- ರೈತರಿಗೆ ಉಚಿತ ಸೌರ ವಿದ್ಯುತ್‌ಗೆ ಆಗ್ರಹ
- ಹಕ್ಕುಪತ್ರ ಸಿಗದ ರೈತರಿಂದ ಭಾರಿ ಧರಣಿ---
ಕನ್ನಡಪ್ರಭ ವಾರ್ತೆ ತಿಪಟೂರು‘ಕಲ್ಪತರು ನಾಡು ತಿಪಟೂರಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಮರಗಳಿಗೆ ನಾನಾ ರೀತಿಯ ರೋಗಗಳು ಬಂದು ಇಳುವರಿ ಕುಗ್ಗಿಸಿದೆ. ಪರಿಣಾಮ ಕೊಬ್ಬರಿಗೆ ಉತ್ತಮ ಬೆಲೆ ಇದ್ದರೂ ರೈತರಿಗೆ ಲಾಭವಾಗುತ್ತಿಲ್ಲ. ಆದ್ದರಿಂದ ಸರಕಾರ ಸದ್ಯದಲ್ಲಿಯೇ ಮಂಡಿಸುವ ಬಜೆಟ್‌ನಲ್ಲೇ ತಿಪಟೂರಿಗೆ ‘ತೆಂಗು ಸಂಶೋಧನಾ ಕೇಂದ್ರ’ ಮಂಜೂರು ಮಾಡಿ ತೆಂಗಿನ ಬಗ್ಗೆ ಸಂಶೋಧನೆಗಳನ್ನು ಆರಂಭಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಜಯಾನಂದಯ್ಯ ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ, ಹಸಿರು ಸೇನೆ ಹಾಗೂ ಬಗರ್ ಹುಕುಂ ಹೋರಾಟ ಸಮಿತಿ ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ರೈತರ ಪ್ರತಿಭಟನೆ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಜಯನಂದಯ್ಯ, ‘ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಸರ್ಕಾರಗಳು ವಿಫಲವಾಗಿದ್ದು, ಕೊಳವೆ ಬಾವಿಗೆ ಹಾಕಲಾಗಿರುವ ಮೋಟರ್‌ಗಳು ಕಡಿಮೆ ವೋಲ್ಟೇಜ್‌ನಿಂದಾಗಿ ಓಡುತ್ತಿಲ್ಲ. ಬೆಸ್ಕಾಂ ಸಾಕಷ್ಟು ಪರಿವರ್ತಕಗಳನ್ನು ಅಳವಡಿಸಿದೇ ಇರುವುದರಿಂದ ತೊಂದರೆಯಾಗುತ್ತಿದ್ದು, ಅದಕ್ಕಾಗಿ ಉಚಿತ ಸೌರ ವಿದ್ಯುತ್ ಅಳವಡಿಸಬೇಕೆಂದು ಆಗ್ರಹಿಸಿದರು.ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಆರ್.ಎಸ್.ಚನ್ನಬಸವಣ್ಣ ಮಾತನಾಡಿ,‘ಇದುವರೆಗೆ ನಾಡಾಳಿದ ಪಕ್ಷಗಳು ಅದಾನಿ, ಅಂಬಾನಿಯಂಥ ಉದ್ಯಮಿಗಳಿಗೆ ಕ್ಷಣದಲ್ಲಿ ಕಡಿಮೆ ಮೊತ್ತಕ್ಕೆ ಭೂಮಿ ಕೊಡುತ್ತದೆ. ಅದೇ ತಲತಲಾಂತರದಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಕೊಡಲು ಮೀನಮೇಷ ಎಣಿಸುತ್ತಿವೆ ಎಂದು ಕಿಡಿಕಾರಿದರು.ರೈತರು ಕಂದಾಯ ಇಲಾಖೆಯಿಂದ ಬಾಕಿ ಇರುವ ಕೆಲಸಗಳ ಪಟ್ಟಿ, ಜಮೀನು ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ರೈತ ಸಂಘಟನೆ ನೀಡಿದ ನಮೂನೆಯೊಂದಿಗೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರವನ್ನು ಪಡೆಯಲಾಯಿತು. ಖಾತೆ ಪಹಣಿ ಬಾಕಿ ಇರುವ ರೈತರು ಹಾಗೂ ಸರ್ಕಾರದಿಂದ ಹಕ್ಕು ಪತ್ರ ಪಡೆಯಲು ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರು ತಮ್ಮ ಬಳಿ ಇರುವ ದಾಖಲೆಗಳನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿ ವಿನೂತನವಾಗಿ ಪ್ರತಿಭಟಿಸಲಾಯಿತು.
ರೈತ ಮುಖಂಡರಾದ ದೇವರಾಜು, ಬಿಳಿಗೆರೆ ನಾಗೇಶ್, ನಾಗರಾಜು, ಜಿ.ಎಸ್.ಷಡಕ್ಷರಿ, ಎಸ್.ಸಿದ್ದಯ್ಯ, ಎಂ.ಶಿವಶಂಕರಯ್ಯ, ತಿಮ್ಮೇಗೌಡ ಇನ್ನಿತರ ರೈತ ಮುಖಂಡರ ಬಾಗವಹಿಸಿದ್ದರು.
ಸೌಹಾರ್ಧ ಕಾರ್ಯದರ್ಶಿ ಅಲ್ಲಾಬಕ್ಷ್ ಮಾತನಾಡಿ ಇಂದು ಸರಕಾರದ ವಿರುದ್ದ ಹೋರಾಟವನ್ನು ರೈತರು ಪ್ರಾರಂಭಿಸಿದ್ದು ಬೇಡಿಕೆಗಳನ್ನು ಈಡೇರಿಸದಿದ್ದರೆ ಹಂತಹಂತವಾಗಿ ಹೋರಾಟವನ್ನು ತೀರ್ವವಾಗಿಸಲಾಗುವುದು. ಫೆ.೧೨ರಂದು ಕರ್ನಾಟಕ ಪ್ರಾಂತ ರೈತಸಂಘ ಸಹಯೋಗದೊಂದಿಗೆ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ರೈತರ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದ್ದು ಅಂದು ಸ್ವಯಂಪ್ರೇರಿತ ತಿಪಟೂರು ಬಂದ್‌ಗೆ ಕರೆ ನೀಡಲಾಗಿದೆ ಎಂದರು.--