ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿನೀರು ಹಾಗೂ ಸಿಬ್ಬಂದಿ ಕೊರತೆಯಿಂದ ಹಾಗೂ ನಿರ್ವಹಣೆ ಇಲ್ಲದೇ ಮೂರುವರೆ ದಶಕಗಳ ಹಿಂದಿನ ರೇಷ್ಮೆ ಬೆಳೆಗಾರರ ಸಮುದಾಯದ ಅಭಿವೃದ್ಧಿ ಕೇಂದ್ರ ಪಾಳು ಬಿದ್ದಿದ್ದು, ರೇಷ್ಮೆ ಬೆಳೆಯುವ ಎಸ್ಸಿ, ಎಸ್ಟಿ ರೈತರ ಆಸೆಗೆ ಎಳ್ಳುನೀರು ಬಿಟ್ಟಂತಾಗಿದೆ.1985ರಲ್ಲಿ ರೇಷ್ಮೆ ಇಲಾಖೆಯಿಂದ 5 ಎಕರೆ ಜಮೀನಿನಲ್ಲಿ ₹10 ಲಕ್ಷ ವೆಚ್ಚದಲ್ಲಿ 39 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ರೇಷ್ಮೆ ಬೆಳೆಯುವ ರೈತರಿಗೆ ರೇಷ್ಮೆ ಹುಳು ಸಾಕಲು, ಗೂಡು ಕಟ್ಟಲು, ರೇಷ್ಮೆ ತಯಾರಿಸುವ ಉದ್ದೇಶದಿಂದ ನಿರ್ಮಿಸಿದ ರೇಷ್ಮೆ ಬೆಳೆಗಾರರ ಸಮುದಾಯದ ಅಭಿವೃದ್ಧಿ ಕೇಂದ್ರ ಬಳಕೆ ಮಾಡಿಕೊಳ್ಳದೇ ಉಪಯೋಗಕ್ಕೆ ಬಾರದಂತಾಗಿದೆ. ಕಳೆದ ಒಂದೂವರೆ ದಶಕಗಳಿಂದ ನಿರ್ವಹಣೆಯೇ ಇಲ್ಲದೇ ಪಾಳು ಬಿದ್ದಿದೆ.ರೇಷ್ಮೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ 1985ರಲ್ಲಿ ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಷ್ಟಿತ್ತು. ಅಂದು ಈ ಯೋಜನೆ ಆರಂಭಗೊಳಿಸಿದ್ದಾರೆ. ಅಂದು ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿವೃತ್ತಿ ಹೊಂದಿದ ಮೇಲೆ ಪುನಃ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳದೇ ಹಾಗೂ ನೀರಿನ ಕೊರತೆಯಿಂದ ಮಾವಿನಹಳ್ಳಿ ಗ್ರಾಮದಲ್ಲಿರುವ ರೇಷ್ಮೆ ಸಮುದಾಯ ಅಭಿವೃದ್ಧಿ ಕೇಂದ್ರ ಹಾಳು ಬಿದ್ದಿದೆ.ಅಂದು 50 ಜನ ರೈತರಿಂದ ಬಳಕೆ, ಇಂದು ದುಸ್ಥಿತಿಯಲ್ಲಿ:
ಮಾವಿನಹಳ್ಳಿಯಲ್ಲಿ 50 ಜನ ರೈತರು ಅಂದು ರೇಷ್ಮೆ ಬೆಳೆಯುತ್ತಿದ್ದರು. ಸರ್ಕಾರಿ ಸೌಲಭ್ಯ ಸರಿಯಾಗಿ ದೊರೆಯದ ಕಾರಣ ಇಂದು ಕೇವಲ ನಾಲ್ಕೈದು ಜನ ರೈತರು ಮಾತ್ರ ರೇಷ್ಮೆ ಬೆಳೆಯುತ್ತಿದ್ದರು. ಸಿಬ್ಬಂದಿ ಕೊರತೆಯಿಂದ ಸರ್ಕಾರದ ಯೋಜನೆಗಳು ಸರಿಯಾಗಿ ತಲುಪದ ಕಾರಣ ರೇಷ್ಮೆ ಬೆಳೆಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.ಸಮುದಾಯ ಅಭಿವೃದ್ಧಿ ಕೇಂದ್ರ ಕಟ್ಟಡದಲ್ಲಿ ರೇಷ್ಮೆಯ ದೊಡ್ಡಹುಳ ಹಾಗೂ ಸಣ್ಣಹುಳುಗಳನ್ನು ಸಾಕಾಣಿಕೆ ಮಾಡುವುದು ಹಾಗೂ ರೇಷ್ಮೆ ತಪ್ಪಲು ತಂದು ಹುಳುಗಳನ್ನು ಬಿಟ್ಟು ರೇಷ್ಮೆ ಗೂಡು ತಯಾರಿಸುವುದು, ರೇಷ್ಮೆಹುಳು ಮೊಟ್ಟೆ ಸಂಗ್ರಹಣೆ ಮಾಡುವ ಕೆಲಸ ನಡೆಯಬೇಕಿತ್ತು. ರೇಷ್ಮೆ ಬೆಳೆ ಬೆಳೆಯುವ ರೈತರು ಹೆಚ್ಚಾಗಲಿ. ಅದರಲ್ಲಿ ಎಸ್ಸಿ, ಎಸ್ಟಿ ಸಮುದಾಯದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ ಕಟ್ಟಡ ಮಾತ್ರ ಇಂದು ದುಸ್ಥಿತಿಯಲ್ಲಿದೆ.ಬೋರ್‌ವೆಲ್‌ನಲ್ಲಿ ನೀರಿಲ್ಲವೆಂದು ಕೈಬಿಟ್ಟ ರೇಷ್ಮೆ ಸಸಿ ನರ್ಸರಿ!:ರೇಷ್ಮೆ ಇಲಾಖೆ ಹೆಸರಿನಲ್ಲಿರುವ ಜಮೀನಿನಲ್ಲಿ ರೇಷ್ಮೆ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಣೆ ಮಾಡಲು ರೇಷ್ಮೆ ಸಸಿ ನರ್ಸರಿ ಮಾಡಬೇಕೆಂಬ ಉದ್ದೇಶದಿಂದ ಕಳೆದ ವರ್ಷದ ಹಿಂದೆ ಬೋರ್‌ವೆಲ್ ಕೊರೆಸಿದ್ದರೂ ನೀರು ಬಾರದೇ ಇರುವುದರಿಂದ ನರ್ಸರಿ ಮಾಡುವುದು ಕೈಬಿಡಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ನಾಡಿನಲ್ಲಿ ನೀರಿನ ಕೊರತೆಯಿಂದ ರೇಷ್ಮೆ ಬೆಳೆ ಅಭಿವೃದ್ಧಿಪಡಿಸಬೇಕಾದ ಇಲಾಖೆ ನೀರಿನ ಕೊರತೆ ನೆಪದಲ್ಲಿ ಕಟ್ಟಡ ಹಾಗೂ ಜಮೀನು ಹಾಳುಗೆಡವಿರುವುದು ಯೋಜನೆ ಹಿನ್ನಡೆಗೆ ಕಾರಣವಾಗಿದೆ.
10 ರಿಂದ 20 ಕಿಮೀ ಅಂತರದಿಂದ ರೈತರು ಜಮೀನುಗಳಿಗೆ ಪೈಪ್‌ಲೈನ್ ಮೂಲಕ ನೀರು ತರುತ್ತಿದ್ದಾರೆ. ಆದರೆ, ಇಲಾಖೆಗೆ ಬೋರ್ವೆಲ್ ಮೂಲಕ ನೀರು ಬಿಳಲಿಲ್ಲ ಎಂಬ ನೆಪವೊಡ್ಡಿ ತಾಲೂಕಿನಲ್ಲಿ ರೇಷ್ಮೆ ಬೆಳೆ ಹೆಚ್ಚಳಕ್ಕೆ ಪ್ರೋತ್ಸಾಹಿಸದೇ ಇರುವುದು ರೇಷ್ಮೆ ಬೆಳೆಗಾರರ ಕೆಂಗಣ್ಣಿಗೆ ಗುರಿಯಾಗಿದೆ.120 ಗ್ರಾಮಗಳಲ್ಲಿ ರೇಷ್ಮೆಬೆಳೆ ಹೆಚ್ಚಿಸಲು ಓರ್ವ ಅಧಿಕಾರಿ ಸಾಕೆ?ತಾಲೂಕಿನಲ್ಲಿ ಕೇವಲ 250 ಎಕರೆ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಸರ್ಕಾರಿ ಸೌಲಭ್ಯ ದೊರಕಿಸಿಕೊಡಬೇಕಾದರೆ ಸಿಬ್ಬಂದಿ, ಅಧಿಕಾರಿಗಳ ಕೊರತೆ ಮಧ್ಯೆ ರೇಷ್ಮೆ ಇಲಾಖೆ ನರಳುತ್ತಿದೆ. ಇಂಡಿ ರೇಷ್ಮೆ ಇಲಾಖೆಗೆ ಅಧಿಕಾರಿ, ಸಿಬ್ಬಂದಿ ಸೇರಿ 6 ಜನ ಸಿಬ್ಬಂದಿ ಇರಬೇಕು. ಆದರೆ, ಕೇವಲ ಒಬ್ಬ ಅಧಿಕಾರಿ ಇರುವುದರಿಂದ ಇಂಡಿ, ಚಡಚಣ ಸೇರಿ 120 ಗ್ರಾಮಗಳಲ್ಲಿ ರೇಷ್ಮೆ ಬೆಳೆ ಹೆಚ್ಚಿಸುವ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ರೇಷ್ಮೆ ಬೆಳೆಗಾರರದ್ದು.
ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಕೆಯಿಂದ 5 ಎಕರೆ ಜಮೀನು ಇದ್ದು, ಎಸ್ಸಿ, ಎಸ್ಟಿ ಸಮುದಾಯದ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಹುಳು ಸಾಕಲು, ಗೂಡು ತಯಾರಿಸಲು ಅನುಕೂಲವಾಗಲು ಸಮುದಾಯ ಅಭಿವೃದ್ದಿ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ಅಲ್ಲಿ ಕೆಲಸ ಮಾಡಲು ಸಾಧ್ಯವಾಗಿರುವುದಿಲ್ಲ. ನೀರು ಇದ್ದರೆ ರೇಷ್ಮೆ ಸಸಿ ಬೆಳೆಸುವ ನರ್ಸರಿ ಮಾಡುವ ಉದ್ದೇಶ ಹೊಂದಲಾಗಿದೆ. ಬೋರ್ವೆಲ್ ಕೊರೆಯಿಸಲಾಗಿದ್ದು, ನೀರು ಬಿದ್ದಿರುವುದಿಲ್ಲ. ಜಮೀನಿನಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು ಕೈಕೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.-ಅಶೋಕ ತೇಲಿ,
ವಿಸ್ತೀರ್ಣಾಧಿಕಾರಿ, ರೇಷ್ಮೆ ಇಲಾಖೆ, ಇಂಡಿ.