ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣ ಕಾರ್ಯದಿಂದ ಬಾಧಿತರಾದ ಹೊಸಕೋಟೆಯಿಂದ ಆಂಧ್ರ ಗಡಿಯವರೆಗಿನ ರೈತರು ತಮ್ಮ ಜಮೀನುಗಳ ಸಂರಕ್ಷಣೆ ಮತ್ತು ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ಶಾಂತಿಯುತ ಹೋರಾಟದ ಹಾದಿ ಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಬೇತಮಂಗಲ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣ ಕಾರ್ಯದಿಂದ ಬಾಧಿತರಾದ ಹೊಸಕೋಟೆಯಿಂದ ಆಂಧ್ರ ಗಡಿಯವರೆಗಿನ ರೈತರು ತಮ್ಮ ಜಮೀನುಗಳ ಸಂರಕ್ಷಣೆ ಮತ್ತು ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ಶಾಂತಿಯುತ ಹೋರಾಟದ ಹಾದಿ ಹಿಡಿದಿದ್ದಾರೆ.ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಪ್ರತಿಭಟನಾ ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಅಧಿಕಾರಿಗಳ ಮೂಲಕ ರೈತರು ಶನಿವಾರ ಮನವಿ ಪತ್ರ ಸಲ್ಲಿಸಿದರು.
ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದಾಗಿ ಕೃಷಿ ಭೂಮಿ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ರೈತರು ತಮ್ಮ ಜೀವನೋಪಾಯಕ್ಕಾಗಿ ನ್ಯಾಯಯುತ ಹೋರಾಟ ನಡೆಸುತ್ತಿದ್ದು, ತಕ್ಷಣವೇ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಸರ್ವೀಸ್ ರಸ್ತೆ ನಿರ್ಮಾಣ:
ಎಕ್ಸ್‌ಪ್ರೆಸ್‌ವೇ ಕಾಮಗಾರಿಯಿಂದಾಗಿ ರೈತರ ಕೃಷಿ ಭೂಮಿಗಳಿಗೆ ಇದ್ದ ಸಂಪರ್ಕ ಕಡಿತಗೊಂಡಿದೆ. ರೈತರು ತಮ್ಮ ಜಮೀನುಗಳನ್ನು ಪ್ರವೇಶಿಸಲು ಅನುಕೂಲವಾಗುವಂತೆ ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.ವೈಜ್ಞಾನಿಕ ಒಳಚರಂಡಿ ಮತ್ತು ನೀರು ಹರಿಯುವ ಮಾರ್ಗಗಳನ್ನು ವ್ಯವಸ್ಥಿತವಾಗಿ ನಿರ್ಮಿಸಬೇಕು. ಇಲ್ಲದಿದ್ದರೆ ಮಳೆನೀರು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶವಾಗುವ ಭೀತಿ ಎದುರಾಗಿದೆ ಎಂದು ನ್ಯಾಯಾಧೀಶರಾದ ಸುಬ್ರಮಣಿ ಆತಂಕ ವ್ಯಕ್ತಪಡಿಸಿದರು.
ಹೊಸಕೋಟೆಯಿಂದ ಆಂಧ್ರ ಗಡಿವರೆಗೂ ಭೂಮಿ ಕಳೆದುಕೊಂಡಿರುವ ಹಾಗೂ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಬಾಧಿತರಾಗಿರುವ ಎಲ್ಲಾ ರೈತರಿಗೆ ಸೂಕ್ತ ಹಾಗೂ ನ್ಯಾಯಯುತವಾದ ಪರಿಹಾರವನ್ನು ತಕ್ಷಣವೇ ಘೋಷಿಸಿ ವಿತರಿಸಬೇಕು. ಇಲ್ಲದಿದ್ದರೆ ಉಗ್ರ ರೂಪದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಪಿಎಂಸಿ ನಿರ್ದೇಶಕರಾದ ಯುವರಾಣಿ ವೆಂಕಟಾಚಲಪತಿ ಎಚ್ಚರಿಕೆ ನೀಡಿದರು.ರೈತರ ಈ ನ್ಯಾಯಸಮ್ಮತ ಬೇಡಿಕೆಗಳು ಈಡೇರುವವರೆಗೂ, ಸುಂದರಪಾಳ್ಯ ಟೋಲ್ ಪ್ಲಾಜಾ ಬಳಿ ಪ್ರತಿ ತಿಂಗಳ ಎರಡನೇ ಶನಿವಾರ ನಿರಂತರವಾಗಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿರುವುದಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಪ್ಪೋಜಿ ಗೌಡ ಎಚ್ಚರಿಸಿದ್ದಾರೆ.
ರೈತರ ಸಂಕಷ್ಟಕ್ಕೆ ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರವು ಕೂಡಲೇ ಸ್ಪಂದಿಸಿ, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಬಾಧಿತ ರೈತರ ಪರವಾಗಿ ಚಂದ್ರಶೇಖರ್.ಎಸ್, ವೆಂಕಟಾಚಲಪತಿ ಸಿ., ನಾಗೇಂದ್ರ ಕುಮಾರ್ (ಬುಜ್ಜಿ), ಮುರಳಿ, ವೆಂಕಟರಾಮ್ ಮತ್ತು ಈ ಭಾಗದ ರೈತ ಬಾಂಧವರು ಜಂಟಿಯಾಗಿ ವಿನಂತಿಸಿದ್ದಾರೆ.
-೧೩ಬಿಟಿಎಂ-೩ಬೇತಮಂಗಲ ಸಮೀಪದ ಸುಂದರಪಾಳ್ಯ ಬಳಿಯ ಚೆನೈ ಎಕ್ಸ್‌ಪ್ರೆಸ್ ವೇ ಟೋಲ್ ಬಳಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.