ ಸಾವಿರಾರು ರೈತರ ಕುಟುಂಬದೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆಯನ್ನು ದೊಡ್ಡಾಘಟ್ಟ ಚಂದ್ರೇಶ್ ನೀಡಿದರು. ಜೀವ ಕೊಟ್ಟರೂ ಚಿಂತೆಯಿಲ್ಲ. ಅಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರು.ಕೋಬಾಲ್ಟ್ ಮತ್ತು ನಿಕ್ಕಲ್ ಅಂಶಗಳನ್ನು ಭೂಮಿಯಿಂದ ಹೊರತೆಗೆಯುವ ಸಲುವಾಗಿ ಗಣಿಗಾರಿಕೆ ಮಾಡಿದಲ್ಲಿ ನೂರಾರು ಅಡಿ ಭೂಮಿಯನ್ನು ಅಗೆಯಬೇಕಾಗುತ್ತದೆ. ಅಂತರ್ಜಲ ಮಟ್ಟ ಸಹಜವಾಗೇ ಕುಸಿಯುತ್ತದೆ. ಬಾಣಸಂದ್ರ ಆಸುಪಾಸಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿಗೂ ತಾತ್ವಾರ ಬಂದೊದಗಲಿದೆ. ಸಾವಿರಾರು ಎಕರೆಯಲ್ಲಿರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗುವುವು. ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ದೊಡ್ಡಾಘಟ್ಟ ಚಂದ್ರೇಶ್ ಆತಂಕ ವ್ಯಕ್ತಪಡಿಸಿದರು. ರೈತ ಮುಖಂಡ ಈಶ್ವರಯ್ಯ ಮಾತನಾಡಿ, ಸರ್ವೇ ಕಾರ್ಯ ಈಗಷ್ಟೆ ಪ್ರಾರಂಭವಾಗಿದೆ. ಈಗಲೇ ಪ್ರತಿರೋಧ ತೋರದಿದ್ದರೆ ಉಳಿಗಾಲವಿಲ್ಲ ಎಂದರು. ಬಾಣಸಂದ್ರ, ಲೋಕಮ್ಮನಹಳ್ಳಿ, ಆನೇಕೆರೆ, ದಂಡಿನಶಿವರ ಸೇರಿದಂತೆ ಹಲವಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತಾಪಿಗಳು ಉಪವಿಭಾಗಾಧಿಕಾರಿಗಳಾದ ಸಪ್ತಶ್ರೀ ಯವರಿಗೆ ಮನವಿ ಪತ್ರ ಸಲ್ಲಿಸಿದರು. ರೈತಾಪಿಗಳ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಸಪ್ತಶ್ರೀ, ಅಲ್ಲದೇ ರೈತಾಪಿಗಳ ಆಕ್ಷೇಪಣೆಯನ್ನೂ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.ಪ್ರತಿಭಟನಾಕಾರರಾದ ರೈತ ಮುಖಂಡ ದುಂಡ ಸುರೇಶ್, ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕುಣಿಕೇನಹಳ್ಳಿ ಸ್ವಾಮಿ, ಬಾಣಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಆನಂದ್ ಮರಿಯಾ, ಎಪಿಎಂಸಿ ಮಾಜಿ ಅಧ್ಯಕ್ಷ ಬುಗುಡನಹಳ್ಳಿ ರಾಜು ಸೇರಿ ಇತರರಿದ್ದರು.