ವಿಂಡ್ ಮಿಲ್ ಅಳವಡಿಕೆ ಖಂಡಿಸಿ ರೈತರ ಪ್ರತಿಭಟನೆ

| Published : May 17 2024, 12:30 AM IST

ಸಾರಾಂಶ

ದೈತ್ಯ ಪವನ ವಿದ್ಯುತ್‌ ಯಂತ್ರಗಳ ಹಾವಳಿಯಿಂದಾಗಿ ಜಗಳೂರು ತಾಲೂಕಿನ ಗಡಿಗ್ರಾಮ ಹಿರೇಮಲ್ಲನಹೊಳೆ ಭಾಗದ ರೈತರು ದಿನದಿನಕ್ಕೂ ಹೈರಾಣಾಗುತ್ತಿದ್ದಾರೆ. ಎತ್ತ ನೋಡಿದರತ್ತ ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಕಂಪನಿ ಯಂತ್ರಗಳು ಎದ್ದು ನಿಲ್ಲುತ್ತಿವೆ. ಕಂಪನಿ ಹಾವಳಿಯಿಂದಾಗಿ ರೈತರ ಬದುಕೇ ನರಕವಾಗುತ್ತಿದೆ ಎಂದು ಆರೋಪಿಸಿ ಗುರುವಾರ ರೈತರು ಪ್ರತಿಭಟಿಸಿದರು.

- ಜಗಳೂರು ತಾಲೂಕು ಗಡಿಗ್ರಾಮ ಹಿರೇಮಲ್ಲನಹೊಳೆ, ಹಾಲೇಹಳ್ಳಿ ರೈತರ ತೀವ್ರ ಆಕ್ಷೇಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ/ಜಗಳೂರು

ದೈತ್ಯ ಪವನ ವಿದ್ಯುತ್‌ ಯಂತ್ರಗಳ ಹಾವಳಿಯಿಂದಾಗಿ ಜಗಳೂರು ತಾಲೂಕಿನ ಗಡಿಗ್ರಾಮ ಹಿರೇಮಲ್ಲನಹೊಳೆ ಭಾಗದ ರೈತರು ದಿನದಿನಕ್ಕೂ ಹೈರಾಣಾಗುತ್ತಿದ್ದಾರೆ. ಎತ್ತ ನೋಡಿದರತ್ತ ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಕಂಪನಿ ಯಂತ್ರಗಳು ಎದ್ದು ನಿಲ್ಲುತ್ತಿವೆ. ಕಂಪನಿ ಹಾವಳಿಯಿಂದಾಗಿ ರೈತರ ಬದುಕೇ ನರಕವಾಗುತ್ತಿದೆ ಎಂದು ಆರೋಪಿಸಿ ಗುರುವಾರ ರೈತರು ಪ್ರತಿಭಟಿಸಿದರು.

ಹಿರೇಮಲ್ಲನಹೊಳೆ ಭಾಗದಲ್ಲಿ ವಿಂಡ್‌ ಮಿಲ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಪಂ, ತಾಲೂಕು ಆಡಳಿತದ ಪರವಾನಿಗೆ ಪಡೆಯದೇ ಬೃಹತ್ ವಿಂಡ್‌ ಮಿಲ್‌ಗಳನ್ನು ಅಳವಡಿಸುತ್ತಿವೆ. ಇದರಿಂದ ರೈತರ ಬದುಕು, ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ರೈತರು ಆತಂಕಗೊಂಡಿದ್ದಾರೆ.

ರೈತ ಬಿ.ಆರ್.ಬಾಣೇಶ ಮಾತನಾಡಿ, ಗ್ರಾ.ಪಂ.ನಿಂದಾಗಲೀ, ಜಗಳೂರು ತಾಲೂಕು ಆಡಳಿತದಿಂದಾಗಲೀ ಪವನ ವಿದ್ಯುತ್ ಸ್ಥಾವರ ಅಳವಡಿಸುತ್ತಿರುವವರು ಅನುಮತಿ ಪಡೆದಿಲ್ಲ. ವಿಂಡ್ ಮಿಲ್‌ಗಳಿಂದಾಗಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ನಿರಂತರವಾಗಿ ವಿಂಡ್ ಮಿಲ್‌ ವಾಹನಗಳ ಸಂಚಾರದಿಂದಾಗಿ ಕೃಷಿ ಭೂಮಿ ಹಾಳಾಗುತ್ತಿದೆ. ಕೃಷಿ ಮಾಡಲಾಗದೇ, ಗಾಳಿ ಯಂತ್ರ ತಿರುಗುವುದು, ಅಳವಡಿಸುವುದನ್ನೇ ನೋಡಿ ನಿಲ್ಲಬೇಕಾದ ಸ್ಥಿತಿ ಇದೆ ಎಂದು ಕಿಡಿಕಾರಿದರು.

ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಕಂಪನಿ ರಾತ್ರೋರಾತ್ರಿ ವಿಂಡ್ ಮಿಲ್ ಅಳವಡಿಕೆ ಕಾಮಗಾರಿ ಆರಂಭಿಸಿದೆ. ಇಲ್ಲಿನ ಕೆಲ ರೈತರನ್ನು ಮಧ್ಯವರ್ತಿಗಳಾಗಿ ನೇಮಿಸಿಕೊಂಡು ಕೆಲ ರೈತರಿಗೆ ಆಮಿಷವೊಡ್ಡಿ ಭಯದ ವಾತಾವರಣ ಸೃಷ್ಟಿಸಿ, ಕಾರ್ಯ ಸಾಧನೆ ಮಾಡಿಕೊಳ್ಳುತ್ತಿದೆ. ಕಂಪನಿ ಅಧಿಕಾರಿಗಳನ್ನು ಕೇಳಿದರೆ ಇದು ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತದೆ. ಇದರ ಹಿಂದೆ ತುಂಬಾ ಪ್ರಭಾವಿಗಳಿದ್ದಾರೆ, ನೀವು ಪ್ರಶ್ನಿಸಿದರೆ ನಿಮ್ಮ ಭವಿಷ್ಯಕ್ಕೆ ಕುತ್ತು ಬರುತ್ತದೆಂದು ಭಯ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕೃಷಿ ಯೋಗ್ಯ ಜಮೀನುಗಳನ್ನು ರೈತರು ವಿಂಡ್ ಮಿಲ್‌ ಅ‍ಳ‍ವಡಿಕೆಗಾಗಿ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಮಾನದಂಡ ಪಾಲನೆ ಮಾಡದೆ, ಮನಬಂದಂತೆ ವಿಂಡ್ ಮಿಲ್‌ ಅಳವಡಿಸಲಾಗುತ್ತಿದೆ. ಜನ, ಜಾನುವಾರುಗಳಿಗೆ ತೊಂದರೆ ಆಗುವಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ. ಹಿರೇಮಲ್ಲನಹೊಳೆ ಗ್ರಾಮದ ರಿ.ಸ.ನಂ.33/1, 16ರ ರೈತರಿಗೆ ಸಂಕಷ್ಟ ಶುರುವಾಗಿದೆ. ಎನ್‍ಎಂಎಲ್ ಸ್ಕೀಂನಡಿ ಮೇಕೆ ಸಾಕಾಣಿಕೆ ಘಟಕ ಮಾಡಲು ಉದ್ದೇಶಿಸಲಾಗಿತ್ತು. ಅಷ್ಟೇ ಅಲ್ಲ ರಾಷ್ಟ್ರೀಯ ಗೋಕುಲ ಮಿಷನ್‌ನಡಿ ದೇಸಿ ತಳಿಯ ಹಸು ಸಾಕಾಣಿಕೆಗೆ ಅವಕಾಶ ಬಂದಿತ್ತು. ಆದರೆ, ಬೃಹತ್ ವಿಂಡ್ ಮಿಲ್‌ ಅಳವಡಿಸಿದರೆ ಅವುಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆಂದು ಅವುಗಳನ್ನು ಕೈಬಿಟ್ಟಿದ್ದೇವೆ ಎಂದರು.

ವಿಂಡ್ ಮಿಲ್ ಅಳವಡಿಸುವುದರಿಂದ 2 ಕಿ.ಮೀ.ವರೆಗೂ ಅದರ ಕರ್ಕಶ ಸದ್ದು ಹೊರಬರುತ್ತದೆ. ಇದರಿಂದ ಜನರಷ್ಟೇ ಅಲ್ಲ, ಜಾನುವಾರು, ಪಕ್ಷಿಗಳು, ವಿಶೇಷವಾಗಿ ನವಿಲು ಸೇರಿದಂತೆ ಅಪರೂಪದ ಪಕ್ಷಿಗಳು, ಕಾಡು ಪ್ರಾಣಿಗಳಿಗೂ ತೊಂದರೆಯಾಗಲಿದೆ. ಅವುಗಳ ಸಂತತಿಯೇ ಈ ಭಾಗದಲ್ಲಿ ನಶಿಸಿ ಹೋಗುವ ಅಪಾಯ ಇಲ್ಲದಿಲ್ಲ. ಕಿರಿದಾದ ರಸ್ತೆಗಳಲ್ಲಿ ಬೃಹತ್ ವಾಹನ ಸಂಚಾರದಿಂದ ರಸ್ತೆ ಹಾಳಾಗಿವೆ. ಇದೆಲ್ಲಾ ಗೊತ್ತಿದ್ದರೂ ಆಡಳಿತ ಯಂತ್ರ, ಅಧಿಕಾರಿಗಳು ಯಾಕೆ ರೈತರು, ಗ್ರಾಮಸ್ಥರ ಪರ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರೈತರಾದ ಕೆ.ಸಿ.ಬಸವರಾಜ, ಎಚ್.ಅಮರೇಂದ್ರ, ವಿ.ಕೃಷ್ಣಮೂರ್ತಿ, ರಘು ಜಾಗ್ವಾರ್, ವಿ.ಗುರುಲಿಂಗಪ್ಪ ಸೇರಿದಂತೆ ಹಿರೇಮಲ್ಲನಹೊಳೆ, ಹಾಲೇಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

- - -

ಕೋಟ್ಸ್ ಒಳ ಒಪ್ಪಂದ ಬಗ್ಗೆ ತನಿಖೆಯಾಗಲಿ ಜಗಳೂರು ತಹಸೀಲ್ದಾರ್, ಕಂದಾಯ ನಿರೀಕ್ಷಕ ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ನಾವು ಮನವಿ ನೀಡಿದ್ದೇವೆ. ವಿಂಡ್ ಮಿಲ್ ಅಳ‍ವಡಿಕೆ ಕಾಮಗಾರಿ ತಡೆಗೆ ಒತ್ತಾಯಿಸಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿಲ್ಲ. ಕ್ಲೀನ್ ಮ್ಯಾಕ್ಸ್ ಕಂಪನಿ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಇಡೀ ತಾಲೂಕು ಆಡಳಿತ ಕುಣಿಯುತ್ತಿದೆ. ಕಂಪನಿ ಮತ್ತು ಅಧಿಕಾರಿಗಳ ಮಧ್ಯೆ ಒಳ ಒಪ್ಪಂದ, ಒಳ ವ್ಯವಹಾರ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆಯೂ ತನಿಖೆ ಆಗಬೇಕು

- ಬಿ.ಆರ್‌.ಬಾಣೇಶ, ಹಿರೇಮಲ್ಲನಹೊಳೆ ರೈತ

- - - ಮೇಲಾಧಿಕಾರಿಗಳ ಗಮನಕ್ಕೆ ವಿಚಾರ: ಪಿಡಿಒ ಹಿರೇಮಲ್ಲನಹೊಳೆ, ಹಾಲೇಹಳ್ಳಿ ರೈತರು ಗ್ರಾಪಂಗೆ ವಿಂಡ್ ಮಿಲ್ ಅಳವಡಿತೆ ತಡೆಯುವಂತೆ ಮನವಿ ಸಲ್ಲಿಸಿದ್ದಾರೆ. ಈವರೆಗೆ ಕ್ಲೀನ್ ಮ್ಯಾಕ್ಸ್ ಕಂಪನಿಯು ಸ್ಥಳೀಯ ಆಡಳಿತದಿಂದ ವಿಂಡ್ ಮಿಲ್ ಅಳವಡಿಸಲು ಅನುಮತಿ ಪಡೆದಿಲ್ಲ. ತಹಸೀಲ್ದಾರ್, ಕಂದಾಯ ನಿರೀಕ್ಷಕರು, ತಾಪಂ ಇಒ ಅವರ ಗಮನಕ್ಕೂ ಈ ವಿಚಾರವನ್ನು ತಂದಿದ್ದೇವೆ - ಡಿ.ಎನ್.ಅರವಿಂದ, ಪಿಡಿಒ

- - - -16ಕೆಡಿವಿಜಿ3, 4, 5:

ಜಗಳೂರು ತಾಲೂಕು ಹಿರೇಮಲ್ಲನಹೊಳೆ, ಹಾಲೇಹಳ್ಳಿ ಗ್ರಾಮದ ರೈತರು ವಿಂಡ್ ಮಿಲ್ ಅಳವಡಿಕೆ ಖಂಡಿಸಿ ವಿಂಡ್ ಮಿಲ್ ಹೊತ್ತ ವಾಹನ ತಡೆದು ಪ್ರತಿಭಟಿಸಿದರು.