ಕನ್ನಡಪ್ರಭ ವಾರ್ತೆ ನಂಜನಗೂಡು

ವಿದ್ಯುತ್ ಖಾಸಗೀಕರಣ ಮಾಡುತ್ತಿರುವ ಸರ್ಕಾರದ ನಿಲುವನ್ನು ವಿರೋಧಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟಿಸಲಾಯಿತು.

ಪಟ್ಟಣದ ಊಟಿ ಮುಖ್ಯರಸ್ತೆಯಲ್ಲಿರುವ ಸೆಸ್ಕ್‌ ವಿಭಾಗೀಯ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಮಾತನಾಡಿ, ಸರ್ಕಾರದ ಹಿಡಿತದಲ್ಲಿರುವ ಸೆಸ್ಕ್‌ ಕಂಪನಿಗಳು, ಲಕ್ಷಾಂತರ ರೈತರ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿವೆ, ವಿದ್ಯುತ್ ಖಾಸಗೀಕರಣವಾದರೆ ವಿದ್ಯುತ್ತನ್ನು ಹಣಕ್ಕೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ, ಜೊತೆಗೆ ಯುವಕ ಯುವತಿಯರಿಗೆ ಸರ್ಕಾರಿ ಉದ್ಯೋಗದ ಲಭ್ಯತೆ ಇಲ್ಲವಾಗುತ್ತದೆ, ಆದ್ದರಿಂದಲೇ ಜನಸೇವಾ ಚುಟುವಟಿಕೆ ಸಂಸ್ಥೆಗಳಾದಯಾದ ವಿದ್ಯುಚ್ಛಕ್ತಿ, ನೀರು, ಹಾಗೂ ಲೋಕೋಪಯೋಗಿ ಇಲಾಖೆಗಳ ಅಂತಹ ಸಂಸ್ಥೆಗಳು ಸರ್ಕಾರದ ವತಿಯಿಂದಲೇ ನಿರ್ವಹಿಸಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಹೇಳಿದ್ದರು.

ಆದರೆ ಸರ್ಕಾರ 15 ಜಿಲ್ಲೆಗಳ ವಿದ್ಯುತ್ ಸರಬರಾಜು ಘಟಕಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದೆ, ಸಾರ್ವಜನಿಕ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸದೆ ತಿರಸ್ಕರಿಸುವ ಮೂಲಕ, ಈ ಕೂಡಲೇ ಸರ್ಕಾರ ಕ್ರಮ ಕೈಗೊಂಡು ವಿದ್ಯುತ್ ಖಾಸಗಿಕರಣ ಕ್ರಮವನ್ನು ಕೈಬಿಡಬೇಕು, ಎಂದು ಆಗ್ರಹಿಸಿದರು.


ರೈತ ಸಂಘದ ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ಮಾತನಾಡಿ, ಸರ್ಕಾರದ ಖಾಸಗಿಕರಣಗಳಿಂದ ಲಕ್ಷಾಂತರ ಯುವಕ ಯುವತಿಯರು ನಿರುದ್ಯೋಗದಿಂದ ಬಳಲುತ್ತಿದ್ದಾರೆ, ಈಗ ಜನರ ಅತಿ ಮುಖ್ಯ ಅವಶ್ಯಕ ವಸ್ತುಗಳ ಸಾಲಿನಲ್ಲಿ ಬರುವ ವಿದ್ಯುತ್ ಸಂಸ್ಥೆಯನ್ನು ಖಾಸಗಿಕರಣ ಮಾಡುವ ಕ್ರಮ ಸರಿಯಲ್ಲ, ಈ ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸೆಸ್ಕ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸೂರಹಳ್ಳಿ ಮಹದೇವ ನಾಯಕ, ಪಟ್ಟಣ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ನಂಜುಂಡ, ಸಿಂಧುವಳ್ಳಿ ಮಹದೇವ ನಾಯಕ, ಪ್ರಧಾನ ಕಾರ್ಯದರ್ಶಿ ದೇವರಾಜ್, ರವಿಚಂದ್ರ, ಹಳ್ಳಿ ದಿಡ್ಡಿ ರವಿ, ಮಂಜು, ಪ್ರಕಾಶ್, ಮನು, ವೆಂಕಟೇಶ್, ಮಂಜುನಾಥ್ ಸೇರಿದಂತೆ ರೈತ ಮುಖಂಡರು ಇದ್ದರು.