ಹೇಮಾವತಿ ನೀರಿನ ಹೋರಾಟಕ್ಕೆ ರೈತ ಸಂಘಟನೆ ಸಜ್ಜು

| Published : May 22 2024, 12:54 AM IST

ಸಾರಾಂಶ

ಮಾಗಡಿ: ತುಮಕೂರಿನ ಜನಪ್ರತಿನಿಧಿಗಳು ಅವರ ಜಿಲ್ಲೆಯ ಜನಗಳ ಪರವಾಗಿ ಹೋರಾಟ ಮಾಡುತ್ತಿದ್ದು ನಾವು ಕೂಡ ಮಾಗಡಿ ತಾಲೂಕಿಗೆ ಹೇಮಾವತಿ ನೀರು ಬರಬೇಕು ಎಂದು ನಮ್ಮ ರೈತರ ಪರ ರೈತ ಸಂಘದಿಂದ ಹೋರಾಟ ಮಾಡಲು ಸಚ್ಚುಗೊಂಡಿದ್ದೇವೆ ಎಂದು ಹಸಿರು ಸೇನೆ ರೈತ ಬಣದ ತಾಲೂಕು ಅಧ್ಯಕ್ಷ ಗೋವಿಂದರಾಜು ಹೇಳಿದರು

ಮಾಗಡಿ: ತುಮಕೂರಿನ ಜನಪ್ರತಿನಿಧಿಗಳು ಅವರ ಜಿಲ್ಲೆಯ ಜನಗಳ ಪರವಾಗಿ ಹೋರಾಟ ಮಾಡುತ್ತಿದ್ದು ನಾವು ಕೂಡ ಮಾಗಡಿ ತಾಲೂಕಿಗೆ ಹೇಮಾವತಿ ನೀರು ಬರಬೇಕು ಎಂದು ನಮ್ಮ ರೈತರ ಪರ ರೈತ ಸಂಘದಿಂದ ಹೋರಾಟ ಮಾಡಲು ಸಚ್ಚುಗೊಂಡಿದ್ದೇವೆ ಎಂದು ಹಸಿರು ಸೇನೆ ರೈತ ಬಣದ ತಾಲೂಕು ಅಧ್ಯಕ್ಷ ಗೋವಿಂದರಾಜು ಹೇಳಿದರು.

ತಾಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್ ಹಸಿರು ಸೇನೆ ಕಚೇರಿಯಲ್ಲಿ ತಿಪ್ಪಸಂದ್ರ, ಕುದೂರು, ಸೋಲೂರು ಹೋಬಳಿ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ರೈತರು ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಮಠಾಧೀಶರನ್ನು ಕರೆಸಿ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಮಾಗಡಿ ತಾಲೂಕಿನಲ್ಲಿಯೂ ಕುಡಿಯುವ ನೀರಿಗಾಗಿ ನ್ಯಾಯ ಕೇಳಲು ಹೋರಾಟದ ಹಾದಿ ತುಳಿಯುವ ಅನಿವಾರ್ಯತೆ ಇದೆ. ಹೀಗಾಗಿ ತಾಲೂಕಿನ ಎಲ್ಲ ರೈತರನ್ನು ದಿನಾಂಕ ನಿಗದಿ ಮಾಡಿ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ ಎಂದು ಕರೆ ನೀಡಿದರು.

ಜಿಲ್ಲಾ ಹಸಿರು ಸೇನೆ ರೈತ ಬಣ್ಣದ ಅಧ್ಯಕ್ಷ ಬೈರೇಗೌಡ ಮಾತನಾಡಿ, ಹೇಮಾವತಿ ಮಾಗಡಿ ತಾಲೂಕಿಗೆ ಬರುವ ಹೆಬ್ಬಾಗಿಲು ತಾಳೇಕೆರೆ ಹ್ಯಾಂಡ್ ಪೋಸ್ಟ್ ಭಾಗ. ಹೀಗಾಗಿ ಮಾಜಿ ಶಾಸಕರಾಗಿದ್ದ ವೈ.ಕೆ.ರಾಮಯ್ಯ ಕುಣಿಗಲ್ ತಾಲೂಕಿನಲ್ಲಿ 20 ವರ್ಷಗಳ ಹಿಂದೆ ರೂಪಿಸಿದ ಪ್ರತಿಭಟನೆ ಮಾದರಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಟೆಂಟ್ ನಿರ್ಮಿಸಿ ರೈತರು ಧರಣಿ ಕೂರಲು ತೀರ್ಮಾನ ಮಾಡಿದ್ದೇವೆ. ಕರಪತ್ರ ವಿತರಿಸಿ ಮಾಗಡಿ ತಾಲೂಕಿಗೆ ನ್ಯಾಯ ಬೇಕಾಗಿದೆ ಎಂದು ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ನಮ್ಮ ನೈತಿಕ ಹೋರಾಟಕ್ಕೆ ಸರ್ವ ಪಕ್ಷಗಳ ನಾಯಕರು ಮತ್ತು ಮಠಾಧೀಶರ ಬೆಂಬಲ ಹೇಳಿ ಅವರನ್ನು ಹೋರಾಟಕ್ಕೆ ಕರೆತರಲು ನಾಳೆಯಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ನೇರಳೆಕೆರೆ ರೈತ ಹೋರಾಟಗಾರ ಶ್ರೀನಿವಾಸ್ ಮಾತನಾಡಿ, ಮಾಗಡಿ ತಾಲೂಕಿಗೆ ಹೇಮಾವತಿ ನೀರು ಕೊಡಲು ತುಮಕೂರಿಗರು ಆಕ್ಷೇಪಿಸಿರುವುದು ಸರಿಯಲ್ಲ. ಅಕ್ಕಪಕ್ಕದ ಜಿಲ್ಲೆಯ ರೈತರ ಹಿತವನ್ನು ಕಾಯಲು ಜಲಸಂಪನ್ಮೂಲ ಇಲಾಖೆ ಮತ್ತು ಸರಕಾರ ಸಂಧಾನ ಸೂತ್ರ ಮಾಡಿ ಕಾಮಗಾರಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಮನವಿ ಕೊಡುವುದಾಗಿ ಸಭೆಯಲ್ಲಿ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಬಗಿನೆಗೆರೆ ರಂಗಸ್ವಾಮಿ, ನಾರಾಯಣಪುರ ಶಿವಣ್ಣ, ರಿಜ್ವಾನ್, ಮಾಯನಾಯಕನಹಳ್ಳಿ ಮಾರೇಗೌಡ, ಮಾಗಡಿಯ ಕುಮಾರ್, ನಾಗಣ್ಣ, ಬಗಿನಗೆರೆ ಸುರೇಶ್, ತಿಮ್ಮಪ್ಪ, ಬೆಟ್ಟೇಗೌಡ, ಮರೂರು ಕೃಷ್ಣಪ್ಪ, ನೇರಳೆಕೆರೆ ಶ್ರೀನಿವಾಸ್, ಜಯರಾಮು ಮತ್ತಿತರ ರೈತರು ಹಾಜರಿದ್ದರು.ಪೋಟೊ 21ಮಾಗಡಿ2 :

ಮಾಗಡಿ ತಾಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್ ರೈತ ಕಚೇರಿಯಲ್ಲಿ ಮೂರು ಹೋಬಳಿಗಳ ರೈತ ಮುಖಂಡರು ಸಭೆ ಸೇರಿ ಹೋರಾಟದ ಬಗ್ಗೆ ಚರ್ಚಿಸಲಾಯಿತು.