ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿಶ್ವೇಶ್ವರಯ್ಯ ವೃತ್ತದ ಬಳಿ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ನಡೆಸಿದರು.

ಮದ್ದೂರು-ಮಳವಳ್ಳಿ ವೃತ್ತದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಮುಖಂಡ ಸೋ.ಸಿ.ಪ್ರಕಾಶ್, ಕಾವೇರಿ ನಮ್ಮ ಹಕ್ಕು. ಪ್ರತಿ ವರ್ಷ ಕಾವೇರಿ ನೀರಿಗಾಗಿ ರೈತರು ಬೀದಿಗೆ ಇಳಿದರೂ ಸರ್ಕಾರ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸದೆ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿಯೂ ತಮಿಳುನಾಡು ಖ್ಯಾತೆ ತೆಗೆಯುತ್ತಿದೆ. ಮಂಡಳಿಯ ಆ ರಾಜ್ಯದ ಕೈಗೊಂಬೆಯಾಗಿ ವರ್ತಿಸದೇ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು. ರೈತರ ಸಂಕಷ್ಟವನ್ನು ಅರಿತು ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಬೆಳೆ ಬೆಳೆಯ ಬೇಡಿ ನೀರಿನ ಅಭಾವವಿದೆ ಎಂದು ಹೇಳಿದ್ದರು. ಆದರೆ, ಈಗ ಏಕಾಏಕಿ ತಮಿಳುನಾಡಿಗೆ ನೀರು ಬಿಟ್ಟು ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.


ರೈತ ಸಂಘದ ತಾಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಕಾವೇರಿ ನೀರು ನಮ್ಮ ಹಕ್ಕು. ಹಾರಂಗಿ ಅಣೆಕಟ್ಟು ಹೊರತುಪಡಿಸಿ ಉಳಿದೆಡೆ ಅಣೆಕಟ್ಟೆಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಭಾಗದ ಫಸಲು ಒಣಗಿ ಹೋಗಿ, ಕೆರೆ- ಕಟ್ಟೆಗಳು ಬತ್ತಿ ಹೋಗಿವೆ. ಜೀವಸಂಕುಲಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುವ ಆತಂಕ ಇದೆ. ಈ ಸಮಯದಲ್ಲಿ ಕಾವೇರಿ ನೀರಾವರಿ ಸಮಿತಿ ಹಾಗೂ ಮಂಡಳಿ ತಮಿಳುನಾಡಿಗೆ ನೀರು ಹರಿಸಲು ಹೇಳಿರುವುದು ವಿಷಾದನೀಯ ಎಂದು ಕಿಡಿಕಾರಿದರು.

ತಾಲೂಕು ಉಪಾಧ್ಯಕ್ಷ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ ಮಾತನಾಡಿ, ರಾಜ್ಯ ಸರ್ಕಾರ ಈ ಶಿಫಾರಸ್ಸಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ನಮಗೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದ್ದು, ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಪುಟ್ಟಸ್ವಾಮಿ, ಸಮತ ಸೈನಿಕ ದಳ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಮಲ್ಲೇಶ, ಬಿಳೀಗೌಡ, ಅಂದಾನಿ, ರಾಮಣ್ಣ, ಶಿವಣ್ಣ, ರಾಮಣ್ಣ, ಚೌಡೇಗೌಡ, ತಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.