ನಾರಾಯಣಪುರ ಬಲದಂಡೆ, ಎಡದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಹಾಪುರದ ಸಮೀಪದ ಭೀಮರಾಯನ ಗುಡಿಯ ಬಾಪುಗೌಡ ದರ್ಶನಾಪುರ ವೃತ್ತದಲ್ಲಿ ಕಳೆದೇಳು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ, ಬುಧವಾರ ವಾತಾವರಣ ಕಾವೇರಿಸಿತ್ತು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಾರಾಯಣಪುರ ಬಲದಂಡೆ, ಎಡದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಹಾಪುರದ ಸಮೀಪದ ಭೀಮರಾಯನ ಗುಡಿಯ ಬಾಪುಗೌಡ ದರ್ಶನಾಪುರ ವೃತ್ತದಲ್ಲಿ ಕಳೆದೇಳು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ, ಬುಧವಾರ ವಾತಾವರಣ ಕಾವೇರಿಸಿತ್ತು.ಬಲದಂಡೆ ಹಾಗೂ ಎಡದಂತೆ ಕಾಲುವೆಗಳಿಗೆ 2027ರ ಜನವರಿ 31ರವರೆಗೆ ನೀರು ಹರಿಸುವಂತೆ ಆಗ್ರಹಿಸುತ್ತಿರುವ ರೈತರು, ಬುಧವಾರ ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದರು. ಬೀದರ್-ಬೆಂಗಳೂರು ಹಾಗೂ ಶಹಾಪುರ-ವಿಜಯಪುರ ರಾಜ್ಯ ಹೆದ್ದಾರಿಯನ್ನು ಸುಮಾರು ಗಂಟೆಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಹಾಗೂ 5 ಸಾವಿರ ಎಕರೆ ಶೇಂಗಾ, ಸಜ್ಜೆ, ಜೋಳ, ತೊಗರಿ ಸೇರಿದಂತೆ ಒಟ್ಟು 80 ಸಾವಿರ ಎಕರೆ ಪ್ರದೇಶದ ಬೆಳೆಗಳು ನೀರಿಲ್ಲದೆ ಕಣ್ಣಮುಂದೆಯೇ ಒಣಗುತ್ತಿವೆ. ಅನ್ನದಾತರು ಆತ್ಮಹತ್ಯೆಯ ಹಾದಿ ಹಿಡಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಶರಣು ಮಂದರವಾಡ ಮಾತನಾಡಿ, ನವೆಂಬರ್ 12 ರಂದು ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ನಿರ್ಣಯವನ್ನು ತಕ್ಷಣವೇ ಪುನರ್ ಪರಿಶೀಲಿಸಿ, ೨೦೨೭ರ ಜನವರಿ 30 ರವರೆಗೆ ವಾರಬಂದಿ ಪದ್ಧತಿಯಂತೆ (೮ ದಿನ ಚಾಲು, ೮ ದಿನ ಬಂದ್) ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ ಈ ಹೋರಾಟವನ್ನು ಜಿಲ್ಲಾದ್ಯಂತ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಸಾಗರ ಮಾತನಾಡಿ, ನೀರಿನ ಅಭಾವದಿಂದ ರೈತರು ಎದುರಿಸುತ್ತಿರುವ ಭೀಕರ ಬರಗಾಲದ ಪರಿಸ್ಥಿತಿ ಹಾಗೂ ಬೆಳೆ ನಷ್ಟದ ಗಂಭೀರತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.ಮಾನವೀಯತೆ ಮೆರೆದ ರೈತರು: ಹೆದ್ದಾರಿ ತಡೆಯಿಂದಾಗಿ ವಿವಿಧ ಊರುಗಳಿಗೆ ತೆರಳಬೇಕಿದ್ದ ಅಪಾರ ಸಂಖ್ಯೆಯ ಪ್ರಯಾಣಿಕರು ಮತ್ತು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಪರದಾಡುವಂತಾಯಿತು. ಆದಾಗ್ಯೂ, ಪ್ರತಿಭಟನೆಯ ನಡುವೆಯೂ ಮಾನವೀಯತೆ ಮೆರೆದ ರೈತ ಮುಖಂಡರು ಹಾಗೂ ಪೊಲೀಸರು, ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ, ಆಂಬುಲೆನ್ಸ್ಗಳಿಗೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುತ್ತಿದ್ದ ಸಾರ್ವಜನಿಕರಿಗೆ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಪ್ರತಿಭಟನೆಯಲ್ಲಿ ರಾಯಚೂರು ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್, ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮಹೇಶ್ ಸುಬೇದಾರ್, ಜಿಲ್ಲಾ ಉಪಾಧ್ಯಕ್ಷ ಧರ್ಮಣ್ಣ ದೊರೆ, ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಕಣ್ಣ ಚಿಂತಿ, ಭೀಮರಾಯ ಪೂಜಾರಿ ಹಾಗೂ ಮುಖಂಡರಾದ ಬಸವರಾಜ ನಾಯಕ, ಮಹಾದೇವ ಬಿರಾದಾರ್, ಬಾಲಾಜಿ ಬಿರನೂರ್, ತಮ್ಮಣ್ಣ ಜಾಗಿರದಾರ್, ಭೀಮಣ್ಣ ಟಪ್ಪೆದಾರ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಡಿಸಿ ರಮೇಶ ಕೋಲಾರ ಅವರಿಗೆ ಮನವಿ ಸಲ್ಲಿಸಿ ತುರ್ತಾಗಿ ಕಾಲುವೆಗೆ ನೀರು ಹರಿಸುವಂತೆ ಮನವಿ ಮಾಡಿ ಆಗ್ರಹಿಸಿದರು.