ಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೂ ಮೊದಲೆ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮುಂದೆ ರೈತರು ಸೋಮವಾರ ಅಧಿಕ ಸಂಖ್ಯೆಯಲ್ಲಿ ನಿಂತಿದ್ದರಿಂದ ಪೊಲೀಸರು ಬಿಗಿ ಭದ್ರತೆ ಕಲ್ಪಿಸಬೇಕಾಯಿತು.ಕಳೆದ ವರ್ಷ ಗೊಬ್ಬರಕ್ಕಾಗಿ ಪರದಾಡಿದ ರೈತರು ಈಗ ಆ ವರ್ಷದ ಘಟನೆ ಮರುಕಳಿಸಬಾರದೆಂಬ ಕಾರಣಕ್ಕೆ ಮುಂಚಿತವಾಗಿಯೇ ಯೂರಿಯಾ, ಡಿಎಪಿಗಾಗಿ ಬೆಳಗ್ಗೆ 7 ಗಂಟೆಯಿಂದ ಸಂಘದ ಮುಂದೆ ಜಮಾಯಿಸಿದ್ದರು. ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ರೈತರು, ಆಧಾರ್ ಕಾರ್ಡ್ ಮತ್ತು ಕೃಷಿ ಚೀಟಿಯೊಂದಿಗೆ ಸರತಿಯಲ್ಲಿ ನಿಂತಿರುವುದು ಕಂಡು ಬಂತು.
ಎಕರೆ ಲೆಕ್ಕಾಚಾರ ಇಟ್ಟುಕೊಂಡು ಗೊಬ್ಬರ ನೀಡಬೇಡಿ, ನಮಗೆ ಅವಶ್ಯ ಇದ್ದಷ್ಟು ಗೊಬ್ಬರ ನೀಡಿ ಎಂದು ರೈತರು ಒತ್ತಾಯಿಸಿದ್ದಾರೆ. ಈ ಹಿಂದೆ ಗೊಬ್ಬರ ನೀಡಿ ಎಂದು ಧ್ವನಿ ಎತ್ತಿದ್ದರೂ ಸಮರ್ಪವಾಗಿ ಪೂರೈಸದ ಕಾರಣ ಖಾಸಗಿ ಅಂಗಡಿಗಳಲ್ಲಿ ಸಾಕಷ್ಟು ಹಣ ನೀಡಿ ಖರೀದಿಸಬೇಕಾಯಿತು. ಗೊಬ್ಬರಕ್ಕೆ ಖರ್ಚು ಮಾಡಿದಷ್ಟು ಬೆಳೆ ಬಾರದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಈಗ ಒಂದು ಚೀಲ ಗೊಬ್ಬರ ನೀಡಿದರೆ ಸಾಲದು, ನಮಗೆ 4ರಿಂದ 5 ಚೀಲ ಗೊಬ್ಬರ ನೀಡಬೇಕು ಎಂದು ಒತ್ತಾಯಿಸಿದರು.ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಿಸಲು 200 ಟನ್ ಯೂರಿಯಾ ಮತ್ತು 60 ಟನ್ ಕಾಂಪ್ಲೆಕ್ಸ್ ದಾಸ್ತಾನು ಇದೆ. ಆದರೆ, ಎಫ್ಐಡಿ ಪ್ರಕಾರ ಎಕರೆಗೆ ಒಂದು ಚೀಲ ಗೊಬ್ಬರ ನೀಡುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.