ಸಾರಾಂಶ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಬೃಹತ್ ಕೈಗಾರಿಕೆಗಳಿಗೆ ಜಲಾಶಯದ ನೀರು ಹರಿಸುತ್ತಿರುವ ಸರ್ಕಾರ, ರೈತರ ಬೆಳೆಗಳಿಗೆ ಕೊನೆಯ ಹಂತದಲ್ಲಿ ನೀರು ಬಿಡಲೊಪ್ಪದಿರುವುದರಿಂದ 20 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆ ಕೈಗೆ ಬಾರದೆ ಇಲ್ಲಿನ ಸಾವಿರಾರು ರೈತರನ್ನು ಚಿಂತೆಗೀಡು ಮಾಡಿದೆ.
ನಾರಾಯಣಪುರ ಎಡದಂಡೆ ಕಾಲುವೆಯ, ಶಹಾಪುರ, ಮುಡಬೂಳ ಹಾಗೂ ಜೇರ್ವಗಿ ಶಾಖಾ ಕಾಲುವೆಗಳಿಗೆ ಫೆಬ್ರವರಿ ಅಂತ್ಯದವರೆಗೆ ಜಲಾಶಯದ ನೀರು ಬಿಡಬೇಕೆಂದು ಆಗ್ರಹಿಸಿ, ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನ ಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ನೆಲ್) ಕಚೇರಿಗೆ ಬೀಗಮುದ್ರೆ ಹಾಕಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಶನಿವಾರ 6ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ನೂರಾರು ದನ-ಕರುಗಳನ್ನೂ ಸಹ ಕಚೇರಿ ಆವರಣದಲ್ಲಿ ಕಟ್ಟಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಹಾಗೂ ಎಸ್ಪಿ ಜಿ. ಸಂಗೀತಾ ಸೇರಿ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರ ಮನವೊಲೈಸುವ ಪ್ರಯತ್ನ ಮಾಡಿದ್ದರೂ, ಅದು ಫಲಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜುಲೈ-ಆಗಸ್ಟ್ ಅಂತ್ಯದಲ್ಲಿ ಈ ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಣಸಿನಕಾಯಿ ಬೆಳೆ ಹೂಬಿಟ್ಟು ನಿಂತಿದೆ. ಫೆಬ್ರವರಿ ಅಂತ್ಯದವರೆಗೆ ನೀರು ಹರಿಸಿದರೆ ಒಳ್ಳೆಯ ಫಸಲು ಬಂದು ಸಾವಿರಾರು ರೈತರು ಬದುಕು ಹಸನಾಗಬಲ್ಲದು ಎಂಬುದು ರೈತರ ಹಕ್ಕೊತ್ತಾಯ.
ಆದರೆ, ನೀರಾವರಿ ಸಲಹಾ ಸಮಿತಿ ನಿರ್ಧಾರದಂತೆ ಡಿ.14ವರೆಗೆ ಹಾಗೂ ನಂತರದಲ್ಲಿ ಹೆಚ್ಚುವರಿಯಾಗಿ ಡಿ.16 ವರೆಗೆ ನೀರು ಹರಿಸಲಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರು ಕೊರತೆಯಾಗದಂತೆ ಈಗ ಬಿಡಲು ಆಗುವುದಿಲ್ಲ ಎನ್ನುವುದು ಅಧಿಕಾರಿಗಳ ನಿರ್ಧಾರ.ಈ ಹಿನ್ನೆಲೆಯಲ್ಲಿ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆ ಕಾವೇರಿದೆ. ಶನಿವಾರ ಭೀಮರಾಯನ ಗುಡಿ ಮಾರ್ಗದ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ -150 ಅನ್ನು ಸುಮಾರು ಒಂದೂವರೆ ಗಂಟೆ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿಯಲ್ಲೇ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಸ್ಮರಣಾರ್ಥ ರೈತರ ದಿನಾಚರಣೆ ಹಾಗೂ ಮುಖಂಡ ಕೆ. ಎಸ್. ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನ ಆಚರಿಸಿದ್ದಾರೆ. ಜನಜೀವನ ಹಾಗೂ ಸಂಚಾರಕ್ಕೆ ಇದು ಬಿಸಿ ಮುಟ್ಟಿಸಿತ್ತು.
ನಾರಾಯಣಪುರ ಎಡದಂಡೆ ಕಾಲುವೆ ಜೇವರ್ಗಿ ಶಾಖಾ ಕಾಲುವೆ (ಜೆಬಿಸಿ), ಶಹಾಪುರ ಶಾಖಾ ಕಾಲುವೆ (ಎಸ್‌ಬಿಸಿ) ಹಾಗೂ ಮುಡಬೂಳ ಶಾಖಾ ಕಾಲುವೆ (ಎಂಬಿಸಿ) ಭಾಗದಲ್ಲಿ ಶೇ.40 ರಷ್ಟು ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಬೀಜ, ಬಿತ್ತನೆ, ರಸಗೊಬ್ಬರ ಮುಂತಾದವು ಸೇರಿ ಎಕರೆಗೆ ಒಂದೂವರೆ ಲಕ್ಷ ರು. ಖರ್ಚಾಗಿದೆ. ಸದ್ಯ ಹೂ ಬಿಟ್ಟ ಬೆಳೆಗೆ ನೀರು ಬಿಟ್ಟರೆ ಮಾರ್ಚಿನಲ್ಲಿ ಬಂಪರ್ ಬೆಳೆ ಬರುತ್ತದೆ. ಕಳೆದ ಬಾರಿ 82 ಸಾವಿರ ರು. ಪ್ರತಿ ಕ್ವಿಂಟಾಲ್‌ವರೆಗೂ ಮೆಣಸಿನಕಾಯಿ ಮಾರಾಟವಾಗಿತ್ತು. ಈ ಬಾರಿ ತೆಲಂಗಾಣದಲ್ಲಿ ಸೈಕ್ಲೋನ್ ಹಾಗೂ ಬಳ್ಳಾರಿ ಭಾಗದಲ್ಲಿ ನೀರಿನ ಕೊರತೆಯಿಂದ ಮೆಣಸಿನಕಾಯಿ ಬೆಳೆ ಉತ್ಪನ್ನ ಕಡಮೆಯಾಗಲಿದ್ದು, ಇಲ್ಲಿನ ಬೆಳೆಗಳಿಗೆ ಭಾರಿ ಬೇಡಿಕೆ ಬರುತ್ತದೆ ಎನ್ನುವ ನಿರೀಕ್ಷೆ ಈ ರೈತರದ್ದು.ಹೋರಾಟದ ಕಿಚ್ಚು ಹೆಚ್ಚುವ ಮುನ್ನವೇ ಕಾಲುವೆಗೆ ನೀರು ಬಿಡುವ ಈ ವಿಚಾರದಲ್ಲಿ ಅಧಿಕಾರಿಗಳು ಸೂಕ್ಷ್ಮತೆ ಪ್ರದರ್ಶಿಸಬೇಕಿದೆ. ಮುಂಬರುವ ಬೇಸಿಗೆಯಲ್ಲೂ ನೀರಿನ ಸಮಸ್ಯೆ ತಲೆದೋರದಂತೆ ಜಾಣ್ಮೆ ತೋರಿದರೆ, ಬೆಳೆ ಮತ್ತು ರೈತರ ಬದುಕು ರಕ್ಷಿಸಿದಂತೆ ಎನ್ನುತ್ತಾರೆ ಇಲ್ಲಿನ ಸಾವ್ರಜನಿಕರು.