ಕೆಆರ್‌ಎಸ್‌ನಿಂದ ನೀರು ಬಿಟ್ಟಿದ್ದಕ್ಕೆಮಂಡ್ಯದಲ್ಲಿ ರೈತರ ಆಕ್ರೋಶ

| Published : Mar 10 2024, 01:34 AM IST

ಕೆಆರ್‌ಎಸ್‌ನಿಂದ ನೀರು ಬಿಟ್ಟಿದ್ದಕ್ಕೆಮಂಡ್ಯದಲ್ಲಿ ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ನೆಪ ಹೇಳಿ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣ: ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ನೆಪ ಹೇಳಿ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಇರುವಾಗ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ಸುಮಾರು 3 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಶನಿವಾರ ಮಧ್ಯಾಹ್ನದಿಂದ ಹರಿಸಲಾಗುತ್ತಿದೆ. ಈ ರೀತಿ ಎರಡನೇ ಶನಿವಾರ, ಭಾನುವಾರ, ರಜಾ ದಿನಗಳಂದು ಸದ್ದಿಲ್ಲದೆ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ರೈತರು ಸಿಟ್ಟು ಹೊರಹಾಕಿದ್ದಾರೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಸೇರಿ ಕಾವೇರಿ ನದಿಯಲ್ಲಿನ ಹೊರ ಹರಿವು ಶನಿವಾರ ಹೆಚ್ಚಳವಾಗಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ. ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 89.24 ಅಡಿ ಇದೆ. 15 ಟಿಎಂಸಿ ನೀರಿದ್ದು, 5 ಟಿಎಂಸಿ ಡೆಡ್‌ಸ್ಟೋರೆಜ್ ಬಿಟ್ಟು, ಉಳಿಕೆ 10 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಿದೆ.

ಈ ಬಗ್ಗೆ ನೀರಾವರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಕಾವೇರಿ ನದಿ ಮೂಲಕ ಬೆಂಗಳೂರು ಸೇರಿ ಇತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ನೀರು ಕಡಿಮೆ ಇರುವ ಕಾರಣ ಮೋಟಾರ್‌ಗಳಿಗೆ ನೀರು ಸಂಪರ್ಕ ಸಿಗದೆ ನದಿಯಿಂದ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನದಿ ಮೂಲಕವೇ ನೀರು ಹರಿಸಲಾಗುತ್ತಿದೆ ಎನ್ನುತ್ತಿದ್ದಾರೆ ಎಂದು ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ನದಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಒಳಹರಿವು 136 ಕ್ಯುಸೆಕ್ ಇತ್ತು. ಬೆಳಗ್ಗೆ 1,542 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ಆದರೆ, ಮಧ್ಯಾಹ್ನದ ನಂತರ 3 ಸಾವಿರ ಕ್ಯುಸೆಕ್‌ ಗೂ ಹೆಚ್ಚು ನೀರನ್ನು ಹೆಚ್ಚುವರಿಯಾಗಿ ಹೊರ ಬಿಡಲಾಗುತ್ತಿದೆ. ಒಟ್ಟು ಸೇರಿ ಹೊರ ಹರಿವು 4,930 ಕ್ಯುಸೆಕ್‌ಗೆ ಹೆಚ್ಚಳವಾಗಿದೆ.