ಸಾರಾಂಶ
ಕಾರಟಗಿ: ರಾಯಚೂರು ಭಾಗಕ್ಕೆ ಕುಡಿವ ನೀರು ತಲುಪಿಸುವ ಉದ್ದೇಶದಿಂದ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ವಿತರಣಾ ಕಾಲುವೆಗಳ ನೀರಿನ ಪ್ರಮಾಣ ಇಳಿಕೆ ಮಾಡಿದ್ದನ್ನು ವಿರೋಧಿಸಿ ೩೧ನೇ ವಿತರಣಾ ನಾಲೆಯ ವ್ಯಾಪ್ತಿಯ ನೀರು ಬಳಕೆದಾರರ ಸಂಘದ ಸದಸ್ಯರು ಮತ್ತು ನೂರಾರು ರೈತರು ಬುಧವಾರ ಸಂಜೆ ನಮ್ಮ ಬೆಳೆಗಳಿಗೆ ನೀರು ಹರಿಸಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನೀರಾವರಿ ಇಲಾಖೆ ಅಧಿಕಾರಿಗಳು ಮುಖ್ಯ ನಾಲೆಯ ಗೇಜ್ ಇಳಿಕೆ ಮಾಡಿ ೧೭೫ ಕ್ಯೂಸೆಕ್ ನೀರು ಹರಿಸಿದ್ದನ್ನು ವಿರೋಧಿಸಿ ರೈತರೇ ಸ್ವತಃ ತೂಬಿನ ಬಳಿ ತೆರಳಿ ಗೇಜನ್ನು ೨೫೦ ಕ್ಯೂಸೆಕ್ ಹರಿಸುವ ಹಂತಕ್ಕೆ ಏರಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.೩೧ ನೇ ವಿತರಣಾ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಮುಖ್ಯ ನಾಲೆಯ ತೂಬಿನ ಬಳಿ ಧರಣಿ ಕುಳಿತು ನಮ್ಮ ಪಾಲಿನ ನೀರು ನಮಗೆ ಬೀಡಿ ಎಂದು ಪಟ್ಟು ಬಿಗಿ ಹಿಡಿದು ಪ್ರತಿಭಟನೆ ನಡೆಸಿದರು.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಮುನಿರಾಬಾದ್‌ನಿಂದ ಕೊಪ್ಪಳ ಜಿಲ್ಲೆಯ ಗಡಿವರೆಗಿನ ೩೨ನೇ ವಿತರಣಾ ಕಾಲುವೆಗಳ ಗೇಜ್‌ಗಳನ್ನು ಇಳಿಕೆ ಮಾಡಿ ರಾಯಚೂರು ಕಡೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿರುವುದನ್ನು ತಿಳಿದು ಕಾಲುವೆ ಬಳಿ ದೌಡಾಯಿಸಿ ಅಧಿಕಾರಿಗಳ ಕ್ರಮವನ್ನು ರೈತರು ವಿರೋಧಿಸಿದರು.ಈ ವೇಳೆ ರೈತರಿಗೆ ನೀರಾವರಿ ಅಧಿಕಾರಿಗಳು ಮಾಡಿಕೊಂಡ ಮನವಿ ವಿಫಲವಾಯಿತು. ಸಮರ್ಪಕವಾಗಿ ಎಲ್ಲರಿಗೂ ನೀರು ವಿತರಿಸಿ. ವಿತರಣೆಗೆ ಮೇಲ್ಭಾಗದಲ್ಲಿ ನೀರುಗಳ್ಳತನ ನಡೆಯುತ್ತಿದೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು ನಮ್ಮ ಪಾಲಿನ ನೀರು ಕಡಿತಗೊಳಿಸಿದರೆ ಹೇಗೆ ಎಂದು ಪ್ರತಿಭಟನಾನಿರತರು ಪ್ರಶ್ನೆ ಮಾಡಿದರು.
ಸ್ಥಳಕ್ಕೆ ಕಾರಟಗಿ ತಹಸೀಲ್ದಾರ ಎಂ.ಕುಮಾರಸ್ವಾಮಿ, ಪಿ.ಐ. ಸುಧೀರ್ ಕುಮಾರ ಎಂ.ಬೆಂಕಿ ತೆರಳಿ ರೈತರು ಸಹಕರಿಸಬೇಕು. ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದೇವೆ. ಪ್ರತಿಭಟನೆ ನಿಲ್ಲಿಸಿ ಸಹಕರಿಸಿ ಎಂದು ಕೇಳಿದರೂ ಪಟ್ಟು ಸಡಿಲಿಸದ ರೈತರು ಗೇಜ್ ಇಳಿಸುವ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದರು.೧ ನೇ ವಿತರಣಾ ಕಾಲುವೆಗೆ ೧೦ಉಪ ಕಾಲುವೆಗಳಿದ್ದು, ಈ ಅವಧಿಯಲ್ಲಿ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ೮ ದಿನ ಸಮರ್ಪಕವಾಗಿ ೨೧೦ ಕ್ಯೂಸೆಕ್ ನೀರು ಹರಿಸಿದರೆ ರೈತರ ಬೆಳೆ ಕೈ ಸೇರುತ್ತದೆ. ಆದರೆ ಮೇಲ್ಭಾಗದಲ್ಲಿ ನೀರಗ್ಗಳ್ಳತನ ದಿನನಿತ್ಯ ನಡೆಯುತ್ತಿದೆ ಪೊಲೀಸ್ ಭದ್ರತೆಯೊಂದಿಗೆನೀರಾವರಿ ಇಲಾಖೆ ಅಧಿಕಾರಿಗಳು ಆಕ್ರಮ ನೀರುಗಳ್ಳತನಕ್ಕೆ ಕಡಿವಾಣ ಹಾಕಿ ರಾಯಚೂರಿಗೆ ಕುಡಿವ ನೀರು ಹರಿಸಿ ಎಂದು ರೈತರು ವಾದಿಸಿದರು.
ತಹಸೀಲ್ದಾರ ಎಂ.ಕುಮಾರಸ್ವಾಮಿ ರೈತರನ್ನು ಸಮಾಧಾನ ಪಡಿಸಿ ಸರ್ಕಾರದ ಆದೇಶದ ಹಿನ್ನೆಲೆ ೧೭೫ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ೩೧ ನೇ ವಿತರಣಾ ಕಾಲುವೆಗೆ ತೊಂದರೆಯಾಗದಂತೆ ನೀರು ಹರಿಬಿಡಲಾಗುವುದು ಎಂದು ಭರವಸೆ ನೀಡಿದರು. ಆದರೆ, ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಮೊದಲು ನೀರಾವರಿ, ಪೊಲೀಸ್, ಕಂದಾಯ ಇಲಾಖೆ ಕೂಡಿಕೊಂಡು ಮುಖ್ಯಕಾಲುವೆಯ ಮೇಲ್ಭಾಗದಲ್ಲಿ ಹಗಲಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ನೀರುಗಳ್ಳತನ ತಡೆಯಿರಿ. ನಮ್ಮ ಪಾಲಿನ ನೀರನ್ನು ತಡೆದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ರೈತರ ಪ್ರತಿಭಟನೆಯ ಮಧ್ಯೆಯೂ ಕಂದಾಯ, ನೀರಾವರಿ ಅಧಿಕಾರಿಗಳು, ಪೊಲೀಸರ ಭದ್ರತೆಯಲ್ಲಿ ಜಾಕ್‌ವೆಲ್‌ನ ಥ್ರಡ್ ಇಳಿಸಿ ೧೭೫ ಕ್ಯೂಸೆಕ್ ನೀರು ಹರಿಸಿದರು. ರೊಚ್ಚಿಗೆದ್ದ ರೈತರು ಪುನಃ ಗೇಜ್ ಏರಿಸಿ ಧರಣಿ ಕುಳಿತರು.
ಮುಖ್ಯ ತೂಬಿನ ಬಳಿ ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗಳು, ನಿಷೇಧಾಜ್ಞೆ ಜಾರಿಯಲ್ಲಿದೆ ಯಾರೂ ಸ್ಥಳದಲ್ಲಿ ಇರಬಾರದು ಲಾಠಿ ಚಾರ್ಜ್ ಮಾಡುವುದಾಗಿ ಬೆದರಿಕೆ ಹಾಕಿದರೂ ಕೂಡ ರೈತರು ಜಗ್ಗದೆ ಅಧಿಕಾರಿಗಳೊಂದಿಗೆ ವಾದಿಸುತ್ತಾ ನೀರು ಬಿಡುವಂತೆ ಪಟ್ಟು ಹಿಡಿದು ಸ್ಥಳದಲ್ಲೆ ಠಿಕಾಣಿ ಹೂಡಿದರು.ಮುಖ್ಯ ತೂಬಿನ ಬಳಿ ರಾಯಚೂರ, ಕೊಪ್ಪಳ ಭಾಗದ ಕಂದಾಯ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಬೀಡು ಬಿಟ್ಟಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ, ಬಸವರಾಜಪ್ಪ ಕುಲಕರ್ಣಿ, ಅಂಬಣ್ಣ ಬೂದಗುಂಪ, ಕಿಂದಿಕ್ಯಾಂಪ್ ರಾಜು, ಮೌನೇಶ ದಢೆಸೂಗುರ, ಧಶರಥ ರೆಡ್ಡಿ ಚನ್ನಳ್ಳಿ ಸೇರಿದಂತೆ ಕಿಂದಿಕ್ಯಾಫ್, ಯರಡೊಣಾ, ದೇವಿಕ್ಯಾಂಪ್, ಬೂದಗುಂಪ, ಹಾಲಸಮುದ್ರ, ಚನ್ನಳ್ಳಿ, ಮಾವಿನಮಡಗು, ಮುಕ್ಕುಂದ ಸೇರಿದಂತೆ ವಿತರಣಾ ನಾಲೆಯ ವಿವಿಧ ಗ್ರಾಮಗಳ ರೈತರು ಇದ್ದರು.