ಸಾರಾಂಶ
ಹೊಸಕೋಟೆ: ಸಹಕಾರ ಸಂಘಗಳು ಸೇವಾ ಮನೋಭಾವವನ್ನು ಹೊಂದುವ ಮೂಲಕ ರೈತರ ಅಭ್ಯುದಯದ ಗುರಿಯನ್ನು ಹೊಂದಬೇಕು. ಲಾಭಾಂಶಕ್ಕಿಂತ ಸೇವೆಯ ನಿಲುವು ಅಚಲವಾಗಬೇಕು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ ತಿಳಿಸಿದರು.
ನಗರದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ 2023- 24 ನೇ ಸಾಲಿನ 75ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.ಸಹಕಾರ ಸಂಘದಲ್ಲಿ ಒಟ್ಟು 6569 ಸದಸ್ಯರನ್ನೊಳಗೊಂಡು ಒಟ್ಟು 41.69 ಕೋಟಿ ರು. ಷೇರು ಬಂಡವಾಳ ಹೊಂದಿದ್ದು, 2023- 24ನೇ ಸಾಲಿನಲ್ಲಿ 5554.88 ಲಕ್ಷ ರು. ವ್ಯಾಪಾರ ವಹಿವಾಟು ನಡೆಸಿದ್ದು, 301.13 ಲಕ್ಷ ರು. ವ್ಯಾಪಾರ ಲಾಭಗಳಿಸಿದ್ದು, ಒಟ್ಟು 104.15 ಲಕ್ಷ ರು. ನಿವ್ವಳಲಾಭ ಹೊಂದಿದೆ. ರೈತರಿಗೆ ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಮಾರಾಟ ಮಾಡುವ ಮೂಲಕ ಸಹಕಾರ ಸಂಘ ಉತ್ತಮ ಆಡಳಿತದ ಜೊತೆ ವ್ಯವಹಾರ ಮಾಡುತ್ತಿದೆ, ರೈತರು ಇದರ ಪ್ರಯೋಜನ ಪಡೆಯಬೇಕು ಹಾಗೂ ಮುಂದಿನ ದಿನಗಳಲ್ಲಿ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಸಹಕಾರ ನೀಡಬೇಕು. ಈ ಬಾರಿ ಷೇರುದಾರರಿಗೆ ಶೇ.10 ರಷ್ಟು ಡಿವಿಡೆಂಟ್ ನೀಡುವುದರ ಜೊತೆ ಟಿಎಪಿಸಿಎಂಎಸ್ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಲಾಗುವುದು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಸಹಕಾರ ಸಂಘವನ್ನು ರೈತರಿಗೆ, ಸಾರ್ವಜನಿಕರಿಗೆ ಸಹಕಾರಿಯಾಗಲೆಂದು ನಮ್ಮ ಹಿರಿಯರು ಸ್ಥಾಪಿಸಿದ್ದು, ಮುಂದೆಯೂ ಸಹಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಸೌಲಭ್ಯಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಒದಗಿಸುವತ್ತ ಚಿಂತನೆಗಳು ನಡೆಯಬೇಕು, ನಗರದ ಹೊರವಲಯದ ಗೊಣಕನಹಳ್ಳಿ ಬಳಿ ಸಂಘಕ್ಕೆ ೨ ಎಕರೆ ಜೊತೆ ಮತ್ತೆರಡು ಎಕರೆ ಜಾಗ ಮಂಜೂರು ಮಾಡಲಾಗಿದೆ, ಪಕ್ಕದಲ್ಲೇ ಸುಮಾರು ೨೫ ಎಕರೆ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ, ಪಕ್ಕದಲ್ಲಿ ಚನ್ನೈ ಸೂಪರ್ ಎಕ್ಸ್ ಪ್ರೆಸ್ ಹೈವೆ ಇರುವುದರಿಂದ ಹೊರಜಿಲ್ಲೆಯ ರೈತರಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಹಕಾರಿ ಜೊತೆಗೆ ಚೆನ್ನೈ ಹಾಗೂ ಹೊರ ದೇಶಗಳಿಗೆ ರಪ್ತು ಮಾಡಲು ಸುಲಭವಾಗಲಿದೆ, ಮುಂದಿನ ದಿನಗಳಲ್ಲಿ ಅಗ್ರಿಕಲ್ಚರ್ ಪಾರ್ಕ್ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಮಾಜಿ ಅದ್ಯಕ್ಷ ರುದ್ರಾರಾದ್ಯ, ವಕ್ಕಲಿಗ ಸಂಘದ ಮಾಜಿ ನಿರ್ದೇಶಕ ಗೋಪಾಲ್ ಗೌಡ, ಸಂಘದ ಉಪಾಧ್ಯಕ್ಷ ಆರ್ ರವೀಂದ್ರ, ನಿರ್ದೇಶಕರಾದ ಎಚ್.ಕೆ ರಮೇಶ್, ಸಿ ಮುನಿಯಪ್ಪ, ಹನುಮಂತೇಗೌಡ, ಆಂಜಿನಪ್ಪ, ನಾಗರಾಜ್, ಸುರೇಶ್, ಸವಿತಾ ಗೋಪಾಲ್, ರಾಣಿ ರಾಮಚಂದ್ರ, ಸತೀಶ್ ಗೌಡ, ಎನ್ ಸುರೇಶ್, ಎಲ್‌ಎನ್‌ಟಿ ಮಂಜುನಾಥ್, ಆನಂದಾಚಾರಿ, ಬಿಡಿಸಿಸಿ ನಿರ್ದೇಶಕ ಕೃಷ್ಣಮೂರ್ತಿ, ನಗರಸಭೆ ಸದಸ್ಯೆ ರಮಾ ಮಂಜುನಾಥ್ ಹಾಗೂ ಮೊದಲಾದವರು ಹಾಜರಿದ್ದರು.