ಕೆರೆಗಳಿಗೆ ನೀರು ಹರಿಸಲು ಹಾಗೂ ಸಾಗುವಳಿ ಹಕ್ಕುಪತ್ರಕ್ಕೆ ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಕಳೆದ ೬೬ ದಿನಗಳಿಂದ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತಸಂಘದ ಹೋರಾಟವನ್ನು ಪಟ್ಟಣದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ಬುಧವಾರ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೆರೆಗಳಿಗೆ ನೀರು ಹರಿಸಲು ಹಾಗೂ ಸಾಗುವಳಿ ಹಕ್ಕುಪತ್ರಕ್ಕೆ ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಕಳೆದ ೬೬ ದಿನಗಳಿಂದ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತಸಂಘದ ಹೋರಾಟವನ್ನು ಪಟ್ಟಣದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ಬುಧವಾರ ಆರಂಭಿಸಿದ್ದಾರೆ.

ಪಟ್ಟಣದ ತಾಲೂಕು ಕಚೇರಿಯ ಪ್ರತಿಭಟನಾ ಸ್ಥಳದಿಂದ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹಾಗೂ ತಾಲೂಕು ರೈತಸಂಘದ ಅಧ್ಯಕ್ಷ ಶಿವಣ್ಣ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಹೊರಟು ರೈತಸಂಘದ ಕಾರ್ಯಕರ್ತರು ಪಟ್ಟಣದ ಶಾಸಕ ಕಚೇರಿ ಮುಂಭಾಗ ಜಮಾಯಿಸಿ, ಶಾಸಕರು ಹಾಗೂ ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಮೊಳಗಿಸಿದರು.

ಶಾಸಕರ ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಪ್ರತಿಭಟನಾಕಾರರನ್ನು ಕುರಿತು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರಾಜ್ಯ ರೈತಸಂಘದ ರಾಜ್ಯ ಸಮಿತಿ ತೀರ್ಮಾನದಂತೆ ಈ ಹೋರಾಟ ನಡೆಸಲಾಗುತ್ತಿದೆ ಎಂದರು.

ರೈತಸಂಘದ ಕಾರ್ಯಕರ್ತರು ಸಾಕಷ್ಟು ಕಾಲಾವಕಾಶ ನೀಡಿದರೂ ತಹಶೀಲ್ದಾರ್,ಜಿಲ್ಲಾಧಿಕಾರಿ ಹಾಗೂ ಶಾಸಕರು ಯಾವುದೇ ಸ್ಪಂದನೆ ನೀಡಿಲ್ಲ.ಶಾಸಕರೇ ತಾವೇ ಕೆರೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿ ತಿಂಗಳುಗಳೇ ಕಳೆದರೂ ಈವರೆಗೂ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ ಎಂದು ಕಿಡಿಕಾರಿದರು.

೬೬ ದಿನ ಕ್ಯಾರೇ ಎನ್ನುತ್ತಿಲ್ಲ:

ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ತಾಲೂಕು ಕಚೇರಿ ಎದುರು ಕಳೆದ ೬೬ ದಿನಗಳಿಂದಲೂ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸಿದರೂ ಅಧಿಕಾರಿಗಳು ನ್ಯಾಯ ಕೊಡಲಿಲ್ಲ.ಈಗ ಪ್ರಜಾಪ್ರಭುತ್ವದಲ್ಲಿ ಇದೇ ಮೊದಲು ಶಾಸಕರ ಕಚೇರಿ ಮುಂಭಾಗ ಧರಣಿ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ನಾಚಿಕೆಗೇಡು:

ಕಳೆದ ೬೬ ದಿನಗಳಿಂದ ಕೆರೆಗಳಿಗೆ ನೀರು ಹಾಗೂ ಸಾಗುವಳಿಗಾಗಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಇದು ಜನಪ್ರತಿನಿಧಿಗಳಿಗೆ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯ ಸಿಗುವ ತನಕ ಹೋರಾಟ ನಿಲ್ಲದು.ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಟದ ದಿಕ್ಕು ತಪ್ಪಿಸಲು ಯತ್ನಿಸಿದರೆ ಮಣಿಯುವುದಿಲ್ಲ.ಕೂಡಲೇ ತಹಶೀಲ್ದಾರ್ ಅವರು ಅರ್ಹ ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಪ್ರವೀಣ್, ಮಹದೇವಪ್ರಸಾದ್, ಕುಮಾರ್, ಮಹದೇವಸ್ವಾಮಿ, ಶಿವಕುಮಾರ್ ಸೇರಿ ರೈತರು, ಮಹಿಳಾ ಕಾರ್ಯಕರ್ತರು ಇದ್ದರು.