ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಹೆದ್ದಾರಿ ಮೇಲೆ ಕುಳಿತು ರೈತರ ಪ್ರತಿಭಟನೆ

| Published : May 20 2024, 01:34 AM IST

ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಹೆದ್ದಾರಿ ಮೇಲೆ ಕುಳಿತು ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ 7 ಗಂಟೆಕಾಲ ನಿರಂತರ ವಿದ್ಯುತ್ ಪೂರೈಸಲು ಆಗ್ರಹಿಸಿ ತೇರದಾಳ ಮತ್ತು ಸುತ್ತಲಿನ ಗ್ರಾಮಗಳ ರೈತರು ಜಮಖಂಡಿ-ಕಾಗವಾಡ ರಸ್ತೆ ಮೇಲೆ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಿತ್ಯ 7 ಗಂಟೆಕಾಲ ನಿರಂತರ ವಿದ್ಯುತ್ ಪೂರೈಸಲು ಆಗ್ರಹಿಸಿ ತೇರದಾಳ ಮತ್ತು ಸುತ್ತಲಿನ ಗ್ರಾಮಗಳ ರೈತರು ಜಮಖಂಡಿ-ಕಾಗವಾಡ ರಸ್ತೆ ಮೇಲೆ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.

ನೆರೆಯ ಬೆಳಗಾವಿ ಜಿಲ್ಲೆಯ ತಾಲೂಕಿನ ರೈತರಿಗೆ ನಿರಂತರ ೭ ಗಂಟೆ ವಿದ್ಯುತ್ ಪೂರೈಸುತ್ತಿದ್ದರೆ, ನಮ್ಮ ಪ್ರದೇಶದಲ್ಲಿ ದಿನ ಬಿಟ್ಟು ದಿನ ೪ ಗಂಟೆ ಮಾತ್ರ ವಿದ್ಯುತ್ ಪೂರೈಸಲಾತ್ತಿದೆ. ನಮಗೇಕೆ ಅನ್ಯಾಯ ಎಂದು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.

ಸ್ಥಳಕ್ಕಾಗಮಿಸಿದ ವಿಶೇಷ ತಹಸೀಲ್ದಾರ್‌ ವಿಜಯಕುಮಾರ ಕಡಕೋಳ, ಪಿಎಸ್‌ಐ ಅಪ್ಪು ಐಗಳಿ, ಹೆಸ್ಕಾಂ ಶಾಖಾಧಿಕಾರಿ ಬಿರಾದಾರ, ಕೃಷ್ಣಾ ನದಿಯಲ್ಲಿ ನೀರಿನಮಟ್ಟ ಕುಸಿದಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕೆಲ ದಿನಗಳಲ್ಲಿ ಎಲ್ಲ ಸರಿ ಹೋಗಲಿದ್ದು, ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ನದಿ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಜನತೆ ಕುಡಿಯಲು ಬಳಸುತ್ತಿಲ್ಲ. ರೈತರು ಬೆಳೆದಿರುವ ಬೆಳೆಗಳ ದುಃಸ್ಥಿತಿ ನೀವೇ ಕಣ್ಣಾರೆ ನೋಡಿ. ನಮಗೆ ಬೆಳೆಗಳ ಸ್ಥಿತಿ ನೋಡಲಾಗುತ್ತಿಲ್ಲ. ಸಣ್ಣಪುಟ್ಟ ರೈತರು ತರಕಾರಿ ಬೆಳೆಯಲೂ ಸಾಧ್ಯವಾಗದೆ ತತ್ತರಿಸಿದ್ದಾರೆ. ಸಕಾಲದಲ್ಲಿ ಮಳೆ ಆಗಿದ್ದರೆ ನಾವು ಹತಾಶರಾಗುತ್ತಿರಲಿಲ್ಲ. ನಮ್ಮ ಬೆಳೆಗಳ ರಕ್ಷಣೆಗೆ ಕನಿಷ್ಠ ನಿತ್ಯ ೬ ಗಂಟೆ ಕಾಲ ವಿದ್ಯುತ್ ನೀಡಬೇಕು, ಇಲ್ಲವಾದಲ್ಲಿ ನಿಮ್ಮ ನಿವಾಸದೆದುರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಮದಡ್ಡಿ ಯುವ ರೈತ ಮಹಾವೀರ ಭಿಲವಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಮೇಲಧಿಕಾರಿಗಳೊಡನೆ ಚರ್ಚಿಸಿ ಎರಡು ದಿನಗಳ ಬಳಿಕ ವಿದ್ಯುತ್ ಪೂರೈಕೆಯ ಕಾಲಮಿತಿ ಹೆಚ್ಚಿಸಲಾಗುವುದೆಂದು ಭರವಸೆ ನೀಡಿದ ಅಧಿಕಾರಿಗಳ ಮಾತಿಗೆ ಸುತರಾಂ ಒಪ್ಪದ ರೈತರು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಶನಿವಾರ 2 ಗಂಟೆ, ಭಾನುವಾರ 4 ಗಂಟೆ ವಿದ್ಯುತ್ ನೀಡಬೇಕು. ಸೋಮವಾರ ನಮ್ಮ ಬೇಡಿಕೆಯಂತೆ ೬ ಗಂಟೆ ಕಾಲ ವಿದ್ಯುತ್ ಪೂರೈಸದಿದ್ದರೆ ತೇರದಾಳ ಬಂದ್ ಗೆ ಕರೆ ನೀಡಲಾಗುವುದೆಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಡಿ.ಆರ್. ಪಾಟೀಲ, ಸುರೇಶ ಅಕ್ಕಿವಾಟ, ಮಹಾವೀರ ಕೊಕಟನೂರ, ಭುಜಬಲಿ ಕೆಂಗಾಲಿ, ವರ್ಧಮಾನ ಕಡಹಟ್ಟಿ, ಪ್ರಭು ಹಿಪ್ಪರಗಿ, ಜಿನ್ನಪ್ಪ ಸವದತ್ತಿ, ಭುಜಬಲಿ ವೆಂಕಟಾಪುರ, ನೇಮಣ್ಣ ಸಾವಂತನವರ, ಅಲ್ಲಪ್ಪ ವದನಮಟ್ಟಿ, ಜಿನ್ನಪ್ಪ ಹೊಸೂರ, ಸಿದ್ದು ಅಮ್ಮಣಗಿ, ಶಂಕರ ಹುನ್ನೂರ, ಶೀತಲ ಬೋಳಗೊಂಡ, ಶ್ರೀಕಾಂತ ಗೋಳನ್ನವರ, ಶಂಕರ ಕುಂಬಾರ, ಸಚಿನ್ ಕೊಡತೆ, ಶೀತಲ ಆದೆನ್ನವರ, ಗೂಳಪ್ಪ ನಂದಗಾಂವ ಸೇರಿದಂತೆ ಮುಖಂಡರು, ರೈತರು, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ಇತರರು ಇದ್ದರು.