ಕನ್ನಡಪ್ರಭ ವಾರ್ತೆ ಲೋಕಾಪುರ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಲೋಕಾಪುರದಲ್ಲಿ ಶುಕ್ರವಾರ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಲೋಕಾಪುರದಲ್ಲಿ ಶುಕ್ರವಾರ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಈ ವೇಳೆ ರೈತ ಮುಖಂಡ ತಿಮ್ಮಣ್ಣಾ ಹುಲಸದ ಮಾತನಾಡಿ, ರೈತರ ಸಮಸ್ಯೆಗೆ ಸರ್ಕಾರ ಬೇಗನೆ ಸ್ಪಂದಿಸಿ ಶಾಶ್ವತ ಪರಿಹಾರ ಕಂಡು ಹಿಡಿದು, ನಮಗೆ ಸಿಗಬೇಕಾದ ಕಾಲುವೆ ನೀರನ್ನು ಹರಿಸಬೇಕು. ಮೊದಲೇ ಬರ ಬಿದ್ದಿದೆ. ಗೋಕಾಕದಿಂದ ಬಿಡುವ ನೀರನ್ನು ನಮ್ಮ ಭಾಗಕ್ಕೆ ಬಿಡಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಜತೆಗೆ ಕಾಲುವೆ ದಂಡೆಗೆ ಇರುವ ಮೋಟಾರಗಳನ್ನು ವಶಪಡಿಸಿಕೊಂಡು ನೀರು ಮುಂದಿನ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ರೈತ ಹಾಗೂ ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಬಿಸಿಲಿನ ಬೇಗೆಯಿಂದ ಜನ, ಜಾನುವಾರುಗಳು ನೀರಿಲ್ಲದೆ ತತ್ತರಿಸಿ ಹೋಗಿವೆ. ಹೀಗಾಗಿ ತಕ್ಷಣ ಘಟಪ್ರಭಾ ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು. ಬೋರ್‌ವೆಲ್, ಬಾವಿ, ಹಳ್ಳ, ಕೆರೆಗಳು ಬತ್ತಿ ಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಯಲು ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ ತಕ್ಷಣ 20 ದಿನಗಳ ಕಾಲ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಬೇಕು. ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪೈಪ್‌ಲೈನ್ ಹಾಗೂ ಮೋಟಾರ್‌ಗಳನ್ನು ಸಂಬಂಧಿಸಿದ ರೈತರು ಕೂಡಲೇ ಸ್ವಯಂ ಪ್ರೇರಿತವಾಗಿ ತೆರವುಗೋಳಿಸಬೇಕು. ಇಲ್ಲದಿದ್ದರೆ ಪೊಲೀಸ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮೂಲಕ ತೆರವುಗೊಳಿಸಿ ಮುಂದಿನ ಗ್ರಾಮಗಳಿಗೆ ನೀರು ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ರೈತ ಗೋವಿಂದಪ್ಪ ನಾಯಕ ಮಾತನಾಡಿ, ಕಾಲುವೆಯ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ವಿವಿಧೆಡೆ ಸೋರಿಕೆಯಾಗುತ್ತಿರುವ ನೀರಿನ ಸಮಸ್ಯೆಯನ್ನು ಅವರು ಸರಿಪಡಿಸಬೇಕು. ಈ ಕುರಿತು ನೀರಾವರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಎಲ್ಲ ರೈತರಿಗೂ ನ್ಯಾಯ ಸಿಗಬೇಕು, ಮೇಲ್ಭಾಗದ ರೈತರು ಹೆಚ್ಚಿನ ನೀರು ಪಡೆದರೆ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಎಲ್ಲರಿಗೂ ಸಮರ್ಪಕವಾಗಿ ನೀರು ತಲುಪಿಸುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಲೋಕಾಪುರದಲ್ಲಿ ನೀರಿಗಾಗಿ ಪ್ರತಿಭಟನೆ ಹಮ್ಮಿಕೊಂಡಾಗ ವಾಹನ ಸವಾರರು ತೀವ್ರ ಪರದಾಡಿದರು. ಬೆಳಗಾವಿ-ರಾಯಚೂರ ಹಾಗೂ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರಾದ ರಾಮನಗೌಡ ಪಾಟೀಲ, ಯಮನಪ್ಪ ಹೊರಟ್ಟಿ, ಅರ್ಜುನ ಕೊಪ್ಪದ, ಆನಂದಗೌಡ ಪಾಟೀಲ, ಶ್ರೀನಿವಾಸ ಪಾಟೀಲ, ಛಾಯಪ್ಪಗೌಡ ಪಾಟೀಲ, ವಿಠ್ಠಲಪ್ಪ ತುಳಸಿಗೇರಿ, ಯಮನಪ್ಪ ಹೊರಟ್ಟಿ, ತಿಮ್ಮಣ್ಣಾ ತುಳಸಿಗೇರಿ, ಭೀಮನಗೌಡ ಪಾಟೀಲ, ರಾಮಲಿಂಗಪ್ಪ ಕಟ್ಟಿ, ಮುದಕಪ್ಪ ಪೂಜೇರ, ಮುತ್ತು ಹಣಗಲಿ, ಲೋಕಣ್ಣಾ ಉಳ್ಳಾಗಡ್ಡಿ, ಶೆಟ್ಟೆಪ್ಪ ಮುದ್ದಾಪುರ, ರಂಗನಗೌಡ ಪಾಟೀಲ, ಗೋವಿಂದಪ್ಪ ಪಾಟೀಲ, ಪಾಂಡುರಂಗ ಹೂವಣ್ಣವರ, ಗುಲಾಬಸಾಬ ಅತ್ತಾರ, ಆನಂದ ಹವಳಖೋಡ, ಭೀಮಶಿ ಅವರಾದಿ, ಪರಮಾನಂದ ಕನಕಪ್ಪನವರ ಅರಳಿಕಟ್ಟಿ, ಲಕ್ಷಾನಟ್ಟಿ, ವರ್ಚಗಲ್, ಕಾಡರಕೊಪ್ಪ, ಹೊಸಕೊಟಿ, ದಾದನಟ್ಟಿ, ಹೆಬ್ಬಾಳ ತಿಮ್ಮಾಪುರ ಅನೇಕ ಗ್ರಾಮದ ರೈತರು ಭಾಗವಹಿಸಿದ್ದರು. ತಹಶೀಲ್ದಾರ ಡಾ.ಚಿಕ್ಪಪ್ಪ ನಾಯಕ, ಉಪತಹಶೀಲ್ದಾರ ಬಿ.ಎಸ್.ರಂಗಣ್ಣವರ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಮುಧೋಳ ಸಿಪಿಐ ಎಂ.ನಾಗರಡ್ಡಿ, ಪಿಎಸ್‌ಐ ಕೆ.ಬಿ.ಜಕ್ಕನ್ನವರ, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಡ್ಯೂಟಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಜೆ.ಕೆ ಅವರು ರೈತರೊಂದಿಗೆ ಸಮಾಲೋಚನೆ ನಡೆಸಿ ನೀರು ಬಿಡಿಸುತ್ತೇವೆ ಎಂದಾಗ ರೈತರು ಪ್ರತಿಭಟನೆ ಹಿಂಪಡೆದರು.---------------
ಕೋಟ್.....ಪ್ರಾದೇಶಿಕ ಆಯುಕ್ತರಿಗೆ 2 ಬಾರಿ ನೀರು ಬಿಡುಗಡೆಗೊಳಿಸಿ ಆದೇಶಿಸಿದ್ದು, ಕುಡಿಯುವ ನೀರಿನ ಅವಶ್ಯಕತೆಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಈಗಾಗಲೇ ೨೪೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ರೈತರು ನೀರನ್ನು ಮಿತವಾಗಿ ಬಳಸಿ ಮುಂದಿನ ಗ್ರಾಮಗಳಿಗೆ ನೀರು ಹೋಗುವ ಹಾಗೆ ನೋಡಿಕೊಳ್ಳಬೇಕು. ರೈತರ ಸಮಸ್ಯೆಗೆ ಸದಾ ಸ್ಪಂದಿಸುತ್ತೇನೆ. - ಆರ್.ಬಿ.ತಿಮ್ಮಾಪುರ, ಮಾಜಿ ಸಚಿವರು, ಶಾಸಕರು
--------------ರೈತರಿಗೆ ಪ್ರಾಮಾಣಿಕವಾಗಿ ನೀರು ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ರೈತರ ಸಹಕಾರವೂ ಮುಖ್ಯವಾಗಿದೆ. ಈ ಭಾಗದ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಡಾ.ಚಿಕ್ಕಪ್ಪ ನಾಯಕ, ತಹಶೀಲ್ದಾರ, ಮುಧೋಳ.