ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತ ಸಂಘ ಬಹಳ ಹಿಂದಿನಿಂದಲೂ ಚಳವಳಿ ಮತ್ತು ಹೋರಾಟಗಳ ಮೂಲಕ ಬೆಳೆದು ಬಂದಿದೆ. ನಾನು ಕೂಡ ವೈಯಕ್ತಿಕ ವಿಚಾರ ಇಟ್ಟುಕೊಂಡು ಸಂಘಟನೆ ಕಟ್ಟುತ್ತಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ರೈತ ಸಂಘ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರೈತ ಸಂಘಟನೆಯನ್ನು ತಳಮಟ್ಟದಿಂದ ಕಟ್ಟಬೇಕಾದ ಅನಿವಾರ್ಯತೆ ಇದೆ. ರೈತರ ಜೀವನ ಮತ್ತು ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡಬೇಕು, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ನನ್ನ ಉದ್ದೇಶವಾಗಿದೆ ಎಂದರು.
ಕ್ಷೇತ್ರದ ಜನರ ಮನಸ್ಸಿನಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿದ್ದೇವೆ ಏನು ಮಾಡುತ್ತಾರೋ ಎಂಬ ಪ್ರಶ್ನೆ ಇದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಅನುದಾನ ಕೊಡುತ್ತದೆ. ಆ ಅನುದಾನ ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಸಾಮಾನ್ಯವಾಗಿರುತ್ತದೆ. ಯಾವುದೇ ಶಾಸಕನಾದರೂ ಆ ಕೆಲಸ ಮಾಡುವುದು ಮಾಮೂಲಿ ಎಂದರು.ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ 350 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನೀರಾವರಿ ಇಲಾಖೆಯ 55 ಕೋಟಿ ಅನುದಾನದಲ್ಲಿ ಏತ ನೀರಾವರಿ ಮತ್ತು ವಿಶ್ವೇಶ್ವರಯ್ಯ ನಾಲೆ ಮತ್ತು ಉಪ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯಿಂದ 33 ಕೋಟಿ ರು., ಲೋಕೋಪಯೋಗಿ ಇಲಾಖೆಯಿಂದ 65 ಕೋಟಿ ರು., ಆರ್‌ಡಿಪಿಆರ್‌ನಿಂದ 60 ಕೋಟಿ ಅನುದಾನವನ್ನು ಸರ್ಕಾರದಿಂದ ತರಲಾಗಿದೆ. ಇದರಲ್ಲಿ ಹಲವಾರು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದ್ದು ಕೆಲಸ ಪ್ರಗತಿಯಲ್ಲಿದೆ ಎಂದರು.ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಯಾವುದರಲ್ಲೂ ಕಡಿಮೆ ಇರಬಾರದು ಎಂಬ ಧ್ಯೇಯದೊಂದಿಗೆ ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಕ್ಯಾತನಹಳ್ಳಿಯಲ್ಲಿ 10 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಿಸಲಾಗುತ್ತಿದೆ ಎಂದರು.
ಪೂರ್ಣಗೊಳ್ಳದ ಯುಜಿಡಿ ಕಾಮಗಾರಿಯಿಂದ ಪಟ್ಟಣ ನಿವಾಸಿಗಳಿಗೆ ತೊಂದರೆಯಾಗಿದೆ. ಕಾಮಗಾರಿಗೆ ಅಡ್ಡವಾಗಿದ್ದ ಜಮೀನು ಸಮಸ್ಯೆ, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅಗತ್ಯವಿದ್ದ ಅನುದಾನ ಬಿಡುಗಡೆಯಾಗಿದೆ.ಶೀಘ್ರ ಯುಜಿಡಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜ1ತೆಗೆ ಪಟ್ಟಣದಲ್ಲಿ ಕಲಾ ಮಂದಿರ ನಿರ್ಮಾಣ ಮಾಡಲಾಗುವುದು ಎಂದರು.ಹೊಸ ಆಸ್ಪತ್ರೆಗೆ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದ್ದು. ಜಾಗದ ಸಮಸ್ಯೆ ಎದುರಾಗಿದೆ. ಸಂತೆ ಮೈದಾನ ಅಭಿವೃದ್ಧಿ, ಹಳೇ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಇನ್ನಿತರ ಕಾಮಗಾರಿಗಳಿಗೆ ಸರ್ಕಾರ 30 ಕೋಟಿ ರು ಅನುದಾನ ನೀಡಿದೆ. ಜೀವನ ಮಟ್ಟ ಸುಧಾರಣೆಗಾಗಿ ಸರ್ಕಾರ ಅನುದಾನ ನೀಡಲ್ಲ. ಅದಕ್ಕಾಗಿ ಪುಟ್ಟಣ್ಣಯ್ಯ ಫೌಂಡೇಶನ್ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎಸ್.ದಯಾನಂದ್, ಎಚ್.ಎಲ್.ಮುರುಳೀಧರ್ ಇತರರು ಇದ್ದರು.