ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಮದುರ್ಗ ತಾಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕ್ರಮ ಖಂಡಿಸಿ ರೈತರು ಧರಣಿ ಮುಂದುವರಿಸಿದ್ದು, ಸೋಮವಾರವೂ ಧರಣಿ ನಡೆಸಿದರು. ಕಾರ್ಖಾನೆಗೆ ಷೇರು ನೀಡಿದ ಷೇರುದಾರರಿಗೆ ನ್ಯಾಯ ಒದಗಿಸಿಕೊಡಬೇಕು. ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಾಕಿ ಬಿಲ್‌ಪಾವತಿ ಮಾಡಬೇಕು. ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಹರಾಜನಲ್ಲಿ ಖರೀದಿಸಿದ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮತ್ತು ರಾಮದುರ್ಗದ ಶಾಸಕ ಅಶೋಕ ಪಟ್ಟಣ ಅವರು ಕಾರ್ಖಾನೆ ಮುಂಭಾಗದಲ್ಲಿ ಇಲ್ಲವೇ ರಾಮದುರ್ಗ ಪಟ್ಟಣದಲ್ಲಿ ಜಂಟಿ ಸಭೆಗಳನ್ನು ನಡೆಸಿ ರೈತರಿಗೆ, ಷೇರುದಾರರಿಗೆ ಮತ್ತು ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರಲ್ಲಿ ಮನವಿ ಮಾಡಿದರು.ಉಭಯ ಶಾಸಕರು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ದೊರಕುವ ತನಕ ಕಾರ್ಖಾನೆ ಆವರಣವನ್ನು ಯಾವುದೇ ಸಿಬ್ಬಂದಿ ಪ್ರವೇಶಿಸುವಂತಿಲ್ಲ. ಜು.11ರ ತನಕ ಕಾರ್ಖಾನೆ ಮುಚ್ಚಿರಬೇಕು ಎಂಬ ಷರತ್ತಿನ ಮೇಲೆ ರೈತರು ಧರಣಿ ಅಂತ್ಯಗೊಳಿಸಿದರು. ಈ ಮೊದಲು ಜ.4 ರಂದು ಪ್ರತಿಭಟನೆ ನಡೆಸಿ 8ರ ವರೆಗೆ ಅವಕಾಶ ನೀಡಿದ್ದರು. ಬೆಳಿಗ್ಗೆಯಿಂದಲೇ ಕಾರ್ಖಾನೆಯ ಮುಂಭಾಗದಲ್ಲಿ ನೂರಾರು ಸಂಖ್ಯೆಯ ರೈತರು ಧರಣಿ ಆರಂಭಿಸಿದ್ದರು.ಡಿವೈಎಸ್‌ಪಿ ಎಂ.ಪಾಂಡುರಂಗಯ್ಯ, ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ರಾಮದುರ್ಗದ ಪಿಎಸ್‌ಐ ಸುನೀಲಕುಮಾರ ನಾಯಕ, ಕಟಕೋಳ ಪಿಎಸ್‌ಐ ಬಸವರಾಜ ಕೊಣ್ಣೂರ, ರಾಮದುರ್ಗ, ಕಟಕೋಳ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು.ಪ್ರತಿಭಟನೆಯಲ್ಲಿ ಬಾಗಲಕೋಟೆ ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಣ್ಣ ಕೋಮಾರ, ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ ಕರಿಗಾರ, ಜಿಲ್ಲಾ ಅಧ್ಯಕ್ಷ ಸದಾಶಿವ ಮಾತನವರ, ಸದಾಶಿವ ಉತ್ತೂರ, ಈರಪ್ಪ ಹಂಚಿನಾಳ, ಶಂಕರ ಕಳ್ಳಿ, ಲಾಲಪ್ಪ ನಾಯಕ, ಗುರು ಲಮಾಣಿ ಇತರರು ಪಾಲ್ಗೊಂಡಿದ್ದರು.