ಸಾರಾಂಶ
ಶಿರಸಿ: ತಾಲೂಕಿನ ಅಂಡಗಿಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಸಹಕಾರಿ ಸಂಘ ಹಾಗೂ ಬ್ಯಾಂಕುಗಳಲ್ಲಿ ಸಾಲ ಪಡೆದು ಬೆಳೆದ ಬೆಳೆಗಳೆಲ್ಲವೂ ಒಣಗಿವೆ. ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಾಲೂಕಿನ ಅಂಡಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ದಾನಕೊಪ್ಪ- ಬನವಾಸಿ ರಸ್ತೆತಡೆದು ಪ್ರತಿಭಟನೆ ನಡೆಸಿದ ರೈತರು, ಹೆಸ್ಕಾಂ, ಕಂದಾಯ, ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿ, ರೈತರ ವಿಷಯದಲ್ಲಿ ಅಧಿಕಾರಿಗಳು ಮೊಂಡುತನ ತೋರಿಸುತ್ತಿದ್ದು, ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರಿಗಾಗುತ್ತಿರುವ ಸಮಸ್ಯೆ ಕುರಿತು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರನ್ನು ಒಡೆದಾಳುವ ನೀತಿ ಅನುಸರಿಸುತ್ತಿರುವ ಅಧಿಕಾರಿಗಳಿಗೆ ನಾಚಿಗೆಯಾಗಬೇಕು. ಉತ್ತರಕನ್ನಡ ಜಿಲ್ಲೆಯ ರೈತರು ಶಾಂತಿಪ್ರಿಯರು ಎಂದು ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ರೈತರ ತಾಳ್ಮೆ ಪರೀಕ್ಷೆ ಮಾಡಿದರೆ ಮುಂದೆ ನಡೆಯುವ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕಂದಾಯ ನೀರಿಕ್ಷಕರು, ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿದಾಗ ಆಕ್ರೋಶಗೊಂಡ ರೈತರು, ತಹಸೀಲ್ದಾರ್ ಸ್ಥಳಕ್ಕಾಗಿಮಿಸಿ, ರೈತರ ಸಮಸ್ಯೆ ಆಲಿಸಿ, ಸ್ಥಳದಲ್ಲಿಯೇ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು.ಸುಮಾರು ೨ ತಾಸುಗಳ ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಎಚ್.ಬಿ. ಪಿರ್ಜಾದೆ ಪ್ರತಿಕ್ರಿಯಿಸಿ, ರೈತರ ಸಂಕಷ್ಟ ಅರ್ಥವಾಗುತ್ತದೆ. ಏಪ್ರಿಲ್ ೧೦ರ ವರೆಗೆ ಅವಕಾಶ ನೀಡಿ. ಬದಲಿ ವ್ಯವಸ್ಥೆ ಕಲ್ಪಿಸಿ, ರೈತರ ಸಮಸ್ಯೆಗೆ ಪರಿಹಾರ ದೊರಕಿಸಲು ಹೆಸ್ಕಾಂ ಮೇಲಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಪಾಟೀಲ ರೈತರ ಸಮಸ್ಯೆ ಆಲಿಸಿ, ಪ್ರತಿಕ್ರಿಯಿಸಿ, ಬನವಾಸಿ ಸುತ್ತಮುತ್ತ ೫ ಫೀಡರ್ ಇದೆ. ಶಿರಸಿಯಿಂದ ೨೦ ಕಿಲೋ ಮೀಟರ್ ಬಂದು ಇಲ್ಲಿ ಒತ್ತಡ ಬೀಳುವುದರಿಂದ ವಿದ್ಯುತ್ ವೋಲ್ಟೇಜ್‌ನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಎಸಳೆಯ ಸಮೀಪ ಹೊಸ ಫೀಡರ್ ಆರಂಭಿಸಬೇಕು ಎಂಬ ತೀರ್ಮಾನ ಮಾಡಿದ್ದೇವೆ. ಅದಕ್ಕೆ ೫.೫ ಕಿಮೀ ಲಿಂಕ್ ಲೈನ್ ಮಾಡಬೇಕು. ಅದಕ್ಕೆ ಕಾಲಾವಕಾಶ ಅಗತ್ಯವಿದೆ. ರೈತರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಕೆಲಸ ಮಾಡುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ, ಅಂಡಗಿ ಗ್ರಾಪಂ ಅಧ್ಯಕ್ಷ ಸುದರ್ಶನ ನಾಯ್ಕ, ಅಕ್ಷಯ ಜಕಲಣ್ಣನವರ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ
ಅಧಿಕಾರಿಗಳು ಕೇಳಿದ ಕಾಲಾವಕಾಶಕ್ಕೆ ರೈತರೆಲ್ಲರೂ ಒಪ್ಪಿಗೆ ಸೂಚಿಸಿದ್ದೇವೆ. ಏ. ೧೦ರ ಒಳಗಡೆ ಅಂಡಗಿ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇತ್ಯರ್ಥಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆ ಸಮಯದ ಒಳಗಡೆ ರೈತರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆಯನ್ನು ರೈತರೆಲ್ಲರೂ ಒಗ್ಗಟ್ಟಾಗಿ ಬಹಿಷ್ಕಾರ ಮಾಡುತ್ತೇವೆ. ಯಾವುದೇ ರಾಜಿ ಸಂಧಾನಕ್ಕೆ ಬಗ್ಗುವುದಿಲ್ಲ ಎಂದು ರೈತ ಸಮುದಾಯ ಎಚ್ಚರಿಕೆ ನೀಡಿದೆ.;Resize=(128,128))
;Resize=(128,128))
;Resize=(128,128))
;Resize=(128,128))