ನಾಲೆ ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ರೈತರ ಪ್ರತಿಭಟನೆ

| Published : Aug 05 2025, 12:30 AM IST

ಸಾರಾಂಶ

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ.ನಾಲೆ ಮತ್ತು ಲೋಕಸರ ನಾಲೆ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೆಭಾಗದ ರೈತರಿಗೆ ನೀರನ್ನು ನೀಡದೆ ವಂಚಿಸಿದ್ದಾರೆ. ಮುಂಗಾರು ಆರಂಭವಾಗಿದೆ. ಕೃಷಿ ಚಟುವಟಿಕೆಗಳು ತೊಡಗಿಸಲು ನೀರಿಲ್ಲದೆ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿಶ್ವೇಶ್ವರಯ್ಯ ನಾಲೆ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಿ ಮಾನವ ಸರಪಳಿ ರಚಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಒಂದರಿಂದ ಆರನೇ ನಾಲೆ ಕೊನೇ ಭಾಗದ ರೈತರ ಜಮೀನುಗಳಿಗೆ ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಬೆಳೆಗಳಿಗೆ ನೀರು ಹರಿಸದೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯವಿಭಾಗದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ.ನಾಲೆ ಮತ್ತು ಲೋಕಸರ ನಾಲೆ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೆಭಾಗದ ರೈತರಿಗೆ ನೀರನ್ನು ನೀಡದೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಆರಂಭವಾಗಿದೆ. ಕೃಷಿ ಚಟುವಟಿಕೆಗಳು ತೊಡಗಿಸಲು ನೀರಿಲ್ಲದೆ ಪರದಾಡುವಂತಾಗಿದೆ. ಈಗಾಗಲೇ ಬೆಳದಿರುವ ಕಬ್ಬಿಗೆ ನೀರಿಲ್ಲದೆ ಒಣಗುತ್ತಿದೆ. ಕೂಡಲೇ ಅಧಿಕಾರಿಗಳು ನೀರು ಹರಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್ ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೊನೆ ಭಾಗಕ್ಕೆ ನೀರು ನೀಡದೆ ಕೃತಕ ಬರಗಾಲ ಸೃಷ್ಟಿಸಿದ್ದಾರೆ. ಕಾಮಗಾರಿ ಹೆಸರಿನಲ್ಲಿ ರೈತರಿಗೆ ನೀರು ನೀಡದೆ ಅನ್ಯಾಯವೇ ಎಗುತ್ತಿದ್ದಾರೆ ಕಿಡಿಕಾರಿದರು.

ಕೂಡಲೇ ವಿ.ಸಿ.ನಾಲೆ ಹಾಗೂ ಲೋಕಸರ ನಾಲೆಗಳ ಮೂಲಕ ಕೊನೆಭಾಗಕ್ಕೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ವೇಳೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ನೀರಾವರಿ ಇಲಾಖೆ ಅಭಿಯಂತರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ನೀರು ಹರಿಸಲು ಸಮ್ಮತಿಸಿದ ನಂತರ ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಾಪ್ಪಾಜಿ, ತಾಲೂಕು ಅಧ್ಯಕ್ಷ ವರಗೆರೆಹಳ್ಳಿ ಉಮೇಶ್, ಕಾರ್ಯದರ್ಶಿ ವಿನೋದ್ ಬಾಬು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಬನ್ನಹಳ್ಳಿ ರಮೇಶ್, ಮುಟ್ಟನಹಳ್ಳಿ ವೆಂಕಟೇಶ್, ಪಟೇಲ್ ಬೋರೇಗೌಡ, ದೇಶಿಗೌಡ, ಸಾವಿತ್ರಮ್ಮ, ನಾಗರತ್ನಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.