ಸಾರಾಂಶ
ಹೂವಿನಹಡಗಲಿ: ತಾಲೂಕಿನ ಪಟ್ಟಣ ಸೇರಿದಂತೆ ಇತರ ಕಡೆಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುವ ವರ್ತಕರು ಕ್ವಿಂಟಲ್‌ಗೆ 3 ರಿಂದ 5 ಕೆಜಿ ವರೆಗೂ ಕಡಿತ ಮಾಡುತ್ತಿದ್ದಾರೆ. ಈ ಕೂಡಲೇ ಎಪಿಎಂಸಿ ಕಾಯ್ದೆ ಪ್ರಕಾರ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ಇಲ್ಲಿನ ಎಪಿಎಂಸಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಅಧಿಕಾರಿಗಳು ಸಭೆ ಮಾಡಿ, ತಾಲೂಕಿನಲ್ಲಿ ರೈತರಿಗೆ ವರ್ತಕರು ಮಾಡುತ್ತಿರುವ ಅನ್ಯಾಯ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕ ಅಧ್ಯಕ್ಷ ಎಚ್. ಸಿದ್ದಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ಪ್ರಕಾರ ರೈತರ ಕೃಷಿ ಉತ್ಪನ್ನಗಳನ್ನು ಟೆಂಡರ್ ಮಾಡಬೇಕು. ಸರ್ಕಾರದ ಆದೇಶದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ, 1966 ಸೆಕ್ಷನ್ 80(1)ರ ಅನ್ವಯ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಯಾವುದೇ ಮಾರುಕಟ್ಟೆಯ ಕಾರ್ಯ ನಿರ್ವಾಹಕರು ಮತ್ತು ಯಾವುದೇ ಇತರ ವ್ಯಕ್ತಿಗಳು ತೂಕ ಅಥವಾ ಪಾವತಿ ಮತ್ತು ಇತರ ಭತ್ಯಗಳಲ್ಲಿ, ಯಾವುದೇ ಕಡಿತಗಳನ್ನು ಸ್ವೀಕರಿಸಲು ಅಥವಾ ಮರುಪಡೆಯಲು ಅನುಮತಿ ಇಲ್ಲ. ಆದರೆ ತಾಲೂಕಿನಲ್ಲಿ ವಿವಿಧ ಹಳ್ಳಿಗಳಲ್ಲಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರು ರೈತರಿಂದ ಖರೀದಿಸುವ ಸಂದರ್ಭದಲ್ಲಿ ಕ್ವಿಂಟಲ್‌ಗೆ 3ರಿಂದ 5 ಕೆಜಿ ವರೆಗೆ ಕಡಿತ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನ ವರ್ತಕರು ಬಳಕೆ ಮಾಡುತ್ತಿರುವ ಅಳತೆ ಮಾಪನದಲ್ಲಿ ವ್ಯತ್ಯಾಸ ಮಾಡುತ್ತಿರುವ ದೂರುಗಳಿವೆ. ಇಂತಹ ಪ್ರಕರಣಗಳು ಕಂಡು ಬಂದಾಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ತಾಲೂಕಿನಲ್ಲಿ ಈರುಳ್ಳಿ, ರಾಗಿ, ಭತ್ತ, ಹತ್ತಿ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಿ ಬೆಂಬಲ ಬೆಲೆಯೊಂದಿಗೆ ಸರ್ಕಾರವೇ ಖರೀದಿ ಮಾಡಬೇಕು ಎಂದು ಹೇಳಿದರು.
ವರ್ತಕರು ಬಿಳಿ ಚೀಟಿ ವ್ಯವಹಾರ ರದ್ದುಪಡಿಸಿ ಹಾಗೂ ಮುಖ್ಯವಾಗಿ ರೈತರ ಬೆಳೆಗಳನ್ನು ಅರ್ಹ ಟೆಂಡರ್‌ಗಾರರಿಂದ ಟೆಂಡರ್ ಕರೆದು, ವ್ಯವಹರಿಸಲು ಆದೇಶ ನೀಡಬೇಕು ಎಂದು ಹೇಳಿದರು.ರೈತ ಮುಖಂಡರಾದ ಈರಪ್ಪ, ರಾಜುನಾಯ್ಕ, ಮಂಜುನಾಯ್ಕ, ಬಸವರಾಜ ಹಾಗೂ 50ಕ್ಕೂ ಹೆಚ್ಚು ರೈತರು ಕಂದಾಯ ಇಲಾಖೆ ಶಿರಸ್ತೇದಾರ್ ಸಲೀಂ ಹಾಗೂ ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ಅವರಿಗೆ ಮನವಿ ಸಲ್ಲಿಸಿದರು.