ಹಗಲಲ್ಲಿ 7 ಗಂಟೆ ವಿದ್ಯುತ್ ನೀಡುವಂತೆ ರೈತ ಸಂಘ ಆಗ್ರಹ
KannadaprabhaNewsNetwork | Published : Oct 20 2023, 01:00 AM IST
ಹಗಲಲ್ಲಿ 7 ಗಂಟೆ ವಿದ್ಯುತ್ ನೀಡುವಂತೆ ರೈತ ಸಂಘ ಆಗ್ರಹ
ಸಾರಾಂಶ
5 ಗಂಟೆ ವಿದ್ಯುತ್ ಸರಬರಾಜು ಆದೇಶ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಬೀದರ್: ಎರಡು ದಿನಗಳ ಹಿಂದೆ ಜಾರಿಗೆ ತಂದಂತಹ ಕೃಷಿ ಪಂಪಸೆಟ್‌ಗಳಿಗೆ ಕೇವಲ 5 ಗಂಟೆ ವಿದ್ಯುತ್ ಅದೂ ಮಧ್ಯರಾತ್ರಿಯಲ್ಲಿ ಸಮಯ ನಿಗದಿಪಡಿಸಿದ ಆದೇಶ ಹಿಂಪಡೆಯಬೇಕೆಂದು ರೈತ ಸಂಘ ಆಗ್ರಹಿಸಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ರೈತ ದೇವೋಭವ, ರೈತ ದೇಶದ ಬೆನ್ನೆಲುಬು, ರೈತ ಅನ್ನದಾತಾ ಎಂದು ಹೇಳುತ್ತಾ, ರೈತರಿಗೆ 7 ಗಂಟೆ ಬದಲಿಗೆ 5 ಗಂಟೆಗೆ ಕಡಿಮೆ ವಿದ್ಯುತ್ ಕೊಡುವುದು, ಅದಲ್ಲದೇ ಹಗಲಿನಲ್ಲಿ ವಿದ್ಯುತ್ ಕೊಡುವ ಬದಲು ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಕೊಡುವುದು ಇದು ರೈತರ ಮೇಲೆ ಮಾಡಿರುವ ಘೋರ ಅನ್ಯಾಯವಾಗಿದೆ ಎಂದರು. ಏಕೆಂದರೆ, ರೈತ ಅಥವಾ ಕೂಲಿ ಕಾರ್ಮಿಕ ರಾತ್ರಿ ಹೊತ್ತಲ್ಲಿ ಇರುವುದರಿಂದ, ಚಳಿ ಅಂಜಿಕೆ ಇರುವುದರಿಂದ ಯಾರೂ ಹೊಲ ಗದ್ದೆಗೆ ಹೋಗಲು ಹೆದರುತ್ತಾರೆ. ಅದಲ್ಲದೆ 5 ಗಂಟೆ ಮಾತ್ರ ವಿದ್ಯುತ್ ರೈತರಿಗೆ ಸಾಕಾಗುವುದಿಲ್ಲ. ಆದಕಾರಣ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಒಂದು ನ್ಯಾಯ, ರೈತರಿಗೆ ಇನ್ನೊಂದು ನ್ಯಾಯ, ಇದು ಸರಿಯಲ್ಲ. ಆದ ಕಾರಣ ಈಗ ಬದಲಾದ ಸಮಯ ನಿರ್ಧಾರದ ಆದೇಶ ರದ್ದುಪಡಿಸಿ, ಮೊದಲಿನಂತೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದಲ್ಲಿ ಬೀದರ್ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಹೋರಾಟ ಮಾಡಲಾಗುವುದು. ಮುಂದಾಗುವ ಅನಾಹುತಕ್ಕೆ ತಾವೆ ಜವಾಬ್ದಾರರೆಂದು ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಮುಖರಾದ ದಯಾನಂದ ಸ್ವಾಮಿ ಸಿರ್ಸಿ, ಶ್ರೀಮಂತ ಬಿರಾದಾರ, ಸುಭಾಷ ರಗಟೆ, ಬಾಬುರಾವ್ ಜೋಳದಾಬಕಾ, ಪ್ರವೀಣ ಕುಲಕರ್ಣಿ, ಬಸಪ್ಪ ಆಲೂರೆ, ರಿಯಾಜ ಪಟೇಲ್, ಪ್ರಕಾಶ ಬಾವಗೆ, ಶಿವಾನಂದ ಹುಡಗೆ, ಧೂಳಪ್ಪ ಆಣದೂರ, ಮನೋಹರ ಬಿರಾದಾರ, ಶ್ರೀನಿವಾಸ ರೆಡ್ಡಿ, ರಾಜಕುಮಾರ ಪಾಟೀಲ್, ಮಲ್ಲಿಕಾರ್ಜುನ ಚಕ್ಕಿ ಮತ್ತಿತರು ಇದ್ದರು.