ಕನ್ನಡಪ್ರಭ ವಾರ್ತೆ ಇಂಡಿ ತಾಲೂಕಿನ ರೂಗಿ ಗ್ರಾಮದಲ್ಲಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಶಿವಾಜಿ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಇಂಡಿ- ರೂಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ರೂಗಿ ಗ್ರಾಮದಲ್ಲಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಶಿವಾಜಿ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಇಂಡಿ- ರೂಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಗುರಪ್ಪ ಅಗಸರ, ಅದೃಷ್ಟಪ್ಪ ವಾಲಿ, ಕೆಂಚಪ್ಪ ನಿಂಬಾಳ, ಭೀಮರಾಯ ನಿಂಗಪ್ಪ ಉಪ್ಪಾರ ಮಾತನಾಡಿ, ಗುತ್ತಿ ಬಸವಣ್ಣ ಕಾಲುವೆಗೆ ಯಾವತ್ತೂ ನೀರು ಬಿಡಬೇಕು. ಒಂದು ಎರಡು ದಿನಗಳವರೆಗೆ ಬಿಟ್ಟು ನಂತರ ಬಂದ್ ಮಾಡಿದರೆ ಕೇಳುವುದಿಲ್ಲ. ರಾಂಪೂರದ ಕಚೇರಿಗೆ ಎಲ್ಲ ರೈತರು ಬಂದು ನಿಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಸಿದರು.ನೀರು ಬಿಡುವ ಕುರಿತು ಕೆಬಿಜೆಎನ್‌ಎಲ್ ಅಧಿಕಾರಿಗಳು ಲಿಖಿತ ರೂಪದಲ್ಲಿ ಕೊಟ್ಟರೆ ಮಾತ್ರ ಧರಣಿ ಹಿಂದೆ ಪಡೆಯುವುದಾಗಿ ತಿಳಿಸಿದರು.ಈ ವೇಳೆ ರಾಂಪೂರದ ಅಧಿಕ್ಷಕ ಅಭಿಯಂತರ ಶಿವಶಂಕರ ದೇವಾಪೂರ ಮಾತನಾಡಿ, ಈಗಾಗಲೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುತ್ತಿದ್ದೇವೆ. ಆಲಮಟ್ಟಿ ಡ್ಯಾಂನಲ್ಲಿ ನೀರಿನ ಸಾಮರ್ಥ್ಯ ನೋಡಿ ನೀರು ಬಿಡಲಾಗುವುದು ಎಂದರು. ಗುತ್ತಿ ಬಸವಣ್ಣ ಕಾಲುವೆಗೆ ೯೭ ಕಿ.ಮೀ ವರೆಗೆ ಮಾತ್ರ ಕೃಷಿ ಮತ್ತು ದನಕರುಗಳಿಗೆ ನೀರು ಕೊಡುತ್ತೇವೆ. ೯೭ ರಿಂದ ೧೪೭ ಕಿ.ಮೀ ಮೂರನೆಯ ಹಂತಕ್ಕೆ ಆಲಮಟ್ಟಿ ಎತ್ತರ ೫೨೪ ಮೀ. ಆದಾಗ ಮಾತ್ರ ನೀರು ಬಿಡಲಾಗುವದು. ಆದರೂ ಮಾನವೀಯ ದೃಷ್ಟಿಯಿಂದ ದನಕರುಗಳಿಗೆ ಕುಡಿಯಲು ನೀರು ಬಿಡಲಾಗುತ್ತಿದೆ ಎಂದರು.
ಅದಕ್ಕೆ ರೈತರು, ಈ ಹಿಂದಿನ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಅವರಿಗೆ ೯೭ ಕಿ.ಮೀಯಿಂದ ೧೪೭ ಕಿ.ಮೀ ನೀರು ಬಿಡಲು ಆಗ್ರಹಿಸಿದ್ದೇವು. ಅವರು ಆರು ತಿಂಗಳಲ್ಲಿ ಬಿಡುವುದಾಗಿ ಅಶ್ವಾಸನೆ ನೀಡಿದ್ದರು. ಹಾಗಾದರೆ ರೈತರಿಗೆ ಮೋಸ ಮಾಡಲಾಗುತ್ತದೆ. ನೀರು ಬಿಡುವ ಕುರಿತು ಲಿಖಿತ ರೂಪದಲ್ಲಿ ಕೊಟ್ಟರೆ ಮಾತ್ರ ಪ್ರತಿಭಟನೆ ಹಿಂದೆ ಪಡೆಯುವುದಾಗಿ ತಿಳಿಸಿದರು.ಕಾರ್ಯಪಾಲಕ ಅಭಿಯಂತರ ಉಜ್ವಲ ಸೋನಾವನೆ, ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಬಾಳು ಮುಳಜಿ ಮಾತನಾಡಿದರು. ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿಯವರ ಕೆಬಿಜೆಎಲ್ ಅಧಿಕಾರಿಗಳು ಬರೆದ ಲಿಖಿತ ಪತ್ರವನ್ನು ಓದಿದರು.ನಂತರ ಪ್ರತಿಭಟನೆ ಹಿಂದೆ ಪಡೆದರು. ಸಿಪಿಐ ಸುನೀಲ ಪಾಟೀಲ, ಪಿಎಸ್‌ಐ ರಾಜು ಮಮದಾಪುರ ಸಿಬ್ಬಂದಿ ಸೇರಿ ಬಿಗಿ ಬಂದೋಬಸ್ತ ಮಾಡಿದ್ದರು.