ಬಲ್ದೋಟಾ ಅಧೀನದಲ್ಲಿರುವ ಬಸಾಪೂರ ಕೆರೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕೊಪ್ಪಳ: ಬಲ್ದೋಟಾ ಅಧೀನದಲ್ಲಿರುವ ಬಸಾಪೂರ ಕೆರೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದ ಹೊರವಲಯದ ಹೆದ್ದಾರಿಯಲ್ಲಿರುವ ಬಲ್ಡೋಟಾ ಕಾರ್ಖಾನೆ ಮುಂಭಾಗದಲ್ಲಿ ರೈತರಿಂದ ಜಾನುವಾರು ಹಾಗೂ ಕುರಿಗಳೊಂದಿಗೆ ಮುತ್ತಿಗೆ ಯತ್ನ ನಡೆಯಿತು.

ನಗರದ ಪ್ರವಾಸಿ ಮಂದಿರದಿಂದ ಬೈಕ್ ಗಳ ಮುಖಾಂತರ ಹೋರಾಟಗಾರರು ನಗರದ ಹೆದ್ದಾರಿಯಲ್ಲಿರುವ ಬಲ್ಡೋಟಾ ಮುಂಭಾಗದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದರು. ನೂರಾರು ಕುರಿಗಳು ಹಾಗೂ ಜಾನುವಾರುಗಳೊಂದಿಗೆ ರೈತರು ಆಗಮಿಸಿದ್ದರು. ಬಲ್ಡೋಟಾ ಅಧೀನದಲ್ಲಿರುವ ಕೆರೆಯನ್ನು ಸಾರ್ವಜನಿಕರ ಬಳಕೆಗೆ ನೀಡಬೇಕು ಎಂದು ಒತ್ತಾಯಿಸಿ ಕಾರ್ಖಾನೆ ಒಳಗಡೆ ಪ್ರವೇಶಕ್ಕೆ ಮುಂದಾದರು. ಮೆಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ ಪುಟ್ಟಣಯ್ಯ ಹಾಗೂ ರೈತ ಸಂಘದ ಗೌರವಾಧ್ಯಕ್ಷ ಚಾಮರಾಜ ಮಾಲಿಪಾಟೀಲ್ ಹೋರಾಟದ ನೇತೃತ್ವ ವಹಿಸಿದ್ದರು.

ಪ್ರವೇಶಕ್ಕೆ ಯತ್ನ

ಬಲ್ಡೋಟಾ ಕಾರ್ಖಾನೆಯ ಮುಂಭಾಗದಿಂದ ಕೆರೆಯೊಳಗೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅಡ್ಡಗಟ್ಟಿ ತಡೆದರು. ಇದರಿಂದ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಖಾನೆಯೊಳಗೆ ಜಾನುವಾರುಗಳೊಂದಿಗೆ ನುಗ್ಗಲು ಪ್ರಯತ್ನಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಲ್ಡೋಟಾ ಸುಪರ್ದಿಯಲ್ಲಿರುವ ಬಸಾಪೂರ ಕೆರೆಯೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಹೋರಾಟಗಾರರನ್ನು ಪೊಲೀಸರು ತಡೆದರು. ಕೊನೆಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸ್ಥಳಕ್ಕಾಗಮಿಸಿ, ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು.ಪೊಲೀಸರಿಂದ ನೋಟಿಸ್

ರೈತರು ಜಾನುವಾರುಗಳೊಂದಿಗೆ ಬಲ್ಡೋಟಾ ಕಾರ್ಖಾನೆಗೆ ಮುತ್ತಿಗೆ ಹಾಕಲು ಪೊಲೀಸ್ ಇಲಾಖೆ ಅನುಮತಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಮುತ್ತಿಗೆ ಹಾಕುವ ಕ್ರಮ ಸರಿಯಲ್ಲ ಎಂದು ನಗರ ಠಾಣೆಯ ಪೊಲೀಸರು ಹೋರಾಟಕ್ಕೂ ಮುನ್ನವೇ ಹೋರಾಟಗಾರರಿಗೆ ನೋಟಿಸ್ ಸಹ ಜಾರಿ ಮಾಡಿದ್ದರು. ಇದು, ಕೂಡ ವಿವಾದಕ್ಕೆ ಕಾರಣಕ್ಕಾಗಿ ಪೊಲೀಸ್ ಇಲಾಖೆಯ ನೋಟಿಸ್ ಗೆ ಜಗ್ಗದೇ ಹೋರಾಟಗಾರರಿಂದ ಕಾರ್ಖಾನೆಗೆ ಮುತ್ತಿಗೆ ಹಾಕುವ ಯತ್ನವು ನಡೆಯಿತು.ತಪ್ಪು ವರದಿ ನೀಡಿದ ಅಧಿಕಾರಿ: ಶಾಸಕ ಪುಟ್ಟಣ್ಣಯ್ಯ ಆಕ್ರೋಶ

ಈ ವೇಳೆ ಮಾತನಾಡಿದ ಶಾಸಕ ದರ್ಶನ ಪುಟ್ಟಣಯ್ಯ, ಬಸಾಪೂರ ಕೆರೆ ಜನರಿಗೆ ಉಪಯೋಗವಿಲ್ಲ ಎಂದು 2007ರಲ್ಲಿ ಸರಕಾರಕ್ಕೆ ತಪ್ಪು ವರದಿ ನೀಡಿದ್ದ ಅಂದಿನ ಸಹಾಯಕ ಆಯುಕ್ತರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಅಂದು ಆಗಿನ ಎಸಿ ತಪ್ಪು ವರದಿ ನೀಡದಿದ್ದರೆ ಬಲ್ಡೋಟಾ ಕಾರ್ಖಾನೆಗೆ ಬಸಾಪೂರ ಕೆರೆ ಸೇರುತ್ತಿರಲಿಲ್ಲ. ಅಲ್ಲದೆ, ಇಲ್ಲಿಯ ಬಸಾಪೂರ ಕೆರೆ ಸರಕಾರದ್ದು. ಕಂಪನಿಗೆ ನೀಡಿರುವ ಕ್ರಮ ಸರಿಯಲ್ಲ. ಮೇ 6ರಂದು ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಂದೆ ಈ ಕುರಿತು ವಿಚಾರಣೆ ನಡೆಯಲಿದ್ದು, ಈ ವಿಚಾರದಲ್ಲಿ ರೈತರ ಪರವಾಗಿ ಜಿಲ್ಲಾಡಳಿತ ವರದಿಯನ್ನು ಮುಂದಿಡಬೇಕು. ರೈತರಿಗಾಗಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿ ಗಮನಕ್ಕೂ ತರುವ ಕೆಲಸ ನಾನು ಮಾಡುತ್ತೇನೆ ಎಂದು ಶಾಸಕ ದರ್ಶನ ಪುಟ್ಟಣಯ್ಯ ಹೇಳಿದರು.ನ್ಯಾಯಾಲಯದ ಆದೇಶ ಉಲ್ಲಂಘನೆ

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಹೈಕೋರ್ಟ್ ಆದೇಶವನ್ನು ಬಲ್ದೋಟಾ ಕಂಪನಿ ಉಲ್ಲಂಘಿಸಿ, ಬಸಾಪೂರ ಕೆರೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಕ್ರಮ ಸರಿಯಲ್ಲ. ಇನ್ನಾದರೂ ಈ ವಿಚಾರದಲ್ಲಿ ಜಿಲ್ಲಾಡಳಿತ ಸ್ಪಷ್ಟ ಭರವಸೆಯನ್ನು ರೈತರಿಗೆ ನೀಡಬೇಕು. ಕೆರೆಯನ್ನು ರೈತರಿಗೆ ಕೊಡುವವರೆಗೂ ಹೋರಾಟ ಮುಂದುವರಿಯುತ್ತದೆ. ಶಾಂತಿಯುತ ಹೋರಾಟಕ್ಕೆ ನಾವು ಬದ್ಧರಾಗಿದ್ದೇವೆ. ರೈತರಿಗೆ ನೋಟಿಸ್ ನೀಡಿ ರೌಡಿಶೀಟ್ ತೆರೆಯುವ ಬೆದರಿಕೆಗಳನ್ನು ಪೊಲೀಸ್ ಇಲಾಖೆ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.ಒತ್ತುವರಿ ವರದಿ ಸರ್ಕಾರಕ್ಕೆ ಸಲ್ಲಿಕೆ: ಡಿಸಿ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಪ್ರತಿಕ್ರಿಯಿಸಿ, “ಈ ಕೆರೆಗೆ ಸಂಬಂಧಿಸಿದಂತೆ ಹಿಂದಿನಿಂದಲೂ ನ್ಯಾಯಾಲಯದ ಆದೇಶವಿದೆ. ಅಲ್ಲದೆ, ಈ ವಿಚಾರದಲ್ಲಿ ರೈತರು ತಮ್ಮ ಅಹವಾಲು ಸಲ್ಲಿಸಲು ಅವಕಾಶವಿದೆ. ಬಲ್ದೋಟಾ ಕಂಪನಿ ಸುಮಾರು ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಸರಕಾರದಿಂದ ಈ ಮುಂಚೆ ಕೆರೆ ಮಂಜೂರುಗೊಂಡಿದ್ದು, ಮೇ 6ರಂದು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರಿನಲ್ಲಿ ವಿಚಾರಣೆ ನಡೆಯಲಿದೆ. ಇದರಲ್ಲಿ ನಡೆಯುವ ತೀರ್ಮಾನದಂತೆ ಸರಕಾರದ ನಿರ್ದೇಶನ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ " ಎಂದು ಹೇಳಿದರು.

ಈ ವೇಳೆ ರೈತ ಸಂಘದ ಭೀಮಸೇನ ಕಲಕೇರಿ, ಜೆ.ಎಂ. ವೀರಸಂಗಯ್ಯ, ಮುಕ್ಕಣ್ಣ ಮೇಸ್ತಿ, ಯಮನೂರಪ್ಪ ಹಾಲಹಳ್ಳಿ, ಗುಡದಪ್ಪ ಸಂಗಟಿ, ಫಕೀರಪ್ಪ ಬಂಗ್ಲಿ, ಗುಡದಪ್ಪ ಗಿಣಿಗೇರಿ ಸೇರಿದಂತೆ ಇತರರು ಇದ್ದರು.