ಸಾರಾಂಶ
ಕುಣಬಿ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಪ್ರಕ್ರಿಯೆ ರಾಜ್ಯ ಸರ್ಕಾರದಿಂದ ಮುಗಿದಿದೆ. ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಸಂಸದರು ಆ ಬಗ್ಗೆ ಪ್ರಯತ್ನ ಮಾಡಬಹುದು.
ದೇಶಪಾಂಡೆ
ಜೋಯಿಡಾ:ಕುಣಬಿ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಪ್ರಕ್ರಿಯೆ ರಾಜ್ಯ ಸರ್ಕಾರದಿಂದ ಮುಗಿದಿದೆ. ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಸಂಸದರು ಆ ಬಗ್ಗೆ ಪ್ರಯತ್ನ ಮಾಡಬಹುದು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಇನ್ನೆರಡು ದಿನದಲ್ಲಿ ಪ್ರಧಾನಿ ಅವರಿಗೆ ಪತ್ರ ಬರೆದು ಆಗ್ರಹಿಸುತ್ತೇನೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಅಧ್ಯಯನ ನಡೆಸಿ ಕುಣಬಿಗಳು ಎಸ್‌ಟಿಗೆ ಅರ್ಹತೆ ಹೊಂದಿದ್ದಾರೆ ಎಂದು ತಿಳಿದು ಕ್ರಮಕೈಕೊಂಡಿದ್ದೇವೆ ಎಂದರು.ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಹಿಂದೆ ಜೋಯಿಡಾ ತಾಲೂಕು ಕಾರವಾರ ಮತ ಕ್ಷೇತ್ರದಲ್ಲಿದ್ದಾಗಲೂ ಇಲ್ಲಿ ರಸ್ತೆ-ಸೇತುವೆಗಳಿಲ್ಲದ ವೇಳೆಯಲ್ಲಿಯೂ ಇಲ್ಲಿನ ಜನರನ್ನು ಕಾಳಜಿಯಿಂದ ನೋಡಿಕೊಂಡಿದ್ದೇನೆ ಎಂದರು.
ಈಗಾಗಲೇ ಸಾಕಷ್ಟು ರಸ್ತೆ, ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಯಾರಿಗೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಆ ದಿಶೆಯಲ್ಲಿ ಕ್ರಮ ಕೈ ಕೊಳ್ಳಬೇಕಾಗಿದೆ. ಎಲ್ಲಾದರೂ ನೀರಿನ ಸಮಸ್ಯೆ ಇದ್ದರೆ ಕೂಡಲೆ ಗ್ರಾಪಂಗಳಿಗೆ ಮಾಹಿತಿ ಕಳಿಸಿದರೆ ಅಗತ್ಯ ಕ್ರಮ ಕೈಕೊಳ್ಳುತ್ತೇವೆ ಎಂದರು. ಜೋಯಿಡಾದಲ್ಲಿ ಈಗ ₹ 3 ಕೋಟಿ ವೆಚ್ಚದಲ್ಲಿ 475 ಮನೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದ್ದು ಇನ್ನೆರಡು ತಿಂಗಳ ಒಳಗೆ ಇದು ಜಾರಿ ಆಗುತ್ತದೆ. ರಾಮನಗರ, ಜಗಲಬೇಟ, ಅಸು ಗ್ರಾಪಂಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ₹ 28 ಕೋಟಿ ಯೋಜನೆಗೆ ಚಾಲನೆ ನೀಡಿದ್ದು ಸದ್ಯದಲ್ಲೇ ಕೆಲಸ ಪ್ರಾರಂಭವಾಗಲಿದೆ. ಕಾನೆರಿ ಸೇತುವೆಯಿಂದ ಉಳವಿ ವರೆಗೆ ರಸ್ತೆ ನವೀಕರಣಕ್ಕೆ ₹ 9 ಕೋಟಿ, ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ₹ 2.10 ಕೋಟಿ ನೀಡಲಾಗಿದೆ. ಅವುರಲಿ ಸೇತುವೆ (₹ 75 ಲಕ್ಷ) ಮುಕ್ತಾಯವಾಗಿದೆ. ಜೋಯಿಡಾದಲ್ಲಿ ₹ 60 ಲಕ್ಷ ವೆಚ್ಚದ ಒಳಕ್ರೀಡಾಂಗಣ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ಜೋಯಿಡಾಕ್ಕೆ ಹೊಸದಾಗಿ 500 ಮನೆಗಳ ಮಂಜೂರಾತಿಯಾಗಿದೆ. ಆಸ್ಪತ್ರೆಯ ಮೇಲ್ದರ್ಜೆ ಕಾಮಗಾರಿ ಪ್ರಗತಿಯಲ್ಲಿದೆ. ಲೋಕೋಪಯೋಗಿ ಇಲಾಖೆಗೆ ₹ 5 ಕೋಟಿ ನೀಡಲಾಗಿದ್ದು ರಸ್ತೆ-ಸೇತುವೆ ಕೆಲಸ ನಿರ್ವಹಿಸಲಾಗುವುದು. ಶೆವಾಳಿ, ದೇಸಾಯಿವಾಡ ರಸ್ತೆ ಸುಧಾರಣೆಗೆ ₹ 28 ಲಕ್ಷ, ಉಳವಿ ಎರಡು ರಸ್ತೆಗೆ ₹ 37 ಲಕ್ಷ, ಕಾತೆಲಿ ರಸ್ತೆಗೆ ₹ 10 ಲಕ್ಷ, ಸಾಂಗವೆ ರಸ್ತೆಗೆ ₹ 15 ಲಕ್ಷ, ಬಾಡಗುಂದ ರಸ್ತೆಗೆ ₹ 5 ಲಕ್ಷ, ಸಿಂಗರಗಾಂವ ರಸ್ತೆಗೆ ₹ 18 ಲಕ್ಷ, ಮಿನಿ ಬ್ರಿಡ್ಜ್ ₹ 15 ಲಕ್ಷ, ಚಾಪೇರಿ ರಸ್ತೆಗೆ ₹ 27 ಲಕ್ಷ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಇದ್ದರು.ಇದೇ ವೇಳೆ ಎಸ್‌ಟಿ ಸ್ಥಾನಮಾನಕ್ಕಾಗಿ ಕಳೆದ 3 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಭೇಟಿ ಮಾಡಿದರು.