ಕೃಷಿಯಿಂದ ಲಾಭ ಕಾಣದೆ ರೈತರು ಜಮೀನು ಮಾರುತ್ತಿದ್ದಾರೆ: ಹಿ.ಚಿ.ಬೋರಲಿಂಗಯ್ಯ

| Published : Sep 22 2024, 02:01 AM IST

ಸಾರಾಂಶ

ಅಮೆರಿಕಾದಂತ ಮುಂದುವರೆದ ರಾಷ್ಟ್ರಗಳಲ್ಲಿ ಅಲ್ಲಿನ ರೈತರಿಗೆ ಅನುಕೂಲವಾಗುವಂತೆ ಕೃಷಿ ಸಂತೆಗಳನ್ನು ಆಯೋಜಿಸಲಾಗುತ್ತದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಈ ರೀತಿಯ ಬೆಳವಣಿಗೆ ಕಾಣಿಸುತ್ತಿಲ್ಲ. ಇಂತಹ ಸಮಕಾಲೀನ ವಿಷಯ ತೆಗೆದುಕೊಳ್ಳದೆ ಹಳೆಯ ಕಾಲದ ಜಾನಪದ ಗೀತೆ ಮತ್ತು ಜಾನಪದ ಕಥೆಯಲ್ಲಿಯೇ ಕಳೆದುಹೋಗಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿಯಿಂದ ಲಾಭ ಕಾಣಲಾಗದೆ ರೈತರು ಜಮೀನು ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ಹಂಪಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಭಾರತ ದರ್ಶಿತ್ವ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದಲ್ಲಿ ನಗರದ ರೋಟರಿ ಕೇಂದ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಎಂ.ಕನ್ನಿಕಾ ಅವರ ಶಿಕ್ಷಣ ಜಾನಪದ ಮತ್ತು ಪಾರಂಪರಿಕ ಜನಪದ ಆಚರಣೆಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಮೆರಿಕಾದಂತ ಮುಂದುವರೆದ ರಾಷ್ಟ್ರಗಳಲ್ಲಿ ಅಲ್ಲಿನ ರೈತರಿಗೆ ಅನುಕೂಲವಾಗುವಂತೆ ಕೃಷಿ ಸಂತೆಗಳನ್ನು ಆಯೋಜಿಸಲಾಗುತ್ತದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಈ ರೀತಿಯ ಬೆಳವಣಿಗೆ ಕಾಣಿಸುತ್ತಿಲ್ಲ. ಇಂತಹ ಸಮಕಾಲೀನ ವಿಷಯ ತೆಗೆದುಕೊಳ್ಳದೆ ಹಳೆಯ ಕಾಲದ ಜಾನಪದ ಗೀತೆ ಮತ್ತು ಜಾನಪದ ಕಥೆಯಲ್ಲಿಯೇ ಕಳೆದುಹೋಗಬಾರದು ಎಂದರು.

ಎಲ್ಲರೂ ಹಳ್ಳಿಗಳನ್ನು ಮರೆತು ನಗರದ ಜೀವನ ಇಷ್ಟಪಡುತ್ತಿದ್ದೇವೆ. ಈ ನಡುವೆ ರೈತರೂ ಕೂಡ ಕೃಷಿಗೆ ಉತ್ತಮ ಬೆಲೆ ಸಿಗದೆ ಜಮೀನು ಮಾರುವ ಸ್ಥಿತಿ ತಲುಪಿದ್ದಾರೆ. ಆದ್ದರಿಂದ ಜಾನಪದ ವಿದ್ವಾಂಸರು ನಾವು ಗ್ರಾಮೀಣ ಪ್ರದೇಶದಲ್ಲಿ ಎದುರಿಸಲಾಗುವ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ಇಲ್ಲವಾದರೆ ಸಂಶೋಧನೆಗೆ ಅರ್ಥ ಇರುವುದಿಲ್ಲ. ಜಾನಪದ ಮನೋರಂಜನೆಗೆ ಸೀಮಿತವಾಗಿದೆ. ಮನರಂಜನೆ ಮತ್ತು ಸಾಹಿತ್ಯ ಮೀರಿದ ಜೀವನ ದೃಷ್ಟಿಯನ್ನು ಒಳಗೊಂಡಿದೆ ಎಂದರು.

ಕನ್ನಿಕಾ ಅವರ ಈ ಕೃತಿಯು ಜಾನಪದ ಆಚರಣೆಗಳ ಮಹತ್ವ ಸಾರುವುದರ ಜೊತೆಗೆ, ಜಾನಪದ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವವರಿಗೆ ಪೂರಕ ವಿಷಯವನ್ನು ಒಳಗೊಂಡಿದೆ ಎಂದರು.

ನಾವು ಚರಿತ್ರೆ ಹೇಳುವಾಗ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹೇಳುತ್ತೇವೆ. ಆದರೆ ಹಂಪಿಯನ್ನು ನಿರ್ಮಿಸಿದ ಒಬ್ಬನೇ ಒಬ್ಬ ಶಿಲ್ಪಿಯ ಹೆಸರನ್ನೂ ಚರಿತ್ರೆಯಲ್ಲಿ ದಾಖಲಿಸಿಲ್ಲ. ಇಂತಹ ಆಚರಣೆ, ಸಂಪ್ರದಾಯ ಮತ್ತು ಮೂಢನಂಬಿಕೆ ಬದಿಗಿರಿಸಿ, ಸಂಶೋಧನೆ ನಡೆಸಿದಾಗ ಜನಸಾಮಾನ್ಯರ ಚರಿತ್ರೆ ಕಟ್ಟಬಹುದು ಎಂದರು.

ರಸ್ತೆ ಬದಿ ತಮಟೆ, ತಂಬೂರಿ ಬಾರಿಸುವ ಕಲಾವಿದರ ಗೋಷ್ಠಿಗೆ ಹೋಗುವವರು ಶಿಷ್ಟಕಾವ್ಯಗಳ ಗೋಷ್ಟಿ ಕೇಳಲು ಹೋಗಬಾರದು ಎನ್ನಲಾಗುತ್ತಿತ್ತು. ಆಂದರೆ ಜಾನಪದ ಕಲೆ ಹಿಂದಿನಿಂದಲೂ ಅವಗಣನೆಗೆ ಒಳಗಾಗಿದೆ. ಆದರೆ ಕವಿರಾಜ ಮಾರ್ಗಕಾರ ಮಾತ್ರ ಕುರಿತೋದದೆಯಂ ಕಾವ್ಯ ಪ್ರಯೋಗ ಮತಿಗಳ್ ಎಂದು ಹಿಂದೆಯೇ ಜಾನಪದರ ಕುರಿತು ಹೇಳಿದ್ದ. ಅನಂತರದ ಆಧುನಿಕ ಸಾಹಿತ್ಯದಲ್ಲಿ ಜಾನಪದ ಕಲೆ ಮತ್ತು ಸಾಹಿತ್ಯಕ್ಕೆ ಅಷ್ಟಾಗಿ ಮನ್ನಣೆ ಸಿಗಲಿಲ್ಲ. ಶರಣರು, ದಾಸರು, ಸೂಫಿಗಳು ಜನಭಾಷೆಯಲ್ಲಿ ತಮ್ಮ ಕಾವ್ಯ ಕಟ್ಟಿದ್ದಾಗಿ ಹೇಳಿದರು.

ಮೈಸೂರು ವಿವಿ ಹಲವು ವಿವಿಗಳಲ್ಲಿ ಜಾನಪದ ವಿಭಾಗ ಮಾಡಿದ್ದರೂ, ಪ್ರತ್ಯೇಕ ಜಾನಪದ ವಿವಿ ಸ್ಥಾಪಿಸಿದರೂ ಕೂಡ ಇತರೆ ಅಧ್ಯಯನ ವಿಷಯಗಳಂತೆ ಉದ್ಯೋಗ ಕೊಡುವ ವಿಭಾಗವಾಗಿ ಜಾನಪದವನ್ನು ಬೆಳೆಸಲು ಸರ್ಕಾರಗಳು ಶ್ರಮಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಲೇಖಕಿ ಡಾ.ಎಂ. ಕನ್ನಿಕಾ, ಮಹಾರಾಜ ಕಾಲೇಜು ಜಾನಪದ ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಆರ್. ಚೇತನಾ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಮುಖ್ಯ ಎಂಜಿನಿಯರ್ ಶಿವಪ್ರಸಾದ್, ಯುವ ಕವಿ ಆಲಗೂಡು ಲಿಂಗರಾಜು ಇದ್ದರು.