ಕನ್ನಡಪ್ರಭ ವಾರ್ತೆ ಹುಣಸೂರು
ತಂಬಾಕು ದರದಲ್ಲಿ ದಿಢೀರ್ ಕುಸಿತ ಮತ್ತು ತಂಬಾಕು ಮಂಡಳಿ ಅಧಿಕಾರಿಯ ಅನುಚಿತ ಮಾತುಗಳಿಂದ ರೋಸಿಹೋದ ರೈತರು ಹರಾಜು ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು. 4 ಗಂಟೆಗೂ ಹೆಚ್ಚು ಕಾಲ ಹುಣಸೂರು-ಕೆ.ಆರ್. ನಗರ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಶಾಸಕ ಜಿ.ಡಿ. ಹರೀಶ್ ಗೌಡ ಭೇಟಿ ನೀಡಿ ರೈತರನ್ನು ಸಮಾಧಾನಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.ಪಾತಾಳಕ್ಕಿಳಿದ ಬೆಲೆ: ಕಚ್ಚಾ ತಂಬಾಕಿನ ಮೇಲೆ ಅಬಕಾರಿ ಸುಂಕ ಮತ್ತು ಜಿಎಸ್ಟಿ ಏರಿಕೆಯನ್ನು ವಿರೋಧಿಸಿ 15 ದಿನಗಳ ಕಾಲ ತಂಬಾಕು ಖರೀದಿ ಕಂಪನಿಗಳ ಅಸೋಸಿಯೇಷನ್ ದೇಶಾದ್ಯಂತ ತಂಬಾಕು ಖರೀದಿ ಪ್ರಕ್ರಿಯೆಯನ್ನು ಬಹಿಷ್ಕರಿಸಿತ್ತು. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಬಹಿಷ್ಕಾರ ಹಿಂಪಡೆದ ಕಂಪನಿಗಳು, ಕಳೆದ 10 ದಿನಗಳಿಂದ ಖರೀದಿ ಆರಂಭಿಸಿದ್ದರು. ಆದರೆ ಮಾರುಕಟ್ಟೆ ಮರು ಆರಂಭಗೊಂಡ ದಿನದಿಂದಲೂ 320 ರು. ಗಳಿದ್ದ ಮೊದಲ ದರ್ಜೆ ತಂಬಾಕಿನ ಬೆಲೆ ದಿನೇ ದಿನೇ ಇಳಿಮುಖವಾಗುತ್ತಲೇ ಇದ್ದು, ಬುಧವಾರ ತಂಬಾಕಿನ ಬೆಲೆ ಕೆಜಿಗೆ ರು. 273ಕ್ಕೆ ಬಂದು ನಿಂತಿತ್ತು. 50-60 ರು. ಗಳ ಇಳಿಕೆಯಿಂದ ರೈತರು ತೀವ್ರ ಅಸಮಾಧಾನಗೊಂಡಿದ್ದರು.
ಅಧಿಕಾರಿಯ ಅನುಚಿತ ಮಾತುಗಳು:ಇದೇ ವೇಳೆ ಹರಾಜು ಮಾರುಕಟ್ಟೆ 64ರಲ್ಲಿ ರೈತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವೇಳೆ ದರ ಕುಸಿತದಿಂದ ಕಂಗಾಲಾಗಿ ಸ್ಥಳದಲ್ಲಿದ್ದ ಫೀಲ್ಡ್ ಆಫೀಸರ್ ಕಿರಣ್ ಕುಮಾರ್ ಗೆ ಅವಲತ್ತುಕೊಂಡಿದ್ದಾರೆ. ಈ ವೇಳೆ ಕಿರಣ್ ಕುಮಾರ್ ದರ ಸಿಗಲಿಲ್ಲವೆಂದರೆ ಮಂಡಳಿ ಏನು ಮಾಡಲು ಸಾಧ್ಯ? ಬೆಲೆ ಸಿಗುತ್ತಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಿರೆಂದು ಅಸಂಬದ್ಧ ಮಾತುಗಳನ್ನು ಆಡಿದ್ದಾರೆ. ಕ್ಷಣಮಾತ್ರದಲ್ಲಿ ಅಲ್ಲಿದ್ದ ರೈತರು ಕೋಪಗೊಂಡು ಕೂಡಲೇ ಮಾರುಕಟ್ಟೆಯ ಹರಾಜು ಅಧೀಕ್ಷಕ ಮೀನಾ ಮತ್ತು ಫೀಲ್ಡ್ ಆಫೀಸರ್ ಕಿರಣ್ ಕುಮಾರ್ ಅವರನ್ನು ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಧೀಕ್ಷಕ ಮೀನಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡರೆ, ಕಿರಣ್ ಕುಮಾರ್ ಮೇಲೆ ರೈತರು ಮುಗಿಬಿದ್ದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ದಾಸ್ತಾನು ಕೊಠಡಿಗೆ ತರೆಳಿ ಬಾಗಿಲು ಜಡಿದುಕೊಂಡರೂ ಬಾಗಿಲು ಒಡೆದು ನುಗ್ಗಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಷಯ ಹರಡುತ್ತಿದ್ದಂತೆ ಮಾರುಕಟ್ಟೆ ಪ್ರಾಂಗಣದಲ್ಲಿದ್ದ ರೈತರು ಕಟ್ಟಡದ ಕಿಟಕಿ ಗಾಜುಗಳನ್ನು ಕಲ್ಲಿನಿಂದ ಒಡೆದು ಪುಡಿಪುಡಿ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ರವಿ ಮತ್ತವರ ತಂಡ ರೈತರನ್ನು ಸಮಾಧಾನಿಸಿ ಹೊರ ಕಳುಹಿಸಿದ್ದಾರೆ.
4 ಗಂಟೆ ಕಾಲ ರಸ್ತೆತಡೆ:
ಮಾರುಕಟ್ಟೆಯಿಂದ ಬೆಳಗ್ಗೆ 9ಕ್ಕೆ ಹೊರಬಂದ ರೈತರು ಸತತ 4 ಗಂಟೆಗಳ ಕಾಲ ಮಂಡಳಿ ಮುಂಭಾಗದ ಮುಖ್ಯರಸ್ಥೆಯ ಮೇಲೆ ಕುಳಿತು ಪ್ರತಿಭಟಿಸಿದರು. ಮಂಡಳಿ ಅಧಿಕಾರಿಗಳ ವಿರುದ್ಧ ಘೋಷಣೆ ಮೊಳಗಿಸಿದರು. ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದರು. ಮತ್ತು ಕೆಜಿಗೆ 320 ರು. ಗಳಿಗಿಂತ ಕಡೆಮೆ ದರ ನೀಡದಂತೆ ಆಗ್ರಹಿಸಿದರು.ಸಸ್ಪೆಂಡ್ ಮಾಡಲು ಆಗ್ರಹ:
ಶಾಸಕ ಜಿ.ಡಿ. ಹರೀಶ್ ಗೌಡ ಅವರಿಗೆ ವಿಷಯ ತಿಳಿದು ಪಿರಿಯಾಪಟ್ಟಣದಲ್ಲಿ ಬುಧವಾರ ಆಯೋಜನೆಗೊಂಡಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದರು. ಈ ವೇಳೆ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ರೈತರೊಂದಿಗೆ ಅನುಚಿತವಾಗಿ ವರ್ತಿಸಿರುವ ಅಧಿಕಾರಿ ಯಾರೇ ಆಗಲಿ ಆತನನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ನಾವು ಎಂದಿಗೂ ರೈತಪರ ನಿಲುವ ಹೊಂದಿರುವರೇ ಹೊರತು ಅಧಿಕಾರಿಗಳ ಪರವಲ್ಲ. ಕಳೆದ ಸಾಲಿನಲ್ಲೂ ಬೆಲೆ ಕುಸಿತವಾದ ವೇಳೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೂಲಕ ಕೇಂದ್ರ ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್ ಅವರನ್ನು ಭೇಟಿ ಸಮಸ್ಯೆ ಪರಿಹರಿಸಲಾಗಿತ್ತು. 50 ರಿಂದ 60 ರು. ಕುಸಿದರೆ ರೈತರು ಆತಂಕ ಪಡುವುದು ಸಹಜ. ಇದೀಗ ಮತ್ತೆ ರಾಜ್ಯದ ನೇತಾರ ಕುಮಾರಸ್ವಾಮಿಯವರಿಗೆ ಮಾಹಿತಿ ನೀಡಲಾಗುವುದೆಂದರು.ದೂರವಾಣಿಯಲ್ಲಿ ಮಾತನಾಡಿದ ಎಚ್ಡಿಕೆ:
ಪ್ರತಿಭಟನಾನಿರತರ ಮುಂದೆ ನಿಖಿಲ್ ಕುಮಾಸ್ವಾಮಿ ತಮ್ಮ ತಂದೆ ಎಚ್.ಡಿ. ಕುಮಾರಸ್ವಾಮಿರಿಗೆ ಫೋನಾಯಿಸಿ ಸಮಸ್ಯೆಯ ಕುರಿತು ತಿಳಿಸಿದಾಗ, ಇನ್ನೆರಡು ದಿನಗಳಲ್ಲಿ ತಾವು ದೆಹಲಿಗೆ ತೆರಳುವುದಾಗಿಯೂ, ಆ ವೇಳೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿ ದರ ಏರಿಸುವತ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ರೈತರು ಆತಂಕ ಪಡದೇ, ಭಾವೋದ್ವೇಗಕ್ಕೆ ಒಳಗಾಗದೇ ಸಹಕಾರ ನೀಡಲು ಕೋರಿದರು.ನಂತರ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅಧಿಕಾರಿಯ ನಡವಳಿಕೆ ಖಂಡನೀಯ. ಜೊತೆಯಲ್ಲಿಯೇ ದರ ಏರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಿಮ್ಮ ಮುಂದೆಯೇ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರೈತರಿಗಾಗಿಯೇ ಕಟ್ಟಿದ ಪಕ್ಷ ಜೆಡಿಎಸ್ ಪಕ್ಷವಾಗಿದೆ. ರೈತರು ಆತುರದ ನಿರ್ಧಾರಗಳನ್ನು ಕೈಗೊಳ್ಳದೇ ನಮ್ಮೊಂದಿಗೆ ಸಹಕರಿಸಿ ಎಂದು ಕೋರಿ, ಪ್ರತಿಭಟನೆ ಹಿಂಪಡೆಯಲು ಕೋರಿದಾಗ ರೈತರು ಸಮ್ಮತಿ ವ್ಯಕ್ಕಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ಹಿರಿಕ್ಯಾತನಹಳ್ಳಿ ಸಂಪತ್, ರವಿ, ಪುಟ್ಟರಾಜು ಮಾದಳ್ಳಿ, ಯೋಗೀಶ್, ಗಣೇಶ್, ಮಹೇಶ್, ರಾಜೇಶ್, ಮಹದೇವ್, ಸೇರಿದಂತೆ ಮೂರೂ ಪ್ಲಾಟ್ಫಾರಂನ ರೈತರು ಭಾಗವಹಿಸಿದ್ದರು.ಮಾಜಿ ಶಾಸಕ ಅಶ್ವಿನ್ ಕುಮಾರ್, ಕೆ. ಮಹದೇವ್, ಜೆಡಿಎಸ್ ಮೈಸೂರು ನಗರಾಧ್ಯಕ್ಷ ಎಸ್.ಬಿ.ಎಂ. ಚಂದ್ರು, ಪ್ರಸನ್ನಕುಮಾರ್, ದಿಡ್ಡಹಳ್ಳಿ ನವೀನ, ಉದ್ದನಹಳ್ಳಿ ಮಹದೇವ, ಹರವೆ ಶ್ರೀಧರ್, ಕಿರಿಜಾಜಿ ಶಿವಶಂಕರ್, ತಟ್ಟೆಕೆರೆ ಶ್ರೀನಿವಾಸ್, ಅಗ್ರಹಾರ ನಂಜುಂಡೇಗೌಡ ಇದ್ದರು.