ಹಾಲು ಸಂಗ್ರಹಣೆ ಸ್ಥಗಿತ ಖಂಡಿಸಿ ರೈತರ ಪ್ರತಿಭಟನೆ

| Published : Jun 08 2024, 12:35 AM IST

ಸಾರಾಂಶ

ಹಾವೇರಿ ತಾಲೂಕಿನ ಸಂಗೂರ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸಂಗೂರಿನ ರೈತರು ನಗರದ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸಂಗೂರಿನ ರೈತರು ನಗರದ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಗೂರ ಗ್ರಾಮದಲ್ಲಿ ಇಪ್ಪತ್ತು ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಕಾಲಕ್ಕೂ ಸಂಘದಲ್ಲಿ ಹಾಲು ಶೇಖರಣೆ ಸ್ಥಗಿತಗೊಂಡಿದ್ದಿಲ್ಲ. ಇಲ್ಲಿ ಹಾಲು ಶೇಖರಣೆ ಮಾಡುತ್ತಿದ್ದರಿಂದ ಸಂಗೂರ ಸುತ್ತ ಮುತ್ತಲಿನ ಗ್ರಾಮಗಳ ರೈತರಿಗೂ ಈ ಸಂಘದಿಂದ ತುಂಬಾ ಅನುಕೂಲವಾಗಿತ್ತು. ಬೇಸಿಗೆ ಕಾಲವಾಗಿದ್ದರಿಂದ ಸಂಘದಲ್ಲಿ ಸ್ವಲ್ಪಮಟ್ಟಿಗೆ ಹಾಲಿನ ಶೇಖರಣೆ ಪ್ರಮಾಣ ಕಡಿಮೆಯಾಗಿತ್ತು. ಅದನ್ನೇ ನೆಪವಾಗಿಟ್ಟುಕೊಂಡು ಸಂಗೂರಿನ ಹಾಲು ಉತ್ಪಾದನಾ ಸಂಘದಿಂದ ಹಾಲು ಶೇಖರಣೆಯನ್ನು ಜೂ.೧ರಂದು ಬಂದ್ ಮಾಡಿದ್ದರು. ಇದರಿಂದಾಗಿ ಈ ಭಾಗದಲ್ಲಿ ದಿನನಿತ್ಯ ಸಂಗ್ರಹಗೊಳ್ಳುತ್ತಿದ್ದ ಹಾಲನ್ನು ಯಾರಿಗೆ ನೀಡಬೇಕು ಎಂಬುದೇ ತೋಚದಂತಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು. ಪ್ರತಿಭಟನಾ ಸ್ಥಳಕ್ಕೆ ಕೆಎಂಎಫ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರು ಆಗಮಿಸಿ ರೈತರ ಸಮಸ್ಯೆ ಆಲಿಸಿ ತಕ್ಷಣವೇ ಸಂಗೂರ ಹಾಲು ಉತ್ಪಾದಕರ ಸಂಘದಿಂದ ಹಾಲು ಶೇಖರಣೆ ಮಾಡುವ ಜೊತೆಗೆ ಹಾಲಿನ ಪ್ರೋತ್ಸಾಹ ಧನ ಸರಿಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು. ಆಗ ರೈತರು ಪ್ರತಿಭಟನೆ ಹಿಂಪಡೆದು ಮುಂದಿನ ದಿನಗಳಲ್ಲಿ ಹಾಲನ್ನು ಹೆಚ್ಚಿಗೆ ಪ್ರಮಾಣದಲ್ಲಿ ಶೇಖರಿಸುತ್ತವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಸಂಗೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಸವೇಶ್ವರಗೌಡ ಪಾಟೀಲ, ಉಡಚಪ್ಪ ವರ್ದಿ, ನಿಂಗಪ್ಪ ಆಡೂರ, ಶೇಖಣ್ಣ ಬೆಳವಗಿ, ಬಸಣ್ಣ ಸಿದ್ದಪ್ಪನವರ, ನಿಂಗಪ್ಪ ಕಮ್ಮಾರ, ರಾಜು, ನಾಗಪ್ಪ ಸಜ್ಜನ್, ಪುಟ್ಟಪ್ಪ ಚಪ್ಪರಮನಿ ಸೇರಿದಂತೆ ಸಂಗೂರ ಗ್ರಾಮದ ರೈತರು ಪಾಲ್ಗೊಂಡಿದ್ದರು.