ದೇಶದ ಎಲ್ಲಾ ರೈತರಿಂದ ಎಂಎಸ್‌ಪಿನಲ್ಲಿ ಎಲ್ಲಾ ಬೆಳೆಗಳ ಸಂಪೂರ್ಣ ಖರೀದಿಯನ್ನು ಖಚಿತಪಡಿಸಿಕೊಳ್ಳಲು ಎಂಎಸ್‌ಪಿ ಗ್ಯಾರಂಟಿ ಕಾನೂನನ್ನು ಜಾರಿಗೆ ತರಬೇಕು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಮತ್ತು ಕೃಷಿ ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಸರ್ಕಾರಗಳು ಮುಂದಾಗಬೇಕು. 2013ರ ಭೂ ಸ್ವಾಧೀನ ಕಾಯ್ದೆಯನ್ನ ಪುನಃ ಜಾರಿಗೆ ತರಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರೈತರ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಸಂಘಟನೆ ನಡೆಸುತ್ತಿರುವ ಅರಿವಿನ ಜಾಥಾ ಪಟ್ಟಣಕ್ಕೆ ತಲುಪುತ್ತಿದ್ದಂತೆ ಸ್ಥಳೀಯ ರೈತ ಸಂಘಟನೆಗಳ ಮುಖಂಡರು ಅವರನ್ನು ಸ್ವಾಗತಿಸಿ ಉಪಚರಿಸಿ, ಸತ್ಕರಿಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ಸ್ಥಳೀಯ ರೈತ ಸಂಘಟನೆಗಳ ಮುಖಂಡರು ಸೇರಿದರು. ಮೈಸೂರಿನಿಂದ ಮಂಡ್ಯದ ಕಡೆಗೆ ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕ ಜಗದೀತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಇತರ ರೈತ ನಾಯಕರನ್ನ ಸ್ವಾಗತಿಸಿ, ಎಳನೀರು, ಹಣ್ಣು ಹಂಪಲು ನೀಡಿ ಸತ್ಕರಿಸಿ, ಜಾಥಾಗೆ ಶುಭಕೋರಿದರು.

ದೇಶದ ಎಲ್ಲಾ ರೈತರಿಂದ ಎಂಎಸ್‌ಪಿನಲ್ಲಿ ಎಲ್ಲಾ ಬೆಳೆಗಳ ಸಂಪೂರ್ಣ ಖರೀದಿಯನ್ನು ಖಚಿತಪಡಿಸಿಕೊಳ್ಳಲು ಎಂಎಸ್‌ಪಿ ಗ್ಯಾರಂಟಿ ಕಾನೂನನ್ನು ಜಾರಿಗೆ ತರಬೇಕು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಮತ್ತು ಕೃಷಿ ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಸರ್ಕಾರಗಳು ಮುಂದಾಗಬೇಕು. 2013ರ ಭೂ ಸ್ವಾಧೀನ ಕಾಯ್ದೆಯನ್ನ ಪುನಃ ಜಾರಿಗೆ ತರಬೇಕು. ಇದು ಭೂಸ್ವಾಧೀನಕ್ಕೆ ಮೊದಲು ಶೇ.75ರಷ್ಟು ರೈತರಿಂದ ಲಿಖಿತ ಒಪ್ಪಿಗೆಯನ್ನು ಪಡೆಯುವುದು. ಜೊತೆಗೆ ರೈತರಿಗೆ ಸಂಗ್ರಹಕಾರರ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಸರ್ಕಾರಗಳು ರೈತರ ಬೆಳೆಗಳಿಗೆ ನ್ಯಾಯಯುತ ಎಂಎಸ್‌ಪಿ ಗಳನ್ನು ಒದಗಿಸಲು ವಿಫಲವಾದ ಕಾರಣ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕಬ್ಬಿನ ಎಫ್‌ಆರ್‌ಪಿ ಟನ್‌ಗೆ 6 ಸಾವಿರು. ಹೊಲದಲ್ಲಿ ದರ ಎಂದು ಘೋಷಿಸಬೇಕು. ಅಲ್ಲದೇ, ರೈತರಿಗೆ 14 ದಿನಗಳಲ್ಲಿ ಪಾವತಿ ಮಾಡುವುದನ್ನ ಖಚಿತಪಡಿಸಬೇಕು. ವಿಫಲವಾದಲ್ಲಿ ರೈತರಿಗೆ ಹೆಚ್ಚುವರಿಯಾಗಿ ಶೇ.12 ರಿಂದ 15ರಷ್ಟು ಬಡ್ಡಿ ಪಾವತಿಸಬೇಕು. ಹವಾಮಾನ ಬದಲಾವಣೆಯಿಂದ ರೈತರಿಗೆ ಆಗುವ ನಷ್ಟವನ್ನು ಸರಿದೂಗಿಸಲು ಸರ್ಕಾರ ರಾಷ್ಟ್ರೀಯ ನೀತಿ ರೂಪಿಸುವಂತೆ ಒತ್ತಾಯಿಸಿದರು.

ಪ್ರಸ್ತುತ ಬೆಳೆ ವಿಮೆ ಯೋಜನೆಯು ರೈತರಿಗಿಂತ ಹೆಚ್ಚಾಗಿ ಕಾರ್ಪೋರೇಟ್ ಸಂಸ್ಥೆಗಳಿಗೆ ಪ್ರಯೋಜನ ನೀಡುತ್ತಿವೆ ಹಾಗಾಗಿ ರೈತ ಸ್ನೇಹಿ ನಿಬಂಧನೆಗಳನ್ನು ಸೇರಿಸಲು ಪ್ರಸ್ತುತ ಬೆಳೆ ವಿಮೆ ಯೋಜನೆಯಲ್ಲಿ ಸಮಗ್ರ ಬದಲಾವಣೆ ತರುವ ಅಗವ್ಯವಿದೆ. ಈ ಎಲ್ಲಾ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಸ್ಥಳೀಯ ರೈತ ಮುಖಂಡರು ಮನವಿ ಮಾಡಿದರು.

ಜಾಥಾದಲ್ಲಿ ತಮಿಳುನಾಡಿನ ಪಾಂಡಿಯನ್, ಆಂಧ್ರಪ್ರದೇಶದ ವೆಂಕಟರಾಮೇಶ್ವರ್, ಹರಿಯಾಣದ ಅಭಿಮಾನ್ ಕೂಗಾರ್, ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಮುಂಡುಗದೊರೆ ಮೋಹನ್, ನೆಲಮನೆ ಪುಟ್ಟಸ್ವಾಮಿ, ಬಾಬುರಾಯನಕೊಪ್ಪಲು ರಮೇಶ್, ದಸರಗುಪ್ಪೆ ಧನಂಜಯ ಸೇರಿದಂತೆ ನೂರಾರು ರೈತರು ಇದ್ದರು.