ಸಾರಾಂಶ
ಕನ್ನಡಪ್ರಭ ವಾರ್ತೆ ಚಡಚಣ
ತಾಲೂಕಿನ ಗಡಿ ಅಂಚಿನಲ್ಲಿರುವ ಭೀಮಾ ನದಿಗೆ ಹೊಂದಿಕೊಂಡಿರುವ ಜಮೀನುಗಳ ಪಂಪ್‌ಸಟ್‌ಗಳಿಗೆ ದಿನಕ್ಕೆ 2 ಗಂಟೆ ಮಾತ್ರ ವಿದ್ಯುತ್ ಪೂರೈಕೆಗೆ ಆದೇಶ ಮಾಡಿದ ಇಂಡಿ ಉಪವಿಭಾಗಧಿಕಾರಿಗಳ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ ಉಮರಾಣಿ ಗ್ರಾಮದ ರೈತರು ಶನಿವಾರ ಸ್ಥಳೀಯ ಹೆಸ್ಕಾಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಿದರು.ಈ ಸಂದರ್ಭದಲ್ಲಿ ರೈತ ಜಗದೇವ ಭೈರಗೊಂಡ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಾರದು ಎಂದು ಜ.18 ರಿಂದ ಫೆ.18 ರವರೆಗೆ ಒಂದು ತಿಂಗಳುಗಳವರೆಗೆ ದಿನದ 22 ಗಂಟೆ ವಿದ್ಯುತ್ ಕಡಿತಗೊಳಿಸಿ ದಿನಕ್ಕೆ 2 ಗಂಟೆ ಮಾತ್ರ ವಿದ್ಯುತ್ ಪೂರೈಕೆಗೆ ಆದೇಶ ಹೊರಡಿಸಿ, ನದಿ ತೀರದ 100 ಅಡಿಯವರೆಗೆ ನಿಷೇಧಾಜ್ಞೆ ಮಾಡಿರುವುದು ಸಂಪೂರ್ಣವಾಗಿ ಅವೈಜ್ಷಾನಿಕವಾಗಿದೆ. ಒಂದು ತಿಂಗಳುಗಳವರೆಗೆ ವಿದ್ಯುತ್ ಕಡಿತ ಮಾಡುವುದರಿಂದ ಬೆಳೆದು ನಿಂತ ಬೆಳೆ ಒಣಗುತ್ತದೆ. ಕಬ್ಬು ನಾಟಿ ಮಾಡಲು ಗದ್ದೆ ಹದಗೊಳಿಸಲಾಗಿದೆ. ನದಿ ತೀರದಲ್ಲಿ ದಿನದ 22 ಗಂಟೆ ವಿದ್ಯುತ್ ಕಡಿತಗೊಳಿಸಿದರೇ ರಾತ್ರಿ ಇಡಿ ಕಗ್ಗತ್ತಲೆಯಲ್ಲಿ ತೋಟದ ಮನೆಯವರು ಕಾಲ ಕಳೆಯಬೇಕು. ಕರ್ನಾಟಕ-ಮಹಾರಾಷ್ಟ್ರದ ಸಮಭಾಗದಲ್ಲಿ ಹಾದು ಹೋಗಿರುವ ಭೀಮಾ ನದಿಗೆ ಮಹಾರಾಷ್ಟ್ರದ ರೈತರು ಅಳವಡಿಸಿದ ಪಂಪ್‌ಸಟ್‌ಗಳಿಗೆ ಮಹಾರಾಷ್ಟ್ರ ಸರ್ಕಾರ ನಿರಂತರ 8 ಗಂಟೆ ವಿದ್ಯುತ್ ಪೂರೈಕೆ ಮಾಡುವುದರಿಂದ ನಮ್ಮ ಪಾಲಿನ ನೀರು ಅನ್ಯ ರಾಜ್ಯದವರ ಪಾಲಾಗುತ್ತದೆ. ರೈತರು ನೀರು ಎತ್ತದಿದ್ದರೂ ನೀರು ಹರಿದು ಹೊಗುತ್ತದೆ. ಇದರಿಂದ ಯಾರಿಗೂ ಲಾಭವಿಲ್ಲ. ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಪ್ರದತ್ತವಾದ ಅಧಿಕಾರ ಬಳಸಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನೂ ನೀಡದೇ ಮಾಡಲಾದ ಆದೇಶದ ಹಿಂದೆ ರಾಜ್ಯ ವಾಸನೆ ಅಡಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥತಿಕೆ ವಹಿಸಿ ಭೀಮಾ ನದಿ ಪಾತ್ರದ ರೈತರಿಗೆ ನಿರಂತರ 8 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಜಶೇಖರ ಕುಮಸಿ, ತಹಸೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಮೇಲಾಧಿಕಾರಿಗಳ ಆದೇಶವನ್ನು ನಾವು ಪಾಲಿಸಬೇಕಾಗುತ್ತದೆ. ರೈತರು ಕಂದಾಯ ಉಪವಿಭಾಗಾಧಿಕಾರಿಗಳ ಆದೇಶವನ್ನು ಪಾಲಿಸುವಂತೆ ಮನವೊಲಿಸಿದರೂ ಯಾವುದೇ ಪ್ರಯೋಜನವಾಗಲ್ಲ. ಈ ಸಂದರ್ಭದಲ್ಲಿ ಹಲವಾರು ರೈತರು ವಿದ್ಯುತ್ ಕೊಡಿ, ಇಲ್ಲ ಸಾಯಲು ವಿಷಕೊಡಿ ಎಂದು ಆಗ್ರಹಿಸಿದರು. ರೈತರು ಸಂಜೆಯವರೆಗೂ ಸತ್ಯಾಗ್ರಹ ನಡೆಸಿದರು.ಸತ್ಯಾಗ್ರಹದಲ್ಲಿ ರೈತರಾದ ಮುರಗೇಂದ್ರ ಮಠ, ದುಂಡಪ್ಪ ಬೈರಗೊಂಡ,ಹಣಮಂತ ಬಿರಾದಾರ, ಶೀಲಪ್ಪ ಸಲಗೊಂಡ, ರಾಮಚಂದ್ರ ಬೈರಾಮಡಿ, ನಿಂಗಣ್ಣ ಬೈರಗೊಂಡ, ಜಗದೇವ ಪೀರಗೊಂಡ, ಶಾಂತಪ್ಪ ಸುಸಲಾದಿ, ನೀಲಕಂಡ ತೇಲಿ, ಯಲ್ಲಪ್ಪ ಪೀರಗೊಂಡ, ನಾಗಪ್ಪ ಬೈರಾಮಡಿ, ಲಕ್ಕಪ್ಪ ಪೂಜಾರಿ, ಸಿದರಾಯ ಕಳಗೊಂಡಿ, ಸಿದ್ರಾಮ ಉಟಗಿ, ಬಸವರಅಜ ಬೈರಗೊಂಡ, ಸತ್ಯಪ್ಪ ಬೈರಗೊಂಡ ಇದ್ದರು.